ಕೋರೆಗಾಂವ್ ವಿಜಯ ಶೋಷಿತರ ಶೌರ್ಯದ ಸಂಕೇತ: ಡಾ.ಸುರೇಶ್ ಗೌತಮ್

| Published : Jan 03 2025, 12:30 AM IST

ಕೋರೆಗಾಂವ್ ವಿಜಯ ಶೋಷಿತರ ಶೌರ್ಯದ ಸಂಕೇತ: ಡಾ.ಸುರೇಶ್ ಗೌತಮ್
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಮಹಾರಾಷ್ಟ್ರದ ಕೋರೆಗಾಂವ್ ನಲ್ಲಿ ಮಹರ್ ಜನಾಂಗದವರು ಸಮಾಜಿಕ ಸಮಾನತೆ, ನ್ಯಾಯಕ್ಕಾಗಿ ಸಹಸ್ರಾರು ಪೇಶ್ವೆ ಸೈನಿಕರ ವಿರುದ್ಧ ಹೋರಾಡಿ ಗಳಿಸಿದ ಜಯ ಶೋಷಿತ ಸಮುದಾಯದ ಶೌರ್ಯದ ಸಂಕೇತ ಎಂದು ಪ್ರಾಧ್ಯಾಪಕ ಡಾ.ಸುರೇಶ್ ಗೌತಮ್ ಹೇಳಿದರು.

ಬಹುಜನ ಸಮಾಜ ಪಕ್ಷ , ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಕೋರೆಗಾಂವ್ ವಿಜಯೋತ್ಸವ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಮಹಾರಾಷ್ಟ್ರದ ಕೋರೆಗಾಂವ್ ನಲ್ಲಿ ಮಹರ್ ಜನಾಂಗದವರು ಸಮಾಜಿಕ ಸಮಾನತೆ, ನ್ಯಾಯಕ್ಕಾಗಿ ಸಹಸ್ರಾರು ಪೇಶ್ವೆ ಸೈನಿಕರ ವಿರುದ್ಧ ಹೋರಾಡಿ ಗಳಿಸಿದ ಜಯ ಶೋಷಿತ ಸಮುದಾಯದ ಶೌರ್ಯದ ಸಂಕೇತ ಎಂದು ಪ್ರಾಧ್ಯಾಪಕ ಡಾ.ಸುರೇಶ್ ಗೌತಮ್ ಹೇಳಿದರು.

ಪಟ್ಟಣದಲ್ಲಿ ಬಹುಜನ ಸಮಾಜ ಪಕ್ಷ ಹಾಗೂ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಕೋರೆಗಾಂವ್ ವಿಜಯೋತ್ಸವದಲ್ಲಿ ಮಾತನಾಡಿದರು.1818 ರಲ್ಲಿ ಮರಾಠ ಪೇಶ್ವೆಗಳ ಆಳ್ವಿಕೆ ಅವಧಿಯಲ್ಲಿ ದಲಿತರು, ಶೋಷಿತ ಸಮುದಾಯದವರನ್ನು ಕೀಳಾಗಿ ಕಾಣುತ್ತಿದ್ದು, ನಿರಂತರ ಅವಹೇಳನ, ಅವಮಾನ ಮಾಡಲಾಗುತ್ತಿತ್ತು. ಜಾತೀಯತೆ, ಅಸ್ಪೃಷ್ಯತೆ, ಮೇಲು ಕೀಳು ಭಾವನೆ ಇತ್ತು. ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳಿಗಾಗಿ ಕೇವಲ 500 ಮಂದಿ ಮಹರ್ ಸೈನಿಕರು ಸುಮಾರು 28 ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿದರು.ಇದು ದೈರ್ಯ, ಸಾಹಸ, ಕೆಚ್ಚೆದೆಯ ಹೋರಾಟವಾಗಿತ್ತು.

ಇಂತಹ ಒಂದು ಇತಿಹಾಸ ಪ್ರಸಿದ್ಧ ಶೌರ್ಯ ಸಾಹಸದ ಯುದ್ಧವನ್ನು ಕೆಳವರ್ಗದವರೆಂಬ ಕಾರಣಕ್ಕೆ ಮುಚ್ಚಿಡ ಲಾಗಿತ್ತು. ಲಂಡನ್ನಿನ ಗ್ರಂಥಾಲಯದಲ್ಲಿದ್ದ ಸಂಗ್ರಹದಲ್ಲಿ ಅಂಬೇಡ್ಕರ್ ಇದನ್ನು ಬೆಳಕಿಗೆ ತಂದರು. ಕೋರೆಗಾಂವ್ ಯುದ್ಧದಲ್ಲಿ 500 ಸೈನಿಕರ ಪೈಕಿ ಸುಮಾರು 23 ಸೈನಿಕರು ಹುತಾತ್ಮರಾದರು. ಇವರ ಸವಿನೆನಪಿಗಾಗಿ ವಿಜಯ ಸ್ತಂಭ ಸ್ಥಾಪಿಸಲಾಗಿತ್ತು. ಇದು ಕೂಡ ಮುಚ್ಚಿಹೋಗಿತ್ತು. ಅಂಬೇಡ್ಕರ್ ಪ್ರತಿವರ್ಷ ಜ. 1 ರಂದು ಇಲ್ಲಿಗೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸುತ್ತಿದ್ದರು ಎಂದರು.

ಬಿಎಸ್ಪಿ ಮುಖಂಡ ಕೆ.ಎಂ.ಗೋಪಾಲ್ ಮಾತನಾಡಿ ಕೋರೆಗಾಂವ್ ವಿಜಯ,ಶೌರ್ಯ, ಸಾಹಸದ ಬಗ್ಗೆ ಜನರಿಗೆ ತಿಳಿಸುವ ಮರೆಮಾಚಿಸುವ ಕೆಲಸ ಪಟ್ಟಭದ್ರ ಹಿತಾಸಕ್ತಿಗಳು ಮಾಡಿವೆ.ಇತಿಹಾಸವನ್ನು ಮರೆಮಾಚಿಸುವ, ತಿರುಚುವ ಕೆಲಸ ಎಂದಿಗೂ ನಡೆಯುವುದಿಲ್ಲ. ಕೊರೆಗಾಂವ್ ಯುದ್ಧದ ಇತಿಹಾಸದ ಬಗ್ಗೆ ಜಗತ್ತಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.

ಪಟ್ಟಣದ ಬಸ್ ನಿಲ್ದಾಣದಿಂದ ಹೊರಟ ಮೆರವಣಿಗೆ ಭಾರತೀ ಬೀದಿ ಮೂಲಕ ಹಾದು ಹೋಗಿ ವೆಲ್ಕಂ ಗೇಟ್ ವರೆಗೂ ಸಾಗಿತು. ನಂತರ ಸಂತೇ ಮಾರುಕಟ್ಠೆ ಎದುರು ಸಮಾವೇಶಗೊಂಡು ಕಾರ್ಯಕರ್ತರು ವಿಜಯದ ಕೂಗಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಧ್ಯಾಹ್ನ ಅಡ್ಡಗೆದ್ದೆಯಿಂದ ಬೈಕ್ ಜಾಥಾ ನಡೆಯಿತು. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ದಸಸಂ ಜಿಲ್ಲಾ ಸಮಿತಿಯ ಕೆ.ಎಂ.ರಾಮಣ್ಣ ಕರುವಾನೆ, ಆನಂದ್ ಕೊಪ್ಪ, ಶೀಲಾ ಸುಖೇಶ್, ವಾಸಪ್ಪ ಕುಂಚೂರು, ಕಿರಣ್ ಕೊಪ್ಪ, ಹುಡಿಯ ಅರುಣ್, ಲಿಂಗಪ್ಪ ಮತ್ತಿತರರು ಇದ್ದರು.

2 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದಲ್ಲಿ ಬಿಎಸ್ಪಿ ದಸಸಂ ಆಯೋಜಿಸಿದ್ದ ಕೋರೆಗಾಂವ್ ವಿಜಯೋತ್ಸವದಲ್ಲಿ ಡಾ.ಸುರೇಶ್ ಗೌತಮ್ ಮಾತನಾಡಿದರು. ಕೆ.ಎಂ.ಗೋಪಾಲ್ ಮತ್ತಿತರರು ಇದ್ದರು.