೧೫ರಿಂದ ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ

| Published : Feb 12 2024, 01:31 AM IST

ಸಾರಾಂಶ

ಫೆ.೨೨ರಂದು ರಾತ್ರಿ ೭ಗಂಟೆಗೆ ರಕ್ತೇಶ್ವರಿ, ಧೂಮಾವತಿ, ಪಿಲಿಚಾಮುಂಡಿ, ಕೈರತಿ ಹಾಗೂ ಸಪರಿವಾರ ದೈವಗಳಿಗೆ ನೇಮೋತ್ಸವ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿಉರುವಾಲು ಗ್ರಾಮದ ಕೊರಿಂಜ ಎಂಬಲ್ಲಿ ಸುಮಾರು ೭೦೦ ವರ್ಷ ಇತಿಹಾಸವುಳ್ಳ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಫೆ.೧೫ ರಿಂದ ಫೆ.೨೨ರ ವರೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ, ಎಡಪದವು ಬ್ರಹ್ಮಶ್ರೀ ವಿಷ್ಣುಮೂರ್ತಿ ತಂತ್ರಿಗಳ ಮಾರ್ಗದರ್ಶನದಲ್ಲಿ, ಶ್ರೀ ವೆಂಕಟೇಶ ತಂತ್ರಿಗಳ ನೇತೃತ್ವದಲ್ಲಿ ಪನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ದೈವಗಳ ಪ್ರತಿಷ್ಠೆ ಹಾಗೂ ವಾರ್ಷಿಕ ಜಾತ್ರೋತ್ಸವ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಶಾಸಕ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಪೂಂಜ ಹೇಳಿದರು.

ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದಿಂದ ೫೦ ಲಕ್ಷ ರು. ನೆರವು, ಸಂಸದ ನಳಿನ್ ಕುಮಾರ್ ಕಟೀಲ್ ಅವರ ೨೫ ಲಕ್ಷ ರು., ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಅವರ ೧೦ ಲಕ್ಷ ರು. ಅನುದಾನ ಸೇರಿದಂತೆ ಭಕ್ತರಿಂದ ಸಂಗ್ರಹವಾದ ೨.೨೫ ಕೋಟಿ ರು. ಅನುದಾನ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಗಳಿಗೆ ೬೦ ಲಕ್ಷ ರು. ಸೇರಿ ೨.೮೫ ಕೋಟಿ ರು. ಯೋಜನೆಯಲ್ಲಿ ದೇವಸ್ಥಾನವು ಅತ್ಯಂತ ಸುಂದರವಾಗಿ ಮೂಡಿಬಂದಿದೆ. ವಿಶೇಷವಾಗಿ ಕ್ಷೇತ್ರದ ಮೇಲಿನ ಭಕ್ತಿಯಿಂದ ೨೫೦ ಮಂದಿ ತಲಾ ೨೫,೦೦೦ ರು. ನಂತೆ ಅನ್ನದಾನ ಸೇವೆ ಒದಗಿಸಿದ್ದಾರೆ. ಈ ಮೂಲಕ ಬ್ರಹ್ಮಕಲಶೋತ್ಸವ ಅತ್ಯಂತ ಸುಂದರವಾಗಿ ಮೂಡಿಬರಲಿದೆ ಎಂದು ತಿಳಿಸಿದರು.

ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ ಮಾತನಾಡಿ, ನಶಿಸಿ ಹೋಗಿದ್ದ ದೇವಸ್ಥಾನ ೧೯೯೯ರಲ್ಲಿ ನಿರ್ಮಾಣಗೊಂಡಿತು. ೨೦೦೭ರಲ್ಲಿ ಜೀರ್ಣೋದ್ಧಾರಗೊಂಡು ಇದೀಗ ೨೦೨೪ರಲ್ಲಿ ಮತ್ತೊಮ್ಮೆ ಬ್ರಹ್ಮಕಲಶೋತ್ಸವ ನೆರವೇರುತ್ತಿದೆ. ಫೆ.೧೫ರಂದು ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಕಾರ್ಯಲಯ ಉದ್ಘಾಟನೆ, ಫೆ.೧೬ರಂದು ಬೆಳಗ್ಗೆ ೬.೫೪ ರಿಂದ ಆಯ್ದ ೧೨ ಜನಾ ಮಂಡಳಿಗಳಿಂದ ಏಕಾಹ ಭಜನಾ ಕಾರ್ಯಕ್ರಮ ನೆರವೇರಲಿದೆ ಎಂದು ತಿಳಿಸಿದರು.

ಹಸಿರುವಾಣಿ ಹೊರೆಕಾಣಿಕೆ- ಫೆ.೧೬ರಂದು ಮಧ್ಯಾಹ್ನ ೨.೩೦ಕ್ಕೆ ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದಲ್ಲಿ ಸಾಮೂಹಿಕ ಪ್ರಾಥನೆಯೊಂದಿಗೆ ದೀಪ ಬೆಳಗಿ, ಮಧ್ಯಾಹ್ನ ೩ ಗಂಟೆಗೆ ಉರುವಾಲು, ಕಣಿಯೂರು, ಬಂದಾರು, ಮೊಗ್ರು, ಇಳಂತಿಲ, ಕರಾಯ, ತಣ್ಣೀರುಪಂತ, ಬಾರ್ಯ, ತೆಕ್ಕಾರು, ಪುತ್ತಿಲ, ನಾಳ, ಮಚ್ಚಿನ ಮತ್ತು ಉಪ್ಪಿನಂಗಡಿ ಸೇರಿದಂತೆ ವಿವಿಧ ಭಾಗಗಳಿಂದ ಬಂದ ಹಸಿರು ಹೊರೆಕಾಣಿಕೆ ಸಮರ್ಪಣೆಗೊಂಡು ಇದರೊಂದಿಗೆ ವೈಭವಯುತ ಮೆರವಣಿಗೆಗೆ ಕುಪ್ಪೆಟ್ಟಿ ಮಹಾದ್ವಾರದಲ್ಲಿ ಚಾಲನೆ ದೊರೆಯಲಿದೆ ಎಂದರು.

ಪ್ರತಿದಿನ ನಡೆಯುವ ಸಭಾಕಾರ್ಯಕ್ರಮದಲ್ಲಿ ಫೆ.೧೬ರಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಫೆ.೧೭ರಂದು ಆರಿಕೋಡಿ ಶ್ರೀ ಚಾಮುಂಡೇಶ್ವರೀ ಕ್ಷೇತ್ರ ಧರ್ಮದರ್ಶಿ ಹರೀಶ್, ಫೆ.೧೮ರಂದು ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಫೆ.೧೯ರಮದು ಮಾಣಿ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಫೆ.೨೦ರಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಫೆ.೨೧ರಂದು ಮಂಗಳೂರು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವವನಗೈಯವರು, ಪ್ರತಿದಿನ ಬೆಳಗ್ಗೆ ೭ ರಿಂದ ವೈದಿಕ ಕಾರ್ಯಕ್ರಮ, ಭಜನೆ ಸೇರಿದಂತೆ ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ ೯ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಫೆ.೨೨ರಂದು ನೇಮೋತ್ಸವಫೆ.೨೨ರಂದು ರಾತ್ರಿ ೭ಗಂಟೆಗೆ ರಕ್ತೇಶ್ವರಿ, ಧೂಮಾವತಿ, ಪಿಲಿಚಾಮುಂಡಿ, ಕೈರತಿ ಹಾಗೂ ಸಪರಿವಾರ ದೈವಗಳಿಗೆ ನೇಮೋತ್ಸವ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ ಎಂದು ತಿಳಿಸಿದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಲ್ಲಲಿಕೆ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಈಗಾಗಲೇ ಅನ್ನಛತ್ರದ ನಿರ್ಮಾಣ, ದೇವಸ್ಥಾನದ ಸುತ್ತಲಿನ ಮೈದಾನ ವಿಸ್ತರಣೆ, ತಡೆಗೋಡೆ, ಅರ್ಚಕರ ಸುಸಜ್ಜಿತ ವಸತಿಗೃಹ, ಸಭಾಭವನ ದುರಸ್ತಿ, ಕ್ಷೇತ್ರದ ದೈವಗಳ ಗುಡಿ, ರಸ್ತೆ ವಿಸ್ತರಣೆ, ದೇವಳದ ಒಳಾಂಗಣದ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದೆ. ಕ್ಷೇತ್ರಕ್ಕೆ ಒಳಪಟ್ಟ ೬೫೦ ಮನೆಗಳಿಂದ ನೆರವು ನೀಡಿರುವುದು ಕ್ಷೇತ್ರದ ಅಭಿವೃದ್ಧಿಗೆ ಕಾರಣವಾಗಿದೆ. ಒಟ್ಟು ೫೦ ಸಾವಿರ ಮಂದಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಿದ್ದು, ೮ ಕಿ.ಮೀ. ನಗರಾಲಂಕಾರ ಮಾಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುನಿಲ್ ಗೌಡ ಅಣವು, ಆಡಳಿತ ಸಮಿತಿಯ ಕಾರ್ಯದರ್ಶಿ ಶ್ಯಾಮ್ ಭಟ್ ವಾದ್ಯಕೋಡಿ, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಲ್ಲಳಿಕೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಉದಯ ಟಿ. ತಾಳಿಂಜ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸುಂದರ ಶೆಟ್ಟಿ ಎಂಜಿರಪಲ್ಕೆ, ಆಡಳಿತ ಸಹ ಮೊಕ್ತೇಸರ ಸೇಸಪ್ಪ ರೈ ಮತ್ತು ಜನಾರ್ದನ ಗೌಡ ನಕಾಲು ಆರ್ಥಿಕ ಸಮಿತಿ ಸಂಚಾಲಕ ಪ್ರಭಾಕರ ಪೊಸದೊಂಡಿ, ಜತೆ ಕಾರ್ಯದರ್ಶಿ ಗಣೇಶ್ ಬನಾರಿ, ಕಾರ್ಯಾಲಯ ಸಂಚಾಲಕ ವಾರಿಜ ಶೆಟ್ಟಿ ಉಪಸ್ಥಿತರಿದ್ದರು.