ಕೋಟ ಗೆಲುವಿಗೆ ಮೋದಿ, ಹಿಂದುತ್ವ, ಜೆಪಿ ಹೆಗ್ಡೆ ಸೋಲಿಗೆ ಅಸಮಾಧಾನ ಕಾರಣ!

| Published : Jun 05 2024, 12:30 AM IST

ಕೋಟ ಗೆಲುವಿಗೆ ಮೋದಿ, ಹಿಂದುತ್ವ, ಜೆಪಿ ಹೆಗ್ಡೆ ಸೋಲಿಗೆ ಅಸಮಾಧಾನ ಕಾರಣ!
Share this Article
  • FB
  • TW
  • Linkdin
  • Email

ಸಾರಾಂಶ

ಹೆಗ್ಡೆ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ, ಅಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದು, ಮತ್ತೆ ಚುನಾವಣೆಗಾಗಿಯೇ ಕಾಂಗ್ರೆಸ್ ಸೇರಿದ್ದು, ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದು ಅವರ ಮತ ಗಳಿಕೆಗೆ ತೊಡಕಾಯಿತು ಎನ್ನುವ ಅಭಿಪ್ರಾಯ ಇದೆ.

ಕನ್ನಡಪ್ರಭ ವಾರ್ತೆ ಉಡುಪಿ

ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಜನರು ನನಗೆ ಮತ ಹಾಕಿದ್ದಾರೆ ಎಂದು ಸ್ವತಃ ಬಿಜೆಪಿಯಿಂದ ಗೆದ್ದ ಕೋಟ ಶ್ರೀನಿವಾಸ ಪೂಜಾರಿ ಒಪ್ಪಿಕೊಂಡಿದ್ದಾರೆ. ಅವರ ಗೆಲುವಿಗೆ ಮತ್ತು ಜಯಪ್ರಕಾಶ್ ಹೆಗ್ಡೆ ಸೋಲಿಗೆ ಕ್ಷೇತ್ರದಲ್ಲಿದ್ದ ಮೋದಿ ಅಲೆಯೇ ಪ್ರಮುಖ ಕಾರಣವಾಗಿದೆ. ಕರಾವಳಿಯಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಿಂದುತ್ವವಾದ ಕೂಡ ಬಿಜೆಪಿ ಅಭ್ಯರ್ಥಿ ಗೆಲ್ಲುವುದಕ್ಕೆ ಸಹಾಯ ಮಾಡಿದೆ.

ಉಡುಪಿ ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಕ್ಕೆ ಪ್ರಮುಖ ಕಾರಣ ಪಕ್ಷದ ತಳಮಟ್ಟದ ಬಲಿಷ್ಠ ಸಂಘಟನೆ. ಇದುವೇ ಇಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಿದೆ.

ಹೆಗ್ಡೆ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ, ಅಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದು, ಮತ್ತೆ ಚುನಾವಣೆಗಾಗಿಯೇ ಕಾಂಗ್ರೆಸ್ ಸೇರಿದ್ದು, ಕ್ಷೇತ್ರದ ಕಾಂಗ್ರೆಸ್ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು. ಇದು ಅವರ ಮತ ಗಳಿಕೆಗೆ ತೊಡಕಾಯಿತು ಎನ್ನುವ ಅಭಿಪ್ರಾಯ ಇದೆ.

ಹೆಗ್ಡೆ ಅವರು ಕಾಂಗ್ರೆಸ್‌ನ ರಾಜ್ಯ ಹೈಕಮಾಂಡ್ ಅಭ್ಯರ್ಥಿಯಾಗಿದ್ದರೇ ಹೊರತು ಸ್ಥಳೀಯ ಕಾಂಗ್ರೆಸ್‌ನಿಂದ ಶಿಫಾರಸ್ಸಾದ ಅಭ್ಯರ್ಥಿಯಾಗಿರಲಿಲ್ಲ. ಆದ್ದರಿಂದ ಸ್ಥಳೀಯ ಕಾಂಗ್ರೆಸ್ ಮನಃಪೂರ್ವಕ ಅವರ ಪರ ಪ್ರಚಾರಕ್ಕೆ ಇಳಿದಿರದಿದ್ದುದೂ ಕೂಡ ಅವರ ಸೋಲಿಗೆ ಕಾರಣವಾಗಿದೆ.

ಹೆಗ್ಡೆ ಅವರು ಏಕಾಂಗಿಯಾಗಿಯೇ ಪ್ರಚಾರ ಮಾಡುತ್ತಿದ್ದರು. ರಾಜ್ಯ, ರಾಷ್ಟ್ರ ನಾಯಕರ್ಯಾರೂ ಅವರ ಪರ ಪ್ರಚಾರಕ್ಕೆ ಬರಲಿಲ್ಲ. ಆದರೆ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಹೆಗ್ಡೆ ಅವರ ಒಟ್ಟು ಮತಗಳಿಕೆಯನ್ನು ಹೆಚ್ಚಿಸಿವೆ ಎಂಬ ವಿಶ್ಲೇಷಣೆ ಕೂಡ ನಡೆದಿದೆ.