ಈ ಭಾಗದ ಮೂಲ ನಿವಾಸಿಗಳೆಂದು ಕರೆಯಲ್ಪಡುವ ಕೊರಗ ಸಮುದಾಯ ತೀರಾ ಹಿಂದುಳಿದ ಮತ್ತು ವಿನಾಶದ ಅಂಚಿನಲ್ಲಿರುವ ಸಮುದಾಯವಾಗಿದ್ದು, ಕೊರಗ ಸಮುದಾಯದ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯೂ ಹಿಂದುಳಿದೆ. ಪುತ್ತೂರಿನಲ್ಲಿ ಕೊರಗ ಪ್ರಗತಿ ಪರಿಶೀಲನಾ ಸಭೆ ಮಾಡಬೇಕಾದ ಅಗತ್ಯವಿದ್ದು, ಇದಕ್ಕೆ ನಾನು ತಕ್ಷಣ ವ್ಯವಸ್ಥೆ ಮಾಡುತ್ತೇನೆ ಮತ್ತು ಕೊರಗರಿಗೆ ನೀಡಲಾದ ಜಾಗದ ಗಡಿ ಗುರುತು ಮಾಡಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಈ ಭಾಗದ ಮೂಲ ನಿವಾಸಿಗಳೆಂದು ಕರೆಯಲ್ಪಡುವ ಕೊರಗ ಸಮುದಾಯ ತೀರಾ ಹಿಂದುಳಿದ ಮತ್ತು ವಿನಾಶದ ಅಂಚಿನಲ್ಲಿರುವ ಸಮುದಾಯವಾಗಿದ್ದು, ಕೊರಗ ಸಮುದಾಯದ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯೂ ಹಿಂದುಳಿದೆ. ಪುತ್ತೂರಿನಲ್ಲಿ ಕೊರಗ ಪ್ರಗತಿ ಪರಿಶೀಲನಾ ಸಭೆ ಮಾಡಬೇಕಾದ ಅಗತ್ಯವಿದ್ದು, ಇದಕ್ಕೆ ನಾನು ತಕ್ಷಣ ವ್ಯವಸ್ಥೆ ಮಾಡುತ್ತೇನೆ ಮತ್ತು ಕೊರಗರಿಗೆ ನೀಡಲಾದ ಜಾಗದ ಗಡಿ ಗುರುತು ಮಾಡಿಸುವ ಮೂಲಕ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಕೊರಗ ಭವನದಲ್ಲಿ ಜಿಲ್ಲಾ ಕೊರಗ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಪುತ್ತೂರಿನಲ್ಲಿ ಕೊರಗ ಸಮುದಾಯದ ಹಲವು ಮಂದಿಗೆ ಜಾಗ ಇದ್ದರೂ ಅದಕ್ಕೆ ಸೂಕ್ತ ದಾಖಲೆ ಇಲ್ಲದ ಕಾರಣ ಸರಕಾರದಿಂದ ಸಿಗುವ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸರಕಾರದ ಸೌಲಭ್ಯಗಳು ಭೂಮಿ ಆಧರಿತವಾಗಿರುವ ಕಾರಣ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷರು ನನ್ನಲ್ಲಿ ವಿಷಯ ತಿಳಿಸಿದ್ದಾರೆ. ಎಲ್ಲೆಲ್ಲಿ ಸರಕಾರ ಈ ಸಮುದಾಯಕ್ಕೆ ಜಾಗ ನೀಡಿದೆಯೋ ಅದನ್ನು ಗಡಿ ಗುರುತು ಮಾಡಿ ಸೌಲಭ್ಯವನ್ನು ಪಡೆದುಕೊಳ್ಳುವಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.ಕಳೆದ ಬೆಳಗಾವಿ ಅಧಿವೇಶನಕ್ಕೆ ಕೊರಗರ ನಿಯೋಗವೊಂದು ನನ್ನನ್ನು ಭೇಟಿಯಾಗಿತ್ತು. ಅವರನ್ನು ಮುಖ್ಯಮಂತ್ರಿ ಬಳಿ ಕರೆದುಕೊಂಡು ಹೋಗಿ ಮಾತನಾಡಿಸಿದ್ದೇನೆ. ಭೂಮಿಯಿಲ್ಲದ ಕೊರಗರಿಗೆ ಭೂಮಿ ನೀಡುವಂತೆ ಮನವಿ ಮಾಡಿದ್ದೇನೆ. ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿರುವ ಕೊರಗ ಸಮುದಾಯಕ್ಕೆ ಖಂಡಿತವಾಗಿಯೂ ನ್ಯಾಯ ಕೊಡಿಸುವೆ. ಪುತ್ತೂರಿನಲ್ಲಿರುವ ಕೊರಗ ಭವನಕ್ಕೆ ಬೇಕಾದ ವ್ಯಸವ್ಥೆಗಳನ್ನು ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು. ಸರಕಾರ ಎಲ್ಲಿ ಜಾಗ ನೀಡಿದರೂ ಅದನ್ನು ಸ್ವೀಕರಿಸಬೇಕು, ರಸ್ತೆಯಿಲ್ಲ , ನೀರಿಲ್ಲ ಎಂದು ಬೇಡ ಎಂದು ಹೇಳಬೇಡಿ, ರಸ್ತೆ ಮತ್ತು ನೀರಿನ ವ್ಯವಸ್ಥೆ ಮಾಡುವುದು ಜನಪ್ರತಿನಿಧಿಗಳ ಜವಾಬ್ದಾರಿ ಎಂದ ಶಾಸಕರು ಕೊರಗರ ಕಾಲನಿ ಅಭಿವೃದ್ದಿಗೆ ಅನುದಾನವನ್ನು ಮೀಸಲಿಡುವುದಾಗಿ ತಿಳಿಸಿದರು.ಒಳಮೊಗ್ರು ಗ್ರಾಮದ ಬೊಳ್ಳಾಡಿಯಲ್ಲಿ ಕೊರಗ ಸಮುದಾಯದ ೬ ಮನೆಗಳಿದ್ದು ಇವರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಸಭೆಯಲ್ಲಿದ್ದ ವ್ಯಕ್ತಿಯೊಬ್ಬರು ಶಾಸಕರಿಗೆ ಮನವಿ ಮಾಡಿದರು. ತಕ್ಷಣವೇ ಒಳಮೊಗ್ರು ಪಿಡಿಒಗೆ ಕರೆ ಮಾಡಿದ ಶಾಸಕರು ಈ ಕುಟುಂಬಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೀರಿನ ವ್ಯವಸ್ಥೆ ಮಾಡಿದ ಬಳಿಕ ನನಗೆ ವರದಿ ನೀಡಬೇಕು ಎಂದು ಸೂಚನೆ ನೀಡಿದರು.
ಕೊರಗ ಸಂಘದ ಜಿಲ್ಲಾಧ್ಯಕ್ಷ ಸುಂದರ ಬೆಳುವಾಯಿ ಮಾತನಾಡಿ, ನಾವು ನಮ್ಮ ಸಂಕಷ್ಟವನ್ನು ಹೇಳಿಕೊಳ್ಳಲು, ಬೇಡಿಕೆಯನ್ನು ಸಲ್ಲಿಸಲು ಬೆಳಗಾವಿಗೆ ಹೋದಾಗ ಅಲ್ಲಿ ನಮ್ಮನ್ನು ಮಾತನಾಡಿಸಿ ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋದ ಜಿಲ್ಲೆಯ ಏಕೈಕ ಶಾಸಕ ಅಶೋಕ್ ರೈಗಳು, ಇವರಂಥ ಶಾಸಕರನ್ನು ನಾವು ಇಷ್ಟು ವರ್ಷದ ಹೋರಾಟದಲ್ಲಿ ನೋಡಿಲ್ಲ ಎಂದು ಜಿಲ್ಲಾ ಕೊರಗರ ಸಂಘದ ಅಧ್ಯಕ್ಷ ಸುಂದರ ಹೇಳಿದರು. ನಮಗೆ ನ್ಯಾಯ ಸಿಗುತ್ತದೋ ಇಲ್ಲವೋ ಅದು ಎರಡನೇ ವಿಚಾರ. ಆದರೆ ಸರಕಾರದ ಬಳಿ ನಮ್ಮ ಸಮಸ್ಯೆಯನ್ನು ಹೇಳಿದ್ದು ನಮಗೆ ಅತೀವ ಸಂತೋಷ ತಂದಿದೆ ಎಂದು ಹೇಳಿದ ಅವರು, ನಮಗೆ ಪುತ್ತೂರು ಶಾಸಕರಿಂದ ನ್ಯಾಯ ಸಿಗುತ್ತದೆ ಎಂಬ ಪೂರ್ಣ ಭರವಸೆ ಇದೆ. ಪ್ರಗತಿಪರಿಶೀಲನಾ ಸಭೆ ನಡೆಸಬೇಕು ಎಂದು ಮನವಿ ಮಾಡಿದ್ದೇವೆ ಅದಕ್ಕೆ ಶಾಸಕರು ಒಪ್ಪಿಗೆ ನೀಡಿದ್ದಾರೆ. ಜಾಗದ ಗಡಿ ಗುರುತು ಮತ್ತು ಕಾಲೊನಿ ಅಭಿವೃದ್ದಿಯ ಭರವಸೆ ನೀಡಿದ್ದಾರೆ. ಶಾಸಕರಾಗುವ ಮೊದಲೇ ಕೊರಗ ಸಮುದಾಯದ ಅನೇಕ ಮಂದಿಗೆ ಮನೆ ನಿರ್ಮಾಣಕ್ಕೆ ಸಹಾಯ ಮಾಡುವ ಮೂಲಕ ಶಾಸಕರು ತಾನು ಬಡವರ ಪರ ಎಂಬುದನ್ನು ಜನತೆಗೆ ಸಾರಿ ಹೇಳಿದ್ದಾರೆ. ನಶಿಸಿ ಹೋಗುತ್ತಿರುವ ಕೊರಗರಿಗೆ ಜೀವ ತುಂಬುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಅಧಿಕಾರಿ ಸುನಿತಾ, ಪುತ್ತೂರು ತಾಲೂಕು ಅಧ್ಯಕ್ಷೆ ತನಿಯಾರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಉಪಸ್ಥಿತರಿದ್ದರು.