ನೂರಾರು ವರ್ಷಗಳ ಇತಿಹಾಸ ಇರುವ ಕೋಟೆ ಆಂಜನೇಯ ದೇವಸ್ಥಾನದ ಪರಂಪರೆ ಸಂಸ್ಕೃತಿಯನ್ನು ಉಳಿಸಲಿಕ್ಕೆ ಆಂಜನೇಯ ಸೇವಾ ಸಮಿತಿಯವರು ನಿರಂತರವಾಗಿ ಶ್ರಮಿಸುವ ಮೂಲಕ ಅಭಿವೃದ್ಧಿಪಡಿಸಿಕೊಂಡು ಬಂದಿದ್ದಾರೆ
ಹರಪನಹಳ್ಳಿ: ನಗರದ ಐತಿಹಾಸಿಕ ಪರಂಪರೆವುಳ್ಳ ಕೋಟೆ ಆಂಜನೇಯ ದೇವಸ್ಥಾನವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸಲು ಮುಂದಾಗಿರುವ ತಾಲೂಕು ಆಡಳಿತದ ಕ್ರಮ ಸರಿಯಲ್ಲ. ತಕ್ಷಣ ಅದನ್ನು ತಡೆ ಹಿಡಿಯಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ವಾಲ್ಮೀಕಿ ಸಮಾಜದ ಮುಖಂಡ ಎಚ್.ಕೆ. ಹಾಲೇಶ ಹೇಳಿದರು.
ನಗರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರಾರು ವರ್ಷಗಳ ಇತಿಹಾಸ ಇರುವ ಕೋಟೆ ಆಂಜನೇಯ ದೇವಸ್ಥಾನದ ಪರಂಪರೆ ಸಂಸ್ಕೃತಿಯನ್ನು ಉಳಿಸಲಿಕ್ಕೆ ಆಂಜನೇಯ ಸೇವಾ ಸಮಿತಿಯವರು ನಿರಂತರವಾಗಿ ಶ್ರಮಿಸುವ ಮೂಲಕ ಅಭಿವೃದ್ಧಿಪಡಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.ಆದರೆ ಕೆಲವರು ಕೋಟೆ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಿ ಅಭಿವೃದ್ಧಿಪಡಿಸಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ. ದೇವಸ್ಥಾನಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಆದಾಯ ಇಲ್ಲ. ಕೋಟ್ಯಂತರ ಬೆಲೆ ಬಾಳುವ ಆಸ್ತಿಯೂ ಇಲ್ಲ. ಭಕ್ತರಿಂದ ಬಂದಂತಹ ದೇಣಿಗೆ ಅವರ ಸಹಕಾರದಿಂದ ಸಮಿತಿಯವರು ಅಭಿವೃದ್ಧಿ ಮಾಡಿದ್ದಾರೆ ಎಂದರು.
ಈ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ತಹಶೀಲ್ದಾರ್ ನೇತೃತ್ವದಲ್ಲಿ ಈಗಲೂ ಅಡಾಕ್ ಸಮಿತಿಯೊಂದು ಜಾರಿಯಲ್ಲಿದೆ. ಆದರೆ ಏಕೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ? ಈ ಸಂಬಂಧ ಅನೇಕ ಬಾರಿ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಿತಿಯಿಂದ ಅರ್ಜಿ ಸಲ್ಲಿಸಿದ್ದೇವೆ. ಆದರೂ ಯಾರು ಇತ್ತ ಗಮನ ಹರಿಸಿಲ್ಲ ಎಂದರು.ದೇವಸ್ಥಾನದಲ್ಲಿ ಭ್ರಷ್ಟಾಚಾರ, ಹಣ ದುರುಯೋಗ ನಡೆದಿಲ್ಲ. ಸುಳ್ಳು ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದರು.
ಹೋರಾಟಗಾರ ಗುಡಿಹಳ್ಳಿ ಹಾಲೇಶ ಮಾತನಾಡಿ, ಸಾರ್ವಜನಿಕವಾಗಿ ಚರ್ಚೆ ಮಾಡದೇ ಕೋಟೆ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವುದು ಸೂಕ್ತವಲ್ಲ. ಇದರಿಂದ ಭಕ್ತರಲ್ಲಿ ಗೊಂದಲ ಉಂಟಾಗುತ್ತದೆ ಎಂದರು.ವಿಎಚ್‌ಪಿ ಮುಖಂಡ ಎಚ್.ಎಂ.ಜಗದೀಶ, ಎಚ್.ವೆಂಕಟೇಶ ಮಾತನಾಡಿದರು.
ಚಿಕ್ಕೇರಿ ಬಸಪ್ಪ, ಗಿಡ್ಡಳ್ಳಿ ನಾಗರಾಜ್ ದ್ಯಾಮಜ್ಜಿ ದಂಡೆಪ್ಪ, ತಳವಾರ ಅಜ್ಜಯ್ಯ, ಪಟ್ನಮದ ಪರಶುರಾಮ, ಮ್ಯಾಕಿ ಸಣ್ಣ ಹಾಲಪ್ಪ, ಕಮ್ಮಾರ ಹಾಲಪ್ಪ, ಚಿಕ್ಕೆರಿ ಯಂಕಪ್ಪ, ದ್ಯಾಮಜ್ಜಿ ಹನುಮಂತಪ್ಪ, ನಿಟ್ಟೂರು ತಿಮ್ಮಣ್ಣ, ಆಲೂರು ಶ್ರೀನಿವಾಸ, ಗುಂಡಿ ಮಂಜುನಾಥ್, ಬಡಗಿ ಮಂಜು, ಆದಿನಾಥ, ಅಶೋಕ, ತಿಮ್ಮಣ್ಣ, ಚನ್ನಪ್ಪ ಹನುಮಂತ ಇದ್ದರು.ಹರಪನಹಳ್ಳಿ ತಾಲೂಕಿನಲ್ಲಿ ಅನೇಕ ಕಡೆ ಸುಮಾರು 381 ಎಕರೆ ವಕ್ಫ್ ಬೋರ್ಡ್ ಹೆಸರಿನಲ್ಲಿ ಆಸ್ತಿ ಇದೆ. ಇದನ್ನು ಶಾಸಕರು ಆಡಳಿತಾಧಿಕಾರಿಗಳು ಗಮನಿಸಬೇಕು. ಅದನ್ನು ಬಿಟ್ಟು ಕೋಟೆ, ಪರಂಪರೆ ಇತಿಹಾಸ ಇರುವ ಜಾಗವನ್ನು ಸರ್ಕಾರಕ್ಕೆ ಸೇರಿಸುವುದು ಸಮಂಜಸವಲ್ಲ ಎನ್ನುತ್ತಾರೆ ಹರಪನಹಳ್ಳಿ ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ. ಹಾಲೇಶ್.