ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲುಕೀಳುಗಳ ವಿರುದ್ಧ ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹಾರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟದ ಪ್ರತಿಫಲವೇ ಕೋರೆಗಾಂವ್ ವಿಜಯೋತ್ಸವವಾಗಿದೆ ಎಂದು ಜಿಲ್ಲಾ ಪರಿಷತ್ ಮಾಜಿ ಸದಸ್ಯ ಪೂರಿಗಾಲಿ ಜಯರಾಜು ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಜನಪರ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ನಡೆದ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಪುಷ್ಟನಮನ ಸಲ್ಲಿಸಿ ಮಾತನಾಡಿ, 30 ಸಾವಿರ ಪೇಶ್ವೆಗಳನ್ನು ಶೋಷಣೆಗಳ ವಿರುದ್ಧ ಸಿಡಿದೆದ್ದ 500 ಮಹಾರ್ ಸೈನಿಕರು ಸೋಲಿಸಿ ವಿಜಯ ಪತಾಕೆ ಹಾರಿಸಿದ ದಿನವನ್ನು ಕೋರೆಗಾಂವ್ ವಿಜಯೋತ್ಸವವಾಗಿ ದೇಶಾದ್ಯಂತ ಆಚರಣೆ ಮಾಡಲಾಗುತ್ತಿದೆ. ಇದು ದಲಿತರ ಸ್ವಾಭಿಮಾನದ ಸಂಕೇತವಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಚರಿತ್ರೆಯನ್ನು ಹೊರ ತೆಗೆದು ಪೇಶ್ವೆಗಳ ವಿರುದ್ಧ ಮಹಾರ್ ಸೈನಿಕರು ಸಹಸ ತ್ಯಾಗ ಬಲಿದಾನದಿಂದ ಯುದ್ಧವನ್ನು ಗೆದ್ದ ಸ್ಥಳಕ್ಕೆ ಭೇಟಿ ಮಾಡಿ ಪ್ರತಿವರ್ಷ ನಮನ ಸಲ್ಲಿಸಿ ಇತಿಹಾಸವನ್ನು ಹೊರ ಚೆಲ್ಲಿದ್ದಾರೆ. ಪ್ರಸಕ್ತ ವರ್ಷ ಶೋಕಚರಣೆ ಇರುವುದರಿಂದ ವಿಜಯೋತ್ಸವವನ್ನು ಸರಳದಿಂದ ಆಚರಿಸಲಾಗುತ್ತಿದೆ ಎಂದರು.ವಕೀಲ ಜಗದೀಶ್ ಮಾತನಾಡಿ, ಆಸ್ಪೃಶ್ಯತೆ ವಿರುದ್ಧ ಮಹಾರ್ ಸೈನಿಕರು ಸ್ವಾಭಿಮಾನದ ಸಂಕೇತವಾಗಿ ಬಾಜಿರಾಯವ ವಿರುದ್ಧ ಯುದ್ಧ ಸಾರಿದರು. ಯುದ್ಧದಲ್ಲಿ ಸುಮಾರು 25 ಸಾವಿರ ಸೈನಿಕರನ್ನು ಕೊಂದು ಮಹಾರ್ ಸೈನಿಕರು ಯುದ್ದವನ್ನು ಗೆಲ್ಲುತ್ತಾರೆ, ನಳಂದ ವಿಶ್ವವಿದ್ಯಾಲಯಕ್ಕೆ ಬೆಂಕಿ ಇಟ್ಟು ಇತಿಹಾಸವನ್ನು ನಾಶ ಪಡಿಸುವ ಘಟನೆ ನಡೆಯುತ್ತದೆ. ಆದರೆ, ಲಂಡನ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಇತಿಹಾಸವನ್ನು ಹೊರತಂದರು ಎಂದರು.
ಯುದ್ಧದಲ್ಲಿ ಮಡಿದ 21 ಯೋಧರಲ್ಲಿ ಸ್ಮರಣಾರ್ಥ ಯುದ್ಧ ನಡೆದ ಸ್ಥಳದಲ್ಲಿ ಕೋರೆಗಾಂವ್ ವಿಜಯೋತ್ಸವ ಆಚರಣೆಗೆ ಚಾಲನೆ ನೀಡಿದರು. ಅಂದಿನಿಂದ ಇಲ್ಲಿಯವರೆವಿಗೂ ದಲಿತ ಸಮುದಾಯ ವಿಜಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದು ವಿವರಿಸಿದರು.ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಎಇ ಸೋಮಶೇಖರ್, ಪಿಡಿಒ ಮಹೇಶ್‌ಬಾಬು, ಪುರಸಭೆ ಸದಸ್ಯ ರಾಜಶೇಖರ್, ಮುಖಂಡರಾದ ಮಾರ್ಕಾಲು ಮಾಧು, ನಂಜುಂಡಸ್ವಾಮಿ, ಶಾಂತರಾಜು, ಮಹದೇವಯ್ಯ, ಸುರೇಶ್, ಯತೀಶ್, ಮುದ್ದರಾಜ್, ಕುಮಾರ್, ಚಿಕ್ಕಸ್ವಾಮಿ, ಕಿರಣ್‌ಶಂಕರ್, ಕುಮಾರಸ್ವಾಮಿ, ಮಹೇಶ್, ಸುರೇಶ್, ಪ್ರಸಾದ್, ಪುಟ್ಟಸ್ವಾಮಿ, ವೇದವತಿ, ಮದನ್‌ಕುಮಾರ್, ಸಿದ್ದರಾಜು, ರವೀಂದ್ರಕುಮಾರ್, ಮಹದೇವಸ್ವಾಮಿ ಸೇರಿದಂತೆ ಇತರರು ಇದ್ದರು.