ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಪ್ರಸಿದ್ದ ಶ್ರೀ ಕೋಟೆ ಮಾರಿಕಾಂಬಾ ಜಾತ್ರೆಯು ಮಾ.12ರಿಂದ ಆರಂಭವಾಗಲಿದ್ದು, ಅಂತಿಮ ಸಿದ್ದತೆಗಳು ಪೂರ್ಣಗೊಳ್ಳುತ್ತಿವೆ. ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಜಾತ್ರೆಯನ್ನು 5 ದಿನಗಳ ಕಾಲ ಆಚರಿಸಲಾಗುವುದು ಎಂದು ಶ್ರೀಕೋಟೆ ಮಾರಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾಳೆಯಿಂದ 5 ದಿನಗಳ ಕಾಲ ನಡೆಯುವ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ದತೆಗಳು ನಡೆದಿವೆ. ಈ ಬಾರಿ ವಿಶೇಷವಾಗಿ ಗಾಂಧಿಬಜಾರ್‌ನಲ್ಲಿ ನವದುರ್ಗಿ ಅಲಂಕಾರ ಮಾಡಲಾಗಿದೆ. ಚಂದ್ರಘಂಟಿ ದೇವಿ ಎಂದು ಕರೆಯುವ ಈ ಅಲಂಕಾರವನ್ನು ನೆಲಮಟ್ಟದಿಂದ 46 ಅಡಿ ಎತ್ತರದ ಪ್ರತಿಕೃತಿಯನ್ನು ರಚಿಸಲಾಗಿದೆ. ಈಗಾಗಲೇ ಸಾವಿರಾರು ಜನರನ್ನು ಇದು ಆಕರ್ಷಿಸುತ್ತಿದೆ. ಜೀವನ್ ಎಂಬ ಕಲಾವಿದ ಇದನ್ನು ರಚಿಸಿದ್ದಾರೆ. ಇದು ಜಾತ್ರೆ ಆಕರ್ಷಣೆಯಾಗಿದ್ದು, ಇದನ್ನು ನೋಡಲೆಂದೇ ಸಾವಿರಾರು ಜನರು ಬರುತ್ತಿದ್ದಾರೆ ಎಂದರು.ದೇವಸ್ಥಾನದಿಂದ ಗಾಂಧಿ ಬಜಾರ್‌ವರೆಗೆ ಶಾಮಿಯಾನ ಹಾಕಲಾಗಿದೆ. ಈ ಬಾರಿ ಜನರ ಅಭಿಪ್ರಾಯದ ಮೇರೆಗೆ ಬಿ.ಎಚ್. ರಸ್ತೆಯಲ್ಲಿಯೂ ಶಾಮಿಯಾನ ಹಾಕಲಾಗಿದೆ. ಎಲ್ಲ ಕಡೆ ವಿದ್ಯುತ್ ದೀಪಲಂಕಾರ ಮಾಡಲಾಗಿದೆ. ಜೊತೆಗೆ ಮಾ.14, 15, 16ರಂದು ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮತ್ತೊಂದು ಕಡೆ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯೂ ನಡೆಯಲಿದೆ ಎಂದರು.
ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮಾತನಾಡಿ, ಮಾ.12ರಂದು ಶ್ರೀ ಮಾರಿಕಾಂಬ ದೇವಿಯನ್ನು ಗಾಂಧಿ ಬಜಾರ್ ತವರುಮನೆಯಲ್ಲಿ ಉಡಿತುಂಬಿ ಪೂಜಿಸಲಾಗುತ್ತದೆ. ಗಾಂಧಿಬಜಾರಿನಲ್ಲಿರುವ ಶ್ರೀ ಮಾರಿಕಾಂಬೆಯ ದರ್ಶನ ಮಾಡಲು ಅಂಗವಿಕಲರಿಗೆ ಮತ್ತು ತುಂಬು ಗರ್ಭೀಣಿಯರಿಗೆ ಮಾತ್ರ ಪ್ರತ್ಯೇಕ ವ್ಯವಸ್ಥೆ ಉಚಿತ ಅವಕಾಶ ನೀಡಲಾಗಿದೆ. ಜೊತೆಗೆ ಈ ಬಾರಿ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ₹200 ಪಾವತಿ ಮಾಡಿ ಪಾಸ್ ಪಡೆಯಬೇಕು. ಒಂದು ಪಾಸ್‌ಗೆ ಇಬ್ಬರಿಗೆ ಮಾತ್ರ ಅವಕಾಶ ಇರಲಿದೆ. ಪಾಸ್ ಪಡೆಯದವರು ಸಾಮಾನ್ಯ ಸರತಿಯಲ್ಲಿಯೇ ಬರಬೇಕು ಎಂದು ಮಾಹಿತಿ ನೀಡಿದರು.ಮಾ.13ರಂದು ಬೆಳಗ್ಗೆ 4 ಗಂಟೆಗೆ ಶ್ರೀ ಮಾರಿಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ವಿವಿಧ ಸಮಾಜದವರ ಪೂಜೆಯ ನಂತರ ಪ್ರತಿದಿನವೂ ಪೂಜೆ ನಡೆಯುತ್ತದೆ. ಪ್ರಸಾದದ ವ್ಯವಸ್ಥೆ ಕೂಡ ಇರುತ್ತದೆ. ಸರತಿ ಸಾಲಿನಲ್ಲಿ ಬರುವವರೆಗೆ ಅಲ್ಲಲ್ಲಿ ಪಾನಕ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿಯ ಶ್ರೀಮಾರಿಕಾಂಬಾ ಜಾತ್ರೆಯು ಅತ್ಯಂತ ವಿಶಿಷ್ಟವಾಗಿ, ವಿಜೃಂಭಣೆಯಿಂದ ನಡೆಯಲಿದೆ. ಮಾ.16ರಂದು ರಾತ್ರಿ 7ಕ್ಕೆ ಶ್ರೀಮಾರಿಕಾಂಬೆ ಉತ್ಸವ, ವಿವಿಧ ಜನಪದ ತಂಡಗಳ ಮೆರಗಿನೊಂದಿಗೆ ಅಮ್ಮನವರನ್ನು ವನಪ್ರವೇಶಕ್ಕೆ ಕಳಿಸಿಕೊಡುವ ಮೂಲಕ 2 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ತೆರೆ ಎಳೆಯಲಾಗುತ್ತದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಎನ್.ಉಮಾಪತಿ, ಎಸ್. ಹನುಮಂತಪ್ಪ, ಡಿ.ಎಂ.ರಾಮಯ್ಯ, ಎಸ್.ಸಿ. ಲೋಕೇಶ್, ಎ.ಎಚ್.ಸುನೀಲ್, ಸೀತಾರಾಮಾ ನಾಯ್ಕ್, ಟಿ.ಎಚ್.ಚಂದ್ರಶೇಖರ್, ಸತ್ಯನಾರಾಯಣ್, ಪ್ರಭಾಕರ ಗೌಡ, ಎಚ್.ಡಿ.ಪ್ರಕಾಶ್, ತುಕ್ಕೋಜಿರಾವ್, ಎನ್.ರವಿಕುಮಾರ್ ಇತರರು ಇದ್ದರು.
- - - ಬಾಕ್ಸ್-1 ವಿಶೇಷ ಕಾರ್ಯಕ್ರಮಗಳ ವಿವರಮಾ.12ರಿಂದ ಜಾತ್ರೆ ಆರಂಭವಾಗಲಿದ್ದು, ಬೆಳಗಿನ ಜಾವ 5ಕ್ಕೆ ಬಿ.ಬಿ.ರಸ್ತೆಯ ಬ್ರಾಹ್ಮಣ ಸಮಾಜದ ನಾಡಿಗರ ಕುಟುಂಬದವರನ್ನು ಪೂಜೆಗೆ ಆಹ್ವಾನಿಸಲಾಗುತ್ತದೆ. ಆ ಕುಟುಂಬದ ಮುತ್ತೈದೆಯರು ಮಂಗಳ ವಾದ್ಯಗಳೊಂದಿಗೆ ದೇವಿಯ ತವರು ಮನೆ ಗಾಂಧಿ ಬಜಾರ್‌ವರೆಗೆ ಮೆರವಣಿಗೆಯಲ್ಲಿ ಆಗಮಿಸುತ್ತಾರೆ. ದೇವಿಗೆ ಬಾಸಿಂಗ ಅರ್ಪಿಸಿ, ಉಡಿ ತುಂಬಿ, ಪೂಜೆ ಸಲ್ಲಿಸುತ್ತಾರೆ. ವಿಶ್ವಕರ್ಮ ಸಮಾಜದವರು ಸಾರ್ವಜನಿಕವಾಗಿ ಪೂಜೆಯನ್ನು ಆರಂಭಿಸುತ್ತಾರೆ. ಅಂದು ರಾತ್ರಿ 10ರವರೆಗೂ ಲಕ್ಷಾಂತರ ಮುತ್ತೈದೆಯರು ಶ್ರೀ ಮಾರಿಕಾಂಬೆಗೆ ಮಡಲಕ್ಕಿ ನೀಡಿ, ಉಡಿ ತುಂಬಿ ತಮ್ಮ ಪೂಜೆ ಸಲ್ಲಿಸುತ್ತಾರೆ.ಬೆಳಗ್ಗೆ 5ಕ್ಕೆ ಎಡೆಪೂಜೆ ನಡೆಸಲಾಗುತ್ತದೆ. ರಾತ್ರಿ 9 ಗಂಟೆ ನಂತರ ಮಾರಿಕಾಂಬೆಯನ್ನು ರಥದಲ್ಲಿ ಕೂರಿಸಿ, ಮೆರವಣಿಗೆ ನಡೆಸಲಾಗುತ್ತದೆ. ಉಪ್ಪಾರ ಸಮಾಜದವರು ಗದ್ದುಗೆಗೆ ತಂದು ಪ್ರತಿಷ್ಠಾಪಿಸುತ್ತಾರೆ. ಈ ಮಧ್ಯೆ ಗಂಗಾಪರಮೇಶ್ವರಿ ದೇವಸ್ಥಾನದ ಬಳಿ ಗಂಗಾ ಮತಸ್ಥರು ಗಂಗೆ ಪೂಜೆ ನೆರವೇರಿಸುತ್ತಾರೆ.
ಮಾ.14ರಂದು ಬೆಳಗಿನ ಜಾವ 4 ಗಂಟೆಗೆ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಸಮಾಜದವರು ಬೇವಿನ ಉಡುಗೆಯೊಂದಿಗೆ ಬಂದು ದೇವಿಗೆ ಪೂಜೆ ಸಲ್ಲಿಸುತ್ತಾರೆ. ಆ ನಂತರ ದೇವಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.ಕುರುಬ ಜನಾಂಗದ ಗುತ್ಯಮ್ಮ ದೇವಾಲಯದ ಅರ್ಚಕರಾದ ಚೌಡಿಕೆ ಕುಟುಂಬದವರು ನೈವೇದ್ಯ ಮಾಡಿ ಪೂಜೆ ಸಲ್ಲಿಸುತ್ತಾರೆ. ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ವಾಲ್ಮೀಕಿ ಸಮಾಜ, ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಪ್ಪಾರ ಸಮಾಜ, ಮಧ್ಯಾಹ್ನ 2 ರಿಂದ ರಾತ್ರಿ 11 ಗಂಟೆ ವರೆಗೆ ಮಡಿವಾಳ ಸಮಾಜದವರು ಸರದಿಯಂತೆ 4 ದಿನಗಳ ಕಾಲ ಗದ್ದುಗೆಯಲ್ಲಿ ಅಮ್ಮನವರಿಗೆ ಪೂಜೆ ಸಲ್ಲಿಸುತ್ತಾರೆ.
ಮಾ.16ರಂದು ರಾತ್ರಿ 7 ಗಂಟೆಗೆ ಸಮಿತಿ ವತಿಯಿಂದ ದೇವಿಗೆ ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಆ ನಂತರ ಶ್ರೀ ಮಾರಿಕಾಂಬೆಯ ದೊಡ್ಡ ಸಂಖ್ಯೆಯ ಭಕ್ತರೊಂದಿಗೆ ತಾಯಿಯ ವನ ಪ್ರವೇಶಕ್ಕೆ ಮೆರವಣಿಗೆ ನಡೆಸಲಾಗುತ್ತದೆ. ಮಡಿವಾಳ ಸಮಾಜದವರು ತಾಯಿಯನ್ನು ವನಕ್ಕೆ ಕರೆದೊಯ್ದು ಶಾಸ್ತ್ರ, ಪೂಜೆ ಸಲ್ಲಿಸಿ ವನದಿಂದ ಹಿಂತಿರುಗುತ್ತಾರೆ. ಮಾ.15 ರಿಂದ 17ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ. ರಾಜ್ಯ ಮತ್ತು ಅಂತರ ರಾಜ್ಯದ ಹೆಸರಾಂತ ಪೈಲ್ವಾನರು ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.- - - ಬಾಕ್ಸ್-2 ಜಾತ್ರೆಯ ಆಕರ್ಷಣೆ ನವದುರ್ಗಿ ಅಲಂಕಾರ ಕೋಟೆ ಮಾರಿಕಾಂಬೆ ಜಾತ್ರೆ ಹಿನ್ನಲೆ ಇದೇ ಮೊದಲ ಬಾರಿ ಗಾಂಧಿ ಬಜಾರ್‌ನಲ್ಲಿ ಬೃಹತ್ ಮಹಾದ್ವಾರ ನಿರ್ಮಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮಾದರಿಯ ಮಹಾದ್ವಾರ ಸ್ಥಾಪಿಸಲಾಗಿದೆ. ಮಹಿಷಾಸುರ ಮರ್ದಿನಿ ಕಾನ್ಸೆಪ್ಟ್‌ನಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ.
ದುರ್ಗಾದೇವಿಯು ತನ್ನ ತ್ರಿಶೂಲದಿಂದ ಮಹಿಷಾಸುರನನ್ನು ವಧಿಸಿದ್ದಳು. ಇದೇ ಕಾನ್ಸೆಪ್ಟ್ ಅನ್ನು ಗಾಂಧಿ ಬಜಾರ್ ಪ್ರವೇಶದಲ್ಲಿ ಮುಖ್ಯ ದ್ವಾರವಾಗಿ ನಿರ್ಮಿಸಲಾಗಿದೆ. ಭಾನುವಾರ ಸಂಜೆ ಮಹಾದ್ವಾರವನ್ನು ಉದ್ಘಾಟಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್, ಕಲಾವಿದ ಜೀವನ್ ಹಲವರು ಈ ಸಂದರ್ಭ ಇದ್ದರು.- - - ಬಾಕ್ಸ್-3 45 ದಿನ ಮಹಾದ್ವಾರ, ಕೋಲ್ಕತ್ತದಿಂದ ಕೂದಲು, ಮುಂಬೈನಿಂದ ಫರ್
ಮಹಿಷಾಸುರ ಮರ್ದಿನಿ ಕಾನ್ಸೆಪ್ಟ್‌ನ ಮಹಾದ್ವಾರವನ್ನು ನಿರ್ಮಿಸಲು 45 ದಿನ ಸಮಯ ಹಿಡಿದಿದೆ. ಮೂರ್ತಿಗಳು 22 ಅಡಿ ಅಗಲ, 26 ಅಡಿ ಎತ್ತರವಿದೆ. ದುರ್ಗಾದೇವಿ, ಹುಲಿ ಮತ್ತು ರಾಕ್ಷಸನ ಕಲಾಕೃತಿಗಳಿವೆ. ಇದೇ ಮೊದಲ ಬಾರಿ ಎಲ್ಲ ಕಲಾಕೃತಿಗಳು ಆಕ್ಷನ್ ಮಾಡುತ್ತಿವೆ. ದುರ್ಗಾದೇವಿಯ ಎರಡು ಕೈಗಳು ಮತ್ತು ತ್ರಿಶೂಲ ಆಕ್ಷನ್ ಮಾಡುತ್ತಿವೆ. ರಾಕ್ಷಸನ ಕೈ ಮತ್ತು ತಲೆ, ಹುಲಿಯ ಕಾಲುಗಳು ಮತ್ತು ತಲೆ ಆಕ್ಷನ್ ಮಾಡುತ್ತವೆ. ಇನ್ನು, ಈ ಆಕ್ಷನ್‌ಗೆ ತಕ್ಕ ಹಾಗೆ ಈ ಬಾರಿ ಆಡಿಯೋ ಮಿಕ್ಸ್ ಕೂಡ ಇದೆ.
ಕಲಾಕೃತಿಯಲ್ಲಿ ಸಹಜತೆಗೆ ಹೆಚ್ಚು ಒತ್ತು ನೀಡಲಾಗಿದೆ. ದುರ್ಗಾದೇವಿಯ ತಲೆಗೂದಲನ್ನು ಕೋಲ್ಕತ್ತದಿಂದ ತರಿಸಲಾಗಿದೆ. ಇದು ಸಹಜ ಕೂದಲಿನಂತಿದೆ. ಇನ್ನು ಹುಲಿಗಾಗಿ ಮುಂಬೈನಿಂದ ಫರ್ ತರಿಸಲಾಗಿದೆ. ಅದರ ಮೇಲೆ ರೇಖೆಗಳನ್ನು ಪೇಂಟ್ ಮಾಡಲಾಗಿದೆ. 25 ಕಾರ್ಮಿಕರು ಹಗಲು – ರಾತ್ರಿ ಕೆಲಸ ಮಾಡಿದ್ದಾರೆ. ಓತಿಘಟ್ಟದ ಜೀವನ್ ಕಲಾ ಸನ್ನಿಧಿಯಲ್ಲಿ ಕಲಾವಿದ ಜೀವನ್ ನೇತೃತ್ವದಲ್ಲಿ ಮಹಾದ್ವಾರ ನಿರ್ಮಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮಹಾದ್ವಾರವನ್ನು ಕಲಾವಿದ ಜೀವನ್ ಅವರೆ ನಿರ್ಮಿಸುತ್ತಿದ್ದಾರೆ. ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಲಾ ವಿಭಾಗದಲ್ಲಿ ಜೀವನ್ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ, ಹೊರ ರಾಜ್ಯದಲ್ಲಿ ವಿವಿಧ ಕಲಾಕೃತಿಗಳನ್ನು ಜೀವನ್ ನಿರ್ಮಿಸಿದ್ದಾರೆ.- - - ಬಾಕ್ಸ್-4 ಫೋಟೋ, ವಿಡಿಯೋ, ಸೆಲ್ಫಿ
ಮಹಾದ್ವಾರ ಉದ್ಘಾಟನೆ ಆಗುತ್ತಿದ್ದಂತೆ ಜನರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದರು. ಮಹಾದ್ವಾರವನ್ನು ಕಣ್ತುಂಬಿಕೊಂಡರು. ಫೋಟೊ, ವಿಡಿಯೋಗಳನ್ನು ತೆಗೆದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ, ಖುಷಿಪಟ್ಟರು. ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಪೊಲೀಸರು ಶಿವಪ್ಪ ನಾಯಕ ಪ್ರತಿಮೆ ಮುಂಭಾಗ ಗಾಂಧಿ ಬಜಾರ್ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಹಾಕಿದ್ದರು.- - - ಬಾಕ್ಸ್-5 ವಾಹನಗಳ ಸಂಚಾರ ಮಾರ್ಗ ಬದಲಾವಣೆ ಕೋಟೆ ಶ್ರೀ ಮಾರಿಕಾಂಬ ದೇವಿ ದೇವಸ್ಥಾನವು ಪೂರ್ವಸಂಚಾರ ಪೋಲಿಸ್ ಠಾಣೆ ವ್ಯಾಪ್ತಿಯ ಎಸ್.ಪಿ.ಎಂ ರಸ್ತೆಯಲ್ಲಿದ್ದು, ಮೇಲ್ಕಂಡ ಜಾತ್ರಾ ಅವಧಿಯಲ್ಲಿ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ದೇವಸ್ಥಾನಕ್ಕೆ ಕಾರು, ದ್ವಿಚಕ್ರ. ಬಸ್ ಹಾಗೂ ಇತರೆ ವಾಹನಗಳಲ್ಲಿ ಬಂದು ಹೋಗಲಿರುತ್ತಾರೆ. ಈ ಸಮಯದಲ್ಲಿ ಹೊಳೆಬಸ್ ಸ್ಟಾಪ್, ಶಂಕರಮಠ ರಸ್ತೆ, ಬಿ.ಹೆಚ್ ರಸ್ತೆ, ಕೋಟೆ ರಸ್ತೆ, ಎಸ್.ಪಿ.ಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪನಾಯಕ ಸರ್ಕಲ್ ಹಾಗೂ ಇತರೆಡೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಕಾರಣ ಕಾರಣ ಮೇಲ್ಕಂಡ 5 ದಿನಗಳ ಕಾಲ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ಮಾ.12ರಿಂದ ಮಾ.16ರವರೆಗೆ ವಾಹನಗಳ ಸಂಚಾರ ನಿಷೇಧ, ನಿಲುಗಡೆ ಮತ್ತು ವಾಹನಗಳಿಗೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಾರ್ಗ ಬದಲಾವಣೆ ಮಾಹಿತಿ1. ಬೆಂಗಳೂರು, ಭದ್ರಾವತಿ, ಎನ್ ಆರ್ ಪುರ ಕಡೆಗಳಿಂದ ಬರುವ ಎಲ್ಲಾ ಭಾರಿ ವಾಹನಗಳು, ಸರಕು ಸಾಗಣೆ ವಾಹನಗಳು ಮತ್ತು ಬಸ್ ಗಳು ಎಂ.ಆರ್.ಎಸ್ ಸರ್ಕಲ್, ಬೈ ಪಾಸ್ ಮೂಲಕ ಶಿವಮೊಗ್ಗ ನಗರಕ್ಕೆ ಪ್ರವೇಶ ಪಡೆಯುವುದು.2. ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬರುವ ಎಲ್ಲಾ ಭಾರಿ ವಾಹನಗಳು, ಸರಕು, ಸಾಗಾಣೆ ವಾಹನಗಳು ಮತ್ತು ಬಸ್ ಗಳು ವಿದ್ಯಾನಗರ, ಎಂ.ಆರ್.ಎಸ್ ಸರ್ಕಲ್, ಬೈಪಾಸ್ ಮೂಲಕ ಶಿವಮೊಗ್ಗ ನಗರಕ್ಕೆ ಪ್ರವೇಶ ಪಡೆಯುವುದು.
3. ಹೊನ್ನಾಳಿ, ಹೊಳಲೂರು ಕಡೆಯಿಂದ ಬರುವ ಎಲ್ಲಾ ಭಾರಿ ವಾಹನಗಳು, ಸರಕು, ಸಾಗಾಣೆ ವಾಹನಗಳು ಮತ್ತು ಬಸ್ ಗಳು ಸಂಗೋಳ್ಳಿರಾಯಣ್ಣ ಸರ್ಕಲ್, ಕೆ.ಇ.ಬಿ ಸರ್ಕಲ್, ರೈಲ್ವೇ ಸ್ಟೇಷನ್, ಉಷಾ ನರ್ಸಿಂಗ್ ಹೋಂ ಸರ್ಕಲ್, ನೂರು ಅಡಿ ರಸ್ತೆ ಮೂಲಕ ಸಂಚರಿಸುವುದು.4. ಶಿಕಾರಿಪುರ ಸವಳಂಗದಿಂದ ಬರುವ ಎಲ್ಲಾ ಭಾರಿ ವಾಹನಗಳು, ಎಲ್ಲಾ ಬಸ್ಸುಗಳನ್ನು ಉಷಾ ನರ್ಸಿಂಗ್ ಹೋಂ, ಲಕ್ಷ್ಮೀ ಟಾಕೀಸ್, ಪೊಲೀಸ್ ಚೌಕಿ, ಆಯ್ಯೋಳ ಮುಖಾಂತರ ಸಾಗರ ರಸ್ತೆಯಲ್ಲಿ ಹೋಗುವುದು.5. ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ, ಎನ್ ಆರ್ ಪುರ ಕಡೆಗೆ ಹೋಗುವ ಎಲ್ಲಾ ವಾಹನಗಳು.ಸಂದೇಶ್ ಮೋಟರ್ಸ್,ಬೈ ಪಾಸ್ ರಸ್ತೆ, ಎಂ.ಆರ್.ಎಸ್ ಸರ್ಕಲ್ ಮೂಲಕ ಸಂಚರಿಸುವುದು. 6. ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ. ಶಿಕಾರಿಪುರ, ಸೊರಬ, ಹರಿಹರ, ದಾವಣಗೆರೆ ಹೋಗುವ ಎಲ್ಲ ಬಸ್‌ಗಳು ಮತ್ತು ಭಾರಿ ಸರಕು ವಾಹನಗಳು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್, ಆಲ್ಕೊಳ ಸರ್ಕಲ್, ಪೊಲೀಸ್ ಚೌಕಿ, ಉಷಾ ನರ್ಸಿಂಗ್ ಹೋಂ, ನವಳಂಗ ರಸ್ತೆ ಮೂಲಕ ಹೋಗುವುದು.
7. ಕೋಟೆ ಮಾರಿಕಾಂಬ ದೇವಸ್ಥಾನದ ಸುತ್ತ ಇರುವ ಎಲ್ಲಾ ರಸ್ತೆಯಲ್ಲಿ 500 ಮೀಟರ್ ವ್ಯಾಪ್ತಿಯಲ್ಲಿ ಎಲ್ಲಾ ವಾಹನಗಳ ಸಂಚಾರ ನಿಷೇಧ ಮಾಡುವುದು.8. ಮಾ.12 ರಂದು ಬೆಳಗಿನ ಜಾವ 3ರಿಂದ ರಾತ್ರಿ 11ರವರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಗಾಂಧಿಬಜಾರ್ ರಸ್ತೆಯಲ್ಲಿ ಶಿವಪ್ಪನಾಯಕ ಸರ್ಕಲ್‌ವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೆ, ಜಾತ್ರೆ ಮುಗಿಯುವವರೆಗೆ ಹೊಳೆ ಬನ್ ಸ್ಟಾಪ್‌ನ ಬೆಕ್ಕಿನ ಕಲ್ಮಠದಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್‌ವರೆಗೆ (ಕೋಟೆ ರಸ್ತೆ, ಎನ್.ಪಿ.ಎಂ. ರಸ್ತೆ) ಎಲ್ಲ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.- - - -11ಎಸ್‌ಎಂಜಿಕೆಪಿ01:
ಶಿವಮೊಗ್ಗದ ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ಅಂಗವಾಗಿ ದೇವಸ್ಥಾನ ಒಳಾಂಗಣದಲ್ಲಿ ಸಿದ್ಧಪಡಿಸಿರುವ ವಿಶೇಷ ಅಲಂಕಾರ. -11ಎಸ್‌ಎಂಜಿಕೆಪಿ02:ಶಿವಮೊಗ್ಗದ ಶ್ರೀ ಕೋಟೆ ಮಾರಿಕಾಂಬ ಜಾತ್ರಾ ಮಹೋತ್ಸವ ಅಂಗವಾಗಿ ಗಾಂಧಿಬಜಾರ್‌ನಲ್ಲಿ ನಿರ್ಮಿಸಿರುವ ನವದುರ್ಗೆ ಅಲಂಕಾರದ ಬೃಹತ್ ಮಹಾದ್ವಾರ.