ಕಟ್ಟಡ ಕಾಮಗಾರಿ ಆರಂಭವಾಗಿ ಸುಮಾರು 16 ವರ್ಷಗಳ ಬಳಿಕ ಕೊಪ್ಪಳದ ರಂಗಮಂದಿರ ಉದ್ಘಾಟನೆಯಾಗಲಿದೆ. ನ. 30ರಂದು ಸಂಜೆ 5 ಗಂಟೆಗೆ ಲೋಕಾರ್ಪಣೆಯಾಗಲಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಕೊಪ್ಪಳ ನಗರದ ಸಾಂಸ್ಕೃತಿಕ ಚಟುವಟಿಕೆಗೆ ಹೊಸ ವೇದಿಕೆಯಾಗಬೇಕಿದ್ದ ಜಿಲ್ಲಾ ರಂಗಮಂದಿರಕ್ಕೆ ಕೊನೆಗೂ ಲೋಕಾರ್ಪಣೆ ಭಾಗ್ಯ ಒದಗಿಬಂದಿದೆ.

2011ರಲ್ಲಿ ಸುಮಾರು ₹ 3 ಕೋಟಿ ವೆಚ್ಚದಲ್ಲಿ ಚಾಲನೆ ನೀಡಲಾಗಿದ್ದ ಕಾಮಗಾರಿ ಕುಂಟುತ್ತಾ, ತೆವಳುತ್ತಾ ಸಾಗಿ ಬರೋಬ್ಬರಿ 16 ವರ್ಷಗಳ ಬಳಿಕ ಉದ್ಘಾಟನೆಗೆ ಸಿದ್ಧವಾಗಿದೆ. ನ. 30ರಂದು ಸಂಜೆ 5 ಗಂಟೆಗೆ ಲೋಕಾರ್ಪಣೆಯಾಗಲಿದೆ. ಕಲಾವಿದರು, ಸಾಹಿತಿಗಳು ಹಾಗೂ ಸಾಂಸ್ಕೃತಿಕ ಸಂಘಟನೆಗಳ ಬಹುದಿನಗಳ ಕನಸು ನನಸಾಗಲಿದೆ.

ವರ್ಷಗಳೇ ಉರುಳಿದವು: ಕೊಪ್ಪಳ ಜಿಲ್ಲೆಗೆ ಸುಸಜ್ಜಿತ ರಂಗಮಂದಿರದ ಅಗತ್ಯ ಮನಗಂಡು 2011ರಲ್ಲಿ ಯೋಜನೆ ರೂಪಿಸಲಾಗಿತ್ತು. ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಸರ್ವೆ ನಂಬರ್ 251/3ರಲ್ಲಿ ಸುಮಾರು ಎರಡು ಎಕರೆ ಜಮೀನು ಖರೀದಿಸಿ, ₹28.96 ಲಕ್ಷ ವೆಚ್ಚ ಮಾಡಲಾಗಿತ್ತು. ಅದೇ ವರ್ಷ ರಂಗಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಿಸುವ ಉದ್ದೇಶ ಹೊಂದಿದ್ದ ಯೋಜನೆ ಆರಂಭದಲ್ಲಿ ನಿರೀಕ್ಷಿತ ವೇಗ ಪಡೆದುಕೊಳ್ಳಲಿಲ್ಲ. ಅನುದಾನ, ಕಾಮಗಾರಿಯ ವಿವಿಧ ಹಂತಗಳಲ್ಲಿನ ತೊಡಕು ಸೇರಿದಂತೆ ಹಲವು ಕಾರಣಗಳಿಂದ ನಿರ್ಮಾಣ ಕಾರ್ಯ ವಿಳಂಬವಾಗುತ್ತಲೇ ಸಾಗಿತು. ಒಂದು ಹಂತದಲ್ಲಿ ಕಟ್ಟಡ ನಿರ್ಮಾಣಗೊಂಡರೂ ಒಳಾಂಗಣದ ಕೆಲಸಗಳು ಪೂರ್ಣಗೊಳ್ಳದೆ ಬಳಕೆಗೆ ಲಭ್ಯವಾಗಲಿಲ್ಲ. ಹೀಗಾಗಿ ವರ್ಷಗಳು ಉರುಳಿದರೂ ರಂಗಮಂದಿರ ಮಾತ್ರ ಕಲಾವಿದರಿಗೆ ಮುಕ್ತವಾಗಿರಲಿಲ್ಲ.

ವೇದಿಕೆಯ ಕೊರತೆ: ಕೊಪ್ಪಳ ಜಿಲ್ಲೆ ಸಾಹಿತ್ಯ, ಕಲೆ, ಸಂಸ್ಕೃತಿ, ಜನಪದ ಹಾಗೂ ನಾಟಕ ಕ್ಷೇತ್ರಗಳಲ್ಲಿ ತನ್ನದೇ ಆದ ಪರಂಪರೆ ಹೊಂದಿದೆ. ಆದರೆ, ದೊಡ್ಡ ಪ್ರಮಾಣದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಕ್ತ ಒಳಾಂಗಣ ಸಭಾಂಗಣದ ಕೊರತೆ ಹಲವು ವರ್ಷಗಳಿಂದ ಕಾಡುತ್ತಿತ್ತು. ನಾಟಕೋತ್ಸವ, ಸಂಗೀತ ಕಾರ್ಯಕ್ರಮ, ವಿಚಾರ ಸಂಕಿರಣ, ಸಾಹಿತ್ಯಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗೆ ಸೂಕ್ತ ಸ್ಥಳ ಹುಡುಕುವ ಅನಿವಾರ್ಯತೆ ಇತ್ತು.

ನಗರದ ಸಾಹಿತ್ಯ ಭವನ ಸೇರಿದಂತೆ ಲಭ್ಯವಿರುವ ಸಭಾಂಗಣಗಳಲ್ಲಿಯೇ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಕಾರ್ಯಕ್ರಮಗಳಿಗೆ ಸ್ಥಳಾವಕಾಶದ ಸಮಸ್ಯೆ ಎದುರಾಗುತ್ತಿತ್ತು. ಜಿಲ್ಲಾ ರಂಗಮಂದಿರ ನಿರ್ಮಾಣವಾದರೆ ಜಿಲ್ಲೆಯ ಕಲಾವಿದರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆ ದೊರೆಯಲಿದೆ ಎಂಬ ನಿರೀಕ್ಷೆ ಇತ್ತು.

ಗಮನಹರಿಸಲಿ: ಬರೋಬ್ಬರಿ 16 ವರ್ಷಗಳ ಬಳಿಕ ರಂಗಮಂದಿರ ಲೋಕಾರ್ಪಣೆಯಾಗುತ್ತಿರುವುದು ಸಾಂಸ್ಕೃತಿಕ ವಲಯದಲ್ಲಿ ಸಂತಸ ಮೂಡಿಸಿದೆ. ಆದರೆ, ಕಟ್ಟಡ ನಿರ್ಮಿಸಿ ಉದ್ಘಾಟನೆ ಮಾಡಿದರೆ ಮಾತ್ರ ಸಾಲದು. ರಂಗಮಂದಿರದಲ್ಲಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತೆ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮವಹಿಸಬೇಕಿದೆ.

ಸ್ಥಳೀಯ ನಾಟಕ ತಂಡಗಳಿಗೆ ಕೈಗೆಟುಕುವ ಬಾಡಿಗೆ, ಉತ್ತಮ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ, ಕಲಾವಿದರಿಗೆ ಅಗತ್ಯ ಸೌಲಭ್ಯ, ಸ್ವಚ್ಛತೆ ಹಾಗೂ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು. 2011ರಲ್ಲಿ ಆರಂಭವಾದ ರಂಗಮಂದಿರ ನಿರ್ಮಾಣದ ಕನಸು 16 ವರ್ಷಗಳ ಬಳಿಕ ನನಸಾಗುತ್ತಿದೆ. ಇಷ್ಟು ವರ್ಷಗಳ ವಿಳಂಬಕ್ಕೆ ತೆರೆ ಬಿದ್ದಿದ್ದು, ಇನ್ನು ಮುಂದೆ ಕೊಪ್ಪಳದ ರಂಗಮಂದಿರದಲ್ಲಿ ಕಲೆಯ ಕಲರವ ನಿರಂತರವಾಗಿ ಮೊಳಗಲಿ ಎಂಬುದು ಕಲಾಸಕ್ತರ ಆಶಯವಾಗಿದೆ.

ರಾಜಕೀಯ ಕಾರ್ಯಕ್ರಮಗಳಿರಲಿ ನಿಷೇಧ: ರಂಗಮಂದಿರವೇನೋ 16 ವರ್ಷಗಳ ಬಳಿ ಲೋಕಾರ್ಪಣೆಯಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಮಾತ್ರ ಸೀಮಿತ ಮಾಡಬೇಕು. ರಾಜಕೀಯ ಕಾರ್ಯಕ್ರಮಗಳಿಗೆ, ಮದುವೆಗಳಿಗೆ ನೀಡದಂತೆ ಕಟ್ಟುನಿಟ್ಟಿನ ಕ್ರಮವಾಗಬೇಕು.

ಕಲಾವಿದರಿಗೆ ಅನುಕೂಲ: ಕೊಪ್ಪಳ ರಂಗಮಂದಿರ ನಿರ್ಮಾಣ ಪೂರ್ಣಗೊಂಡಿದ್ದ, ಲೋಕಾರ್ಪಣೆ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ಕಲಾವಿದರಿಗೆ ಅನುಕೂಲವಾಗಲಿದೆ. ಸಾಂಸ್ಕಿತಕ ಕಾರ್ಯಕ್ರಮಗಳಿಗೂ ಅನುಕೂಲವಾಗಲಿದೆ. ಬಹುವರ್ಷಗಳ ಮಹತ್ವಾಕಾಂಕ್ಷಿ ಯೋಜನೆಯೊಂದು ಜಾರಿಯಾದ ಸಂತೋಷ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಈಗ ಇದ್ದ ಸಾಹಿತ್ಯಭವನದ ಜತೆಗೆ ಇನ್ಮುಂದೆ ರಂಗಮಂದಿರವೂ ಲಭ್ಯವಿರಲಿದೆ. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲವಾಗಲಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.