ಬೆಂಗಳೂರು, ಮಂಗಳೂರು ಉಡುಪಿ, ಕಾರವಾರ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಶೀಘ್ರವಾಗಿ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಆಗ್ರಹಿಸಿದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾದ ಉಡುಪಿ-ಚಿಕ್ಕಮಗಳೂರು ಸಂಸದ
ಉಡುಪಿ: ಕರಾವಳಿ ಕರ್ನಾಟಕದ ರೈಲ್ವೆ ಪ್ರಯಾಣಿಕರ ಹಿತದೃಷ್ಟಿಯಿಂದ, ಬಹುನಿರೀಕ್ಷೆಯ ಬೆಂಗಳೂರು, ಮಂಗಳೂರು ಉಡುಪಿ, ಕಾರವಾರ ನಡುವೆ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲನ್ನು ಶೀಘ್ರವಾಗಿ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಆಗ್ರಹಿಸಿದರು.ಹಾಸನ, ಸಕಲೇಶಪುರ ಭಾಗದಲ್ಲಿ ರೈಲ್ವೆ ಮಾರ್ಗದ ವಿದ್ಯುದೀಕರಣ ಮುಗಿಯುತ್ತಾ ಬಂದಿದ್ದು, ಬೆಂಗಳೂರು ಮತ್ತು ಕರಾವಳಿ ಜಿಲ್ಲೆಗಳನ್ನು ವಂದೇ ಭಾರತ್ ಮೂಲಕ ಬೆಸೆಯಲು ಇದು ಸಕಾಲವಾಗಿದೆ. ಕಾರವಾರ, ಉಡುಪಿ, ಮಂಗಳೂರು ಪ್ರಯಾಣಿಕರಿಗೆ ವಂದೇ ಭಾರತ್ ಮೂಲಕ ಉತ್ತಮ ರೈಲ್ವೆ ಸೇವೆಗೆ ಅವಕಾಶವಾಗುತ್ತದೆ ಎಂದು ವಿನಂತಿ ಮಾಡಿರುವ ಸಂಸದ ಕೋಟ, ಈ ಹಿಂದೆ ಕೇಂದ್ರ ಸಚಿವರು, ಘಾಟಿ ಭಾಗದಲ್ಲಿ ವಿದ್ಯುದೀಕರಣ ಪೂರ್ಣಗೊಂಡ ನಂತರ ಬೆಂಗಳೂರಿನಿಂದ ಕಾರವಾರ ನಡುವೆ ವಂದೇ ಭಾರತ್ ಪರಿಚಯಿಸಲಾಗುವುದು ಎಂಬ ಭರವಸೆಯನ್ನು ನೆನಪಿಸಿದ್ದಾರೆ.ಸಂಸದರ ಕೋರಿಕೆಯ ಬಗ್ಗೆ ಮನವರಿಕೆ ಮಾಡಿಕೊಂಡ ಕೇಂದ್ರ ಸಚಿವರು, ಈ ಪ್ರಸ್ತಾಪದ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.