ಕೋರೆಗಾಂವ್ ದಿನಾಚರಣೆ ದಲಿತರ ಆತ್ಮಾಭಿಮಾನದ ಪ್ರತೀಕ: ಕೋಕಿಲ ಅರುಣ್ ಕುಮಾರ್

| Published : Jan 02 2025, 12:30 AM IST

ಕೋರೆಗಾಂವ್ ದಿನಾಚರಣೆ ದಲಿತರ ಆತ್ಮಾಭಿಮಾನದ ಪ್ರತೀಕ: ಕೋಕಿಲ ಅರುಣ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕೋರೆಂಗಾವ್ ಎಂಬಲ್ಲಿ ನಡೆದ ಮನುವಾದಿ ಪೇಶ್ವೆಯ 2ನೇ ಬಾಜಿರಾಯರ ಅಟ್ಟಹಾಸವನ್ನು ಮೆಟ್ಟಿನಿಂತು ಸಿದ್ಧನಾಯಕ್ ನಾಯಕತ್ವದಲ್ಲಿ ಸುಮಾರು 500 ಜನರ ಮಹರ್ ಸೈನಿಕರು ಸೇರಿ 2ನೇ ಬಾಜಿರಾಯನ ಸುಮಾರು 30 ಸಾವಿರ ಸೈನಿಕರನ್ನು ಹೊಡೆದುರುಳಿಸಿದ ಮಹಾ ಕದನವೇ ಅಸ್ಪೃಶ್ಯರ ಮೊದಲ ಸ್ವಾತಂತ್ರ್ಯ ಸಂಗ್ರಾಮ.

ಕನ್ನಡಪ್ರಭ ವಾರ್ತೆ ಮದ್ದೂರು

ದಲಿತರ ಆತ್ಮಾಭಿಮಾನದ ಪ್ರತೀಕ ಭೀಮಾ ಕೋರೆಗಾಂವ್ ದಿನಾಚರಣೆಯನ್ನು ಜ.1ರಂದು ಆಚರಿಸಲಾಗುತ್ತಿದೆ ಎಂದು ಪುರಸಭಾ ಅಧ್ಯಕ್ಷ ಕೋಕಿಲ ಅರುಣ್ ಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿಯಿಂದ ನಡೆದ ಅಸ್ಪೃಶ್ಯರ ವಿಜಯ ದಿನವಾದ ಕೋರೆಗಾಂವ್ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತದಲ್ಲಿ ಅಸ್ಪೃಶ್ಯರ ಸ್ವಾಭಿಮಾನ ಹೋರಾಟಗಳಲ್ಲಿ ಬಹುಮುಖ್ಯವಾಗಿ ಭೀಮನದಿ ತೀರದಲ್ಲಿ ನಡೆದ ಕೋರೆಂಗಾವ್ ಹೋರಾಟವಾಗಿದೆ ಎಂದರು.

ಕೋರೆಂಗಾವ್ ಎಂಬಲ್ಲಿ ನಡೆದ ಮನುವಾದಿ ಪೇಶ್ವೆಯ 2ನೇ ಬಾಜಿರಾಯರ ಅಟ್ಟಹಾಸವನ್ನು ಮೆಟ್ಟಿನಿಂತು ಸಿದ್ಧನಾಯಕ್ ನಾಯಕತ್ವದಲ್ಲಿ ಸುಮಾರು 500 ಜನರ ಮಹರ್ ಸೈನಿಕರು ಸೇರಿ 2ನೇ ಬಾಜಿರಾಯನ ಸುಮಾರು 30 ಸಾವಿರ ಸೈನಿಕರನ್ನು ಹೊಡೆದುರುಳಿಸಿದ ಮಹಾ ಕದನವೇ ಅಸ್ಪೃಶ್ಯರ ಮೊದಲ ಸ್ವಾತಂತ್ರ್ಯ ಸಂಗ್ರಾಮ. ಈ ದಿನವನ್ನು ಅಸ್ಪೃಶ್ಯರ ವಿಜಯ ದಿನ ಕೋರೆಂಗಾವ್ ವಿಜಯೋತ್ಸವ ಎಂದು ಆಚರಣೆ ಮಾಡುತ್ತ ಬರಲಾಗಿದೆ ಎಂದರು.

ಇತಿಹಾಸದಲ್ಲಿ ಮುಚ್ಚಿ ಹೋಗಿದ್ದ ಈ ಸತ್ಯ ಸಂಗತಿಯನ್ನು ಅಧ್ಯಯನ ಮಾಡಿ ಹೊರ ತೆಗೆದು ಎಲ್ಲರಿಗೂ ತಿಳಿಯುವಂತೆ ಮಾಡಿದ್ದು ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ಅವರು. ಆದ್ದರಿಂದ ಜ.1ರಂದು ಎಲ್ಲಾ ಅಸ್ಪೃಶ್ಯರು ಕೋರೆಗಾಂವ್ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.

ರಾಜ್ಯ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಗೌರವಾಧ್ಯಕ್ಷ ಅಂದಾನಿ ಸೋಮನಹಳ್ಳಿ ಮಾತನಾಡಿ, ದೇಶದಲ್ಲಿ ಅಂದಿನ ಕಾಲದಲ್ಲಿ ಬ್ರಾಹ್ಮಣ ಶಾಯಿ ಹೊರತುಪಡಿಸಿ ಕ್ಷತ್ರಿಯರಿಗೆ ಹಾಗೂ ಇತರೆ ದಲಿತರು ಸೇರಿದಂತೆ ಹಲವು ಜಾತಿಗಳಿಗೆ ಆಸ್ತಿ ಹಕ್ಕು, ಆಯುಧ ಹಕ್ಕು, ವಿದ್ಯೆ ಕಲಿಯುವ ಹಕ್ಕು, ಸಮಾನತೆ ಹಕ್ಕುಗಳನ್ನು ನೀಡಿರಲಿಲ್ಲ. ಹೀಗಾಗಿ ಬ್ರಿಟಿಷರ ಕಾಲದಲ್ಲಿ ಅಸ್ಪೃಶ್ಯ ಜನರು ಸೈನಿಕರಾಗಿ ಸೇರಿ ಹೋರಾಟ ನಡೆಸಿದ ಫಲ. ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಮೂಲಕ ಇವತ್ತು ಎಲ್ಲಾ ವರ್ಗದಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಮಾನವಾದ ಹಕ್ಕು ದೊರೆಯಲು ಸಾಧ್ಯವಾಯಿತು ಎಂದರು.

ಇದಕ್ಕೂ ಮುನ್ನ ಅಸ್ಪೃಶ್ಯರ ವಿಜಯದಿನ ಅಂಗವಾಗಿ ತಾಲೂಕಿನ ಗಡಿಭಾಗ ನಿಡಘಟ್ಟದಿಂದ ನೂರಾರು ಸಂಖ್ಯೆಯಲ್ಲಿ ಸಮಿತಿ ಸದಸ್ಯರು ಬೈಕ್ ಜಾಥಾ ಮೂಲಕ ಘೋಷಣೆಗಳನ್ನು ಕೂಗುತ್ತಾ ಪುರಸಭೆ ಆವರಣದ ಅಂಬೇಡ್ಕರ್ ಪುತ್ಥಳಿಕೆಗೆ ಮಾಲಾರ್ಪಣೆ ಮಾಡಿ ನಂತರ ತಾಪಂ ಕಚೇರಿಗೆ ಆಗಮಿಸಿದರು.

ಇದೇ ವೇಳೆ ಹೆಬ್ಬೆಟ್ಟು ನಾಟಕವನ್ನು ಜಿಲ್ಲೆ ಹಾಗೂ ರಾಜ್ಯದಲ್ಲಿ ಹಲವು ಪ್ರದರ್ಶನ ನೀಡಿ ಜಾಗೃತಿ ಮೂಡಿಸುತ್ತಿರುವ ಮಾರಸಿಂಗನಹಳ್ಳಿ ಮಲ್ಲರಾಜು, ಗ್ರಾಪಂ ಅಧ್ಯಕ್ಷ ಪ್ರಕಾಶ್ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಸುರೇಶ್, ಹಾಲಿ ಅಧ್ಯಕ್ಷ ಕೋಕಿಲ ಅರುಣ್ ರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾಪಂ ಇಒ ರಾಮಲಿಂಗಯ್ಯ, ಉಪಾಧ್ಯಕ್ಷ ಶಿವು, ಎಂ.ಶಂಕರ್, ಸುಂದರೇಶ್, ದೊರೆಸ್ವಾಮಿ, ಕೃಷ್ಣ ಮೂರ್ತಿ, ಪುಟ್ಟಣ್ಣ, ಅಂಬರೀಶ್ ಇದ್ದರು.