ಸಾರಾಂಶ
ಕೊಪ್ಪಳ: ತಾಲೂಕಿನ ಹಾಲವರ್ತಿಯಲ್ಲಿ ಬೆಳಕಿಗೆ ಬಂದಿದ್ದ ಅಸ್ಪೃಶ್ಯತೆ ಆಚರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಗುರುವಾರ ಅಧಿಕಾರಿಗಳ ನೇತೃತ್ವದಲ್ಲಿ ಸಂಧಾನ ಸಭೆ ನಡೆದು, ಪ್ರವೇಶ ನಿರಾಕರಿಸಿದ್ದ ಹೊಟೇಲ್‌ನಲ್ಲೇ ದಲಿತ ಯುವಕರ ಜೊತೆ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಮಂಡಕ್ಕಿ ಮಿರ್ಚಿ ಸೇವಿಸಿ ಪ್ರಕರಣ ತಿಳಿಗೊಳಿಸಿದರು.
ಬುಧವಾರ ಕ್ಷೌರ ಮಾಡಲು ನಿರಾಕರಿಸಿದ್ದ ಕ್ಷೌರದಂಗಡಿ ಮಾಲೀಕ ಅಂಜನಪ್ಪ ಹಡಪದ, ಕ್ಷೌರ ಮಾಡಲು ನಿರಾಕರಿಸಿದ ಯಂಕೋಬಾ ಹಡಪದ, ಹೊಟೇಲ್ ಮಾಲೀಕ ಸಂಜೀವಪ್ಪ ಗುಳದಳ್ಳಿ ಎಂಬವರನ್ನು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಈ ಬಗ್ಗೆ ತನಿಖೆ ನಡೆದಿದೆ.ಗ್ರಾಮಸ್ಥರು ಇನ್ನು ಮುಂದೆ ಇಂತಹ ಘಟನೆ ಜರುಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪರಿಸ್ಥಿತಿ ತಿಳಿಯಾಯಿತು. ಶಾಂತಿ ಸಭೆಯ ನಂತರ ದಲಿತರನ್ನು ಹೊಟೇಲ್‌ಗೆ ಕರೆದುಕೊಂಡು ಹೋಗಿ ಒಗ್ಗರಣಿ-ಮಿರ್ಚಿ ತಿನ್ನಿಸಲಾಯಿತು. ಗ್ರಾಮದಲ್ಲಿಯ ದೇವಸ್ಥಾನಕ್ಕೂ ಪ್ರವೇಶ ಮಾಡಿಸಲಾಯಿತು. ಸದ್ಯಕ್ಕೆ ಹಾಲವರ್ತಿ ಗ್ರಾಮದಲ್ಲಿಯ ಅಸ್ಪೃಶ್ಯತೆ ಪ್ರಕರಣ ಸುಖಾಂತ್ಯ ಕಂಡಿದೆ.
ಹಾಲವರ್ತಿಯಲ್ಲಿ ದಲಿತರಿಗೆ ಕ್ಷೌರಕ್ಕೆ ನಿರಾಕರಣೆ, ಹೊಟೇಲ್ ತಿಂಡಿ ನೀಡದೇ ಇರುವುದು, ದೇವಸ್ಥಾನಗಳಿಗೆ ಪ್ರವೇಶವಿಲ್ಲ, ಕೆರೆ ನೀರಿಗೆ ದಲಿತರನ್ನು ಬಿಡುತ್ತಿಲ್ಲ ಎನ್ನುವುದು ಸೇರಿದಂತೆ ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯ ನಂತರ ಸಂಧಾನ ಸಭೆ ನಡೆಸಿ ತಿಂಡಿ ನೀಡಲು ನಿರಾಕರಿಸಿದ ಹೊಟೇಲ್‌ನಲ್ಲೇ ದಲಿತರಿಗೆ ತಿಂಡಿ ತಿನ್ನಿಸಿ ಸಮಾನತೆ ಮೆರೆಯಲಾಯಿತು.ಸಂವಿಧಾನ ಪೀಠಿಕೆ ಬೋಧನೆ: ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಅಧಿಕಾರಿಗಳು ಗ್ರಾಪಂ ಕಾರ್ಯಾಲಯದ ಮುಂಭಾಗ ಶಾಂತಿ ಸಭೆ ನಡೆಸಲಾಯಿತು. ಇಂಥ ಘಟನೆ ಮರಕಳುಹಿಸಬಾರದು ಎಂದು ಖಡಕ್ ಸೂಚನೆ ನೀಡಲಾಯಿತು. ಬಳಿಕ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು, ನಾವೆಲ್ಲರೂ ಒಂದಾಗಿದ್ದೇವೆ. ನಾವೆಲ್ಲ ದಲಿತರ ಕುಟುಂಬದೊಂದಿಗೆ ಇದ್ದೇವೆ. ಇಂಥ ಪ್ರಕರಣಗಳು ನಮ್ಮ ಗಮನಕ್ಕೆ ಬಂದಿದ್ದರೆ ತಡೆಯುತ್ತಿದ್ದೆವು ಎಂದು ಹೇಳುತ್ತಿದ್ದಂತೆಯೇ, ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ದಲಿತರು, ಮತ್ತೆ ಇಂತಹ ಘಟನೆಗಳು ನಡೆಯಬಾರದು ಎಂದು ಎಚ್ಚರಿಕೆ ನೀಡಿದರು.ಉಪವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಮಾತನಾಡಿ, ಎಲ್ಲರಿಗೂ ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕಿದೆ. ಈ ಘಟನೆಯ ನಂತರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಾಕಷ್ಟು ಅರಿವು ಮೂಡಿಸಲಾಗಿದೆ. ಜಿಲ್ಲೆಯಲ್ಲಿ ಇಂಥ ಘಟನೆಗಳು ನಡೆದರೆ ಅವುಗಳ ನಿಯಂತ್ರಣ ಮಾಡಲಾಗುವುದು ಎಂದರು.