ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು.

ಉಳ್ಳಾಲ: ಕೋಟೆಕಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಿವ್ಯ ಶೆಟ್ಟಿ ಅಧ್ಯಕ್ಷತೆಯಲ್ಲಿ ಗುರುವಾರ ಸಾಮಾನ್ಯ ಸಭೆ ನಡೆಯಿತು. ಗರ್ಭಕಂಠದ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ತಡೆಯುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಹೆಚ್ ಪಿ ವಿ ಉಚಿತ ವಿಶೇಷ ಲಸಿಕಾ ಅಭಿಯಾನದ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಪ್ರೀತಿ ಡಿ’ಸೋಜಾ ಮಾಹಿತಿ ನೀಡಿದರು.ಪ್ರತಿ ಗುರುವಾರ ಲಸಿಕೆ

ಗರ್ಭಕಂಠದ ಕ್ಯಾನ್ಸರ್ ವೈರಸ್‌ನಿಂದ ಉಂಟಾಗುವ ಗಂಭೀರ ಕಾಯಿಲೆಯಾಗಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರವು 9 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಹೆಚ್ ಪಿ ವಿಲಸಿಕೆ ನೀಡಲು ಮುಂದಾಗಿದೆ. ಮೊದಲ ಹಂತದಲ್ಲಿ 14–15 ವರ್ಷದ ಮಕ್ಕಳಿಗೆ ಮೂರು ತಿಂಗಳ ಕಾಲ ಲಸಿಕೆ ನೀಡಲಾಗುತ್ತಿದ್ದು, ಬಳಿಕ ಹಂತ ಹಂತವಾಗಿ 9–15 ವರ್ಷದೊಳಗಿನ ಎಲ್ಲ ಮಕ್ಕಳಿಗೂ ರಾಷ್ಟ್ರೀಯ ಇಮ್ಯುನೈಸೇಶನ್ ಕಾರ್ಯಕ್ರಮದಡಿ ಪ್ರತಿ ಗುರುವಾರ ಉಚಿತವಾಗಿ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು. ಈ ಸಂಬಂಧ ಶಾಲೆಗಳಲ್ಲಿ ಪೋಷಕರ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುತ್ತಿದ್ದು, ಆಶಾ ಕಾರ್ಯಕರ್ತೆಯರ ಮೂಲಕ ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಇದೇ ಸಭೆಯಲ್ಲಿ ಗ್ರಾಮಕರಣಿಕರ ಗೈರುಹಾಜರಿ ಹಾಗೂ ಬಡವರಿಗೆ ನಿವೇಶನ ನೀಡುವಲ್ಲಿ ನಡೆದಿರುವ ಅನ್ಯಾಯ ವಿರೋಧಿಸಿ ಆಡಳಿತಾರೂಢ ಹಾಗೂ ವಿರೋಧ ಪಕ್ಷದ ಸದಸ್ಯರು ಅಧ್ಯಕ್ಷರ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ವಸತಿ ಯೋಜನೆಗೆ ಸರ್ಕಾರಿ ಜಾಗ ಒದಗಿಸದೇ ಅಧಿಕಾರಿಗಳು ಬಡವರಿಗೆ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಹಾಗೂ ಗ್ರಾಮಕರಣಿಕರ ವಿರುದ್ಧ ಧಿಕ್ಕಾರ ಕೂಗಿದರು.ಕೋಟೆಕಾರು ಗ್ರಾಮದಲ್ಲಿ ನಿವೇಶನ ರಹಿತರು 2011ರಿಂದ ವಸತಿ ಯೋಜನೆಗಾಗಿ ಅರ್ಜಿ ಸಲ್ಲಿಸುತ್ತಿದ್ದರೂ ಬಡವರಿಗೆ ಸರ್ಕಾರಿ ನಿವೇಶನ ಗುರುತಿಸಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯ ಸುಜಿತ್ ಮಾಡೂರು ಆರೋಪಿಸಿದರು. ಈ ಕುರಿತು ಮಾಹಿತಿ ನೀಡಬೇಕಿದ್ದ ಹಿಂದಿನ ಹಾಗೂ ನೂತನ ಗ್ರಾಮಕರಣಿಕರು ಸಾಮಾನ್ಯ ಸಭೆಗಳಿಗೆ ಗೈರಾಗುತ್ತಿರುವುದರಿಂದ ನಿವೇಶನ ರಹಿತರ ಸಮಸ್ಯೆ ಯಾರ ಮುಂದೆ ಚರ್ಚಿಸಬೇಕು ಎಂದು ಅವರು ಪ್ರಶ್ನಿಸಿದರು.ನಿವೇಶನ ಇಲ್ಲ

ಪಕ್ಷೇತರ ಸದಸ್ಯ ಹರೀಶ್ ರಾವ್ ಮಾತನಾಡಿ, ಸರ್ಕಾರಿ ಜಾಗಗಳನ್ನು ಅತಿಕ್ರಮಿಸಿ ಕಟ್ಟಡಗಳು ನಿರ್ಮಾಣವಾಗುತ್ತಿದ್ದರೂ ಬಡವರಿಗೆ ನಿವೇಶನ ನೀಡಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ದಿವ್ಯ ಶೆಟ್ಟಿ, ಸರ್ಕಾರಿ ನಿವೇಶನಗಳನ್ನು ಪಟ್ಟಣ ಪಂಚಾಯಿತಿ ಹೆಸರಿಗೆ ವರ್ಗಾವಣೆ ಮಾಡುವಂತೆ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿ, ಈ ಕುರಿತು ಎಲ್ಲ ಸದಸ್ಯರ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರು. ಈ ಭರವಸೆಯ ಹಿನ್ನೆಲೆಯಲ್ಲಿ ಪಂಚಾಯಿತಿ ಸದಸ್ಯರು ಪ್ರತಿಭಟನೆಯನ್ನು ಹಿಂಪಡೆದರು.ಅಧ್ಯಕ್ಷರ ಟೇಬಲ್‌ ಮುಂದೆ ಕುಳಿತರು

ಪನೀರ್ ವಾರ್ಡ್‌ನಲ್ಲಿ ಮಳೆಯಿಂದ ಕಾಂಪೌಂಡ್ ಗೋಡೆ ಕುಸಿದಿದ್ದರೂ ತುರ್ತು ಕಾಮಗಾರಿಗೆ ಶಾಸಕ ನಿಧಿ ಅಥವಾ ಪಂಚಾಯಿತಿ ಅನುದಾನ ಲಭಿಸಿಲ್ಲ ಎಂದು ಆರೋಪಿಸಿ ಎಸ್‌ಡಿಪಿಐ ಸದಸ್ಯೆ ಸಲೀಮಾ ಬಿ ಅಧ್ಯಕ್ಷರ ಮೇಜಿನ ಮುಂದೆ ಕುಳಿತು ಸುಮಾರು 10 ನಿಮಿಷಗಳ ಕಾಲ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ನಡೆಸಿದರು. ಎಲ್ಲ ವಾರ್ಡ್‌ಗಳಿಗೆ ಅನುದಾನ ನೀಡಿದರೂ ತಮ್ಮ ವಾರ್ಡ್‌ನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಡೂರು ಹಾಗೂ ಪಂಚಾಯಿತಿ ವ್ಯಾಪ್ತಿಯ ಕೆಲವು ಭಾಗಕ್ಕೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಹಾಗೂ ಗೇಜ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳನ್ನು ಸದಸ್ಯ ಸುಜಿತ್ ಮಾಡೂರು ಸಭೆಯಲ್ಲಿ ಮುಂದಿಟ್ಟರು. ಈ ಸಂಬಂಧ ಪಂಚಾಯಿತಿ ನೀಡಿರುವ ದೂರವಾಣಿ ಸಂಖ್ಯೆಗೆ ಎಷ್ಟು ಕರೆಗಳು ಬಂದಿವೆ ಎಂಬುದನ್ನು ಬಹಿರಂಗಪಡಿಸುವಂತೆ ಅವರು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಪಂಚಾಯಿತಿ ಅಧಿಕಾರಿಗಳು ಪಂಚಾಯಿತಿಗೆ ಕೇವಲ 18 ಕರೆಗಳು ಮಾತ್ರ ಬಂದಿವೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಜಿತ್ ಮಾಡೂರು, ಸುಮಾರು 50 ಜನರ ಮೂಲಕ ತಾನೇ ಕರೆ ಮಾಡಲು ಪ್ರಯತ್ನಿಸಿದ್ದರೂ ಯಾವುದೇ ಕರೆ ಸ್ವೀಕರಿಸಲ್ಪಡಲಿಲ್ಲ ಎಂದು ಎಚ್ಚರಿಸಿದರು.ಮುಖ್ಯಾಧಿಕಾರಿ ಮಾಲಿನಿ, ಉಪಾಧ್ಯಕ್ಷ ಪ್ರವೀಣ್, ಸ್ಥಾಯಿ ಸಮಿತಿ ಅಧ್ಯಕ್ಷ ಧೀರಜ್ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.