ಕೊರಗ ಮಹಿಳೆಗೆ ಮೂರು ದಿನದೊಳಗೆ ನ್ಯಾಯ ಒದಗಿಸಬೇಕು: ಗಂಟಿಹೊಳೆ ಗಡುವು

| Published : Apr 22 2025, 01:49 AM IST

ಕೊರಗ ಮಹಿಳೆಗೆ ಮೂರು ದಿನದೊಳಗೆ ನ್ಯಾಯ ಒದಗಿಸಬೇಕು: ಗಂಟಿಹೊಳೆ ಗಡುವು
Share this Article
  • FB
  • TW
  • Linkdin
  • Email

ಸಾರಾಂಶ

ಕೊಲ್ಲೂರಿನಲ್ಲಿ ನ್ಯಾಯಾಲಯದ ಆದೇಶದ ನೆಪದಲ್ಲಿ, ಸಮಾಜದಲ್ಲಿ ಅತೀ ನಿರ್ಲಕ್ಷಿತ ಹಾಗೂ ಸೂಕ್ಷ್ಮ ಸಮುದಾಯವಾದ ಕೊರಗ ಕುಟುಂಬದ ಮಹಿಳೆಯೊಬ್ಬರು ಹತ್ತಾರು ವರ್ಷಗಳಿಂದ ವಾಸಿಸುತ್ತಿದ್ದ ಮನೆಯನ್ನು ಅಮಾನವೀಯ ರೀತಿಯಲ್ಲಿ ನಾಶ ಪಡಿಸಿರುವುದನ್ನು ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ತೀವ್ರವಾಗಿ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಂದೂರು

ಇಲ್ಲಿನ ಕೊಲ್ಲೂರಿನಲ್ಲಿ ನ್ಯಾಯಾಲಯದ ಆದೇಶದ ನೆಪದಲ್ಲಿ, ಸಮಾಜದಲ್ಲಿ ಅತೀ ನಿರ್ಲಕ್ಷಿತ ಹಾಗೂ ಸೂಕ್ಷ್ಮ ಸಮುದಾಯವಾದ ಕೊರಗ ಕುಟುಂಬದ ಮಹಿಳೆಯೊಬ್ಬರು ಹತ್ತಾರು ವರ್ಷಗಳಿಂದ ವಾಸಿಸುತ್ತಿದ್ದ ಮನೆಯನ್ನು ಅಮಾನವೀಯ ರೀತಿಯಲ್ಲಿ ನಾಶ ಪಡಿಸಿರುವುದನ್ನು ಬೈಂದೂರು ಶಾಸಕ ಗುರುರಾಜ್‌ ಗಂಟಿಹೊಳೆ ತೀವ್ರವಾಗಿ ಖಂಡಿಸಿದ್ದಾರೆ.ಈ ಮನೆ ಕೆಡಹುವ ಪ್ರಕ್ರಿಯೆಯಲ್ಲಿ ಪೊಲೀಸ್ ಇಲಾಖೆಯೂ ಸೇರಿದಂತೆ ಈ ಪ್ರಕರಣವು ಈ ಹಂತದ ವರೆಗೆ ಬೆಳೆಯುವುದಕ್ಕೆ ಜಿಲ್ಲಾಡಳಿತ ನಡೆದುಕೊಂಡ ರೀತಿ ತೀರಾ ಖಂಡನೀಯ. ಹಲವು ವರ್ಷಗಳಿಂದ ಆ ಕುಟುಂಬವು ವಿವಾದಿತ ಜಮೀನಿನಲ್ಲಿ ವಾಸ್ತವ್ಯವಿದ್ದರೂ, ಆ ಕುಟುಂಬಕ್ಕೆ ಪರ್ಯಾಯ ನ್ಯಾಯ ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ವಿಫಲವಾಗಿವೆ. ಮಾನವೀಯತೆ ಇಲ್ಲದಂತೆ ಇಡೀ ಸಮಾಜ ತಲೆ ತಗ್ಗಿಸುವ ಈ ಕೃತ್ಯವನ್ನು ನಡೆಸಲಾಗಿದ್ದು, ಇದಕ್ಕೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆ ಎಂದು ಶಾಸಕರು ಸ್ಥಳಕ್ಕೆ ಭೇಟಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೊರಗ ಸಮುದಾಯವು ಹಲವು ದಶಕಗಳಿಂದ ಅತ್ಯಂತ ನಿರ್ಲಕ್ಷ್ಯಿತ ಹಾಗೂ ದಿನದಿಂದ ದಿನಕ್ಕೆ ನಶಿಸುತ್ತಿರುವ ಜನಾಂಗವಾಗಿದ್ದು, ಪ್ರತಿ ಕುಟುಂಬದ ಪ್ರತಿಯೊಂದು ಹಂತದ ಕಾಳಜಿ ವಹಿಸಿ ಅವರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತದ್ದು. ಆದರೆ ಎಲ್ಲರ ಕಣ್ಣೆದುರಿಗೆ ಇಂತಹ ಘಟನೆ ನಡೆಯುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಹಾಗಾಗಿ ನೊಂದ ಕುಟುಂಬಕ್ಕೆ ಮೂರು ದಿನಗಳ ಒಳಗೆ ಪರಿಹಾರ ನೀಡಬೇಕು ಹಾಗೂ ಸೂಕ್ತವಾದ ಜಾಗ ಮಂಜೂರು ಮಾಡಿ ಗೌರವಯುತವಾದ ಜೀವನ ಕಟ್ಟಿಕೊಳ್ಳಲುಬೇಕಾದ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಇಲ್ಲವಾದರೆ ಬೇಡಿಕೆ ಈಡೇರುವ ವರೆಗೆ ನೊಂದ ಕೊರಗ ಕುಟುಂಬದ ಬಂಧುಗಳೊಂದಿಗೆ ಧರಣಿ ನಡೆಸುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.