ಕೊರಗ ಸಮುದಾಯದ ಅನಾರೋಗ್ಯ ಮತ್ತು ಜನಸಂಖ್ಯೆ ಕುಸಿತವು ಬಹು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ತಿಳಿಯಲು ಸಮಗ್ರ ವೈದ್ಯಕೀಯ ಅಧ್ಯಯನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಹಿತ ಸಂಬಂಧಪಟ್ಟ ಇಲಾಖೆ ಸಚಿವರ, ಹಿರಿಯ ಅಧಿಕಾರಿಗಳ ಗಮನ

ಮಂಗಳೂರು: ಕೊರಗ ಸಮುದಾಯದ ಅನಾರೋಗ್ಯ ಮತ್ತು ಜನಸಂಖ್ಯೆ ಕುಸಿತವು ಬಹು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ಏನೆಂಬುದನ್ನು ತಿಳಿಯಲು ಸಮಗ್ರ ವೈದ್ಯಕೀಯ ಅಧ್ಯಯನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಹಿತ ಸಂಬಂಧಪಟ್ಟ ಇಲಾಖೆ ಸಚಿವರ, ಹಿರಿಯ ಅಧಿಕಾರಿಗಳ ಗಮನ ಸೆಳೆಯಲಾಗುವುದು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಲಭಿಸಿ 78 ವರ್ಷಗಳು ಕಳೆದರೂ ದಲಿತ ಸಮುದಾಯದ ಸ್ಥಿತಿ ಶೋಚನೀಯವಾಗಿದೆ. ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಶಿಕ್ಷಣ ಸಿಗದ ಕಾರಣ ಪೂರಕ ಮಾಹಿತಿ, ಅರಿವಿನ ಕೊರತೆ ಇದೆ. ಕಳೆದ ಮೂರು ದಿನಗಳಿಂದ ನಾನು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಅಹವಾಲು ಸ್ವೀಕರಿಸಿದ್ದೇನೆ. ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ಸಮಸ್ಯೆಗಳಿಗೆ ಪರಿಹಾರ ಸಿಗದಿರಲು ಮತ್ತು ಸರ್ಕಾರ ಯೋಜನೆಗಳನ್ನು ಸಕಾಲಕ್ಕೆ ಮಾಹಿತಿ ನೀಡದಿರಲು ಅಧಿಕಾರಿಗಳ ವೈಫಲ್ಯವೇ ಕಾರಣ ಎಂದರು.ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ 9 ಗ್ರಾಮಗಳಲ್ಲಿ ವಾಸಿಸುವ ಮಲೆಕುಡಿಯ ಸಮುದಾಯದ ಕುಟುಂಬಗಳಿಗೆ ಇನ್ನೂ ಸಂವಿಧಾನಬದ್ಧ ಮೂಲ ಸೌಕರ್ಯಗಳಾದ ರಸ್ತೆ, ವಿದ್ಯುತ್ ಸಂಪರ್ಕವಾಗದಿರುವ ಬಗ್ಗೆ ವಿಷಾದವಿದೆ. ಅಲ್ಲಿನ ಜನರು ಇನ್ನೂ ಕತ್ತಲೆಯಲ್ಲಿ ವಾಸಿಸುತ್ತಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸಚಿವರು, ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದ್ದೇನೆ ಎಂದು ಪಲ್ಲವಿ ತಿಳಿಸಿದರು.

ಆಧಾರ್ ಕಾರ್ಡ್, ರೇಶನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಿಗದಿರುವುದು, ಹಕ್ಕುಪತ್ರ ಇಲ್ಲದಿರುವುದು ಗಂಭೀರ ಪ್ರಮಾದವಾಗಿದೆ. ನಿಗಮದ ಅನುದಾನದಿಂದ ಮೂಲ ಸೌಕರ್ಯ ಕಲ್ಪಿಸಲು ಮತ್ತು ಶಿಕ್ಷಣ ಹಾಗೂ ಆರೋಗ್ಯದ ಕಡೆ ಹೆಚ್ಚಿನ ಕ್ರಮ ವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಪಲ್ಲವಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ದಲಿತ ಸಮುದಾಯದಿಂದ ಬಂದ ತನಗೆ ಈ ಜನರು ಅನುಭವಿಸುವ ಸಂಕಷ್ಟಗಳ ಅರಿವು ಇದೆ. ನಾನು ಈ ನಿಗಮದ ಪ್ರಥಮ ಅಧ್ಯಕ್ಷೆಯಾಗಿ ನೇಮಕಗೊಂಡಿರುವೆ. ತನ್ನ ಅಧಿಕಾರವಧಿ ಮುಗಿದ ಬಳಿಕವೂ ಸಮುದಾಯ ನೆನಪಿಸುವಂತಹ ಹೆಜ್ಜೆ ಗುರುತು ಹಾಕಬೇಕೆಂದಿದ್ದೇನೆ. ಅದಕ್ಕಾಗಿ ಕಾಲಮಿತಿಯೊಳಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಮೂರು ತಿಂಗಳಿಗೊಮ್ಮೆ ಅನುಪಾಲನಾ ವರದಿ ನೀಡಲು ಸೂಚಿಸಿದ್ದೇನೆ ಎಂದರು.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹೇಮಲತಾ, ನಿಗಮದ ಅಧಿಕಾರಿ ಆನಂದ ಕುಮಾರ್ ಏಕಲವ್ಯ ಇದ್ದರು.