ಸಾರಾಂಶ
ಮಂಗಳೂರು : ಉಳ್ಳಾಲದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳನ್ನು ತಮಿಳುನಾಡು ನ್ಯಾಯಾಲಯಕ್ಕೆ ಹಾಜರುಪಡಿಸಿ ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸ್ಥಳ ಮಹಜರು ವೇಳೆ ಪರಾರಿಗೆ ಯತ್ನಿಸಿ ಪೊಲೀಸ್ ಗುಂಡೇಟಿಗೆ ಒಳಗಾದ ಆರೋಪಿ ಕಣ್ಣನ್ ಮಣಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ದರೋಡೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳನ್ನು ಬುಧವಾರ ತಮಿಳುನಾಡಿನ ತಿರುನೆಲ್ವೆಲಿ ಜಿಲ್ಲೆಯ ಅಂಬಾಸಮುದ್ರಂ ಕೋರ್ಟ್‌ಗೆ ಹಾಜರುಪಡಿಸಲಾಯಿತು. ಆರೋಪಿಗಳಾದ ಮುರುಗಂಡಿ ದೇವರ್ ಹಾಗೂ ಯೋಸುವಾ ರಾಜೇಂದ್ರನ್ ನನ್ನು ನ್ಯಾಯಮೂರ್ತಿ ಅಚ್ಯುತನ್ ಅವರ ಎದುರು ಹಾಜರುಪಡಿಸಲಾಯಿತು. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಫಿಯೇಟ್ ಕಾರು, ಎರಡು ಪಿಸ್ತೂಲು, 4 ಲೈವ್ ಬುಲೆಟ್ಸ್, 3 ಲಕ್ಷ ರು. ನಗದು, 2 ಕೆ. ಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೋರ್ಟ್‌ಗೆ ಪೊಲೀಸರು ಮಾಹಿತಿ ನೀಡಿದರು. ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಆರೋಪಿಗಳ ಹೆಚ್ಚಿನ ತನಿಖೆಗಾಗಿ ಪೊಲೀಸರು ಮಂಗಳೂರಿಗೆ ಕರೆ ತರಲಾಗುತ್ತಿದೆ.
ಜ.17ರಂದು ನಡೆದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಜನವರಿ 20ರಂದು ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರ ತಂಡ ಇಬ್ಬರು ಆರೋಪಿಗಳನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿತ್ತು. ಇನ್ನೋರ್ವನನ್ನು ಮುಂಬೈನಲ್ಲಿ ಬಂಧಿಸಿದ್ದರು. ಇನ್ನೂ ಆರು ಮಂದಿ ಆರೋಪಿಗಳ ಬಂಧನ ಬಾಕಿ ಇದೆ.
ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದ ಅಮ್ಮಕೋವಿಲ್ ನಿವಾಸಿ ಮುರುಗಂಡಿ ದೇವರ್ (36), ಮುಂಬಯಿಯ ಡೊಂಬಿವಿಲಿ ಪಶ್ಚಿಮ ಗೋಪಿನಾಥ್ ಚೌಕ್ ರಾಮ್ಕಾಭಾಯಿ ನಿವಾಸಿ ಯೋಸುವಾ ರಾಜೇಂದ್ರನ್ (35) ಮತ್ತು ಮುಂಬಯಿ ಚೆಂಬೂರು ತಿಲಕ್‌ನಗರ ನಿವಾಸಿ ಕಣ್ಣನ್ ಮಣಿ (36) ಬಂಧಿತ ಆರೋಪಿಗಳು.ಮುಂಬೈನಲ್ಲೂ ದರೋಡೆ ಮಾಡಿದ್ದರು:
ಕೋಟೆಕಾರು ಬ್ಯಾಂಕ್ ದರೋಡೆ ಕೃತ್ಯ ಎಸಗಿದ್ದ ಆರೋಪಿಗಳ ಪೈಕಿ ಮುರುಗಂಡಿ ದೇವರ್ ಈ ಹಿಂದೆಯೂ ಮುಂಬೈನಲ್ಲಿ ಇದೇ ರೀತಿ ಹಣಕಾಸು ಸಂಸ್ಥೆಯೊಂದನ್ನು ದರೋಡೆ ನಡೆಸಿದ್ದ ಕೃತ್ಯದಲ್ಲಿ ಭಾಗಿಯಾಗಿದ್ದ. 2016ರ ಆಗಸ್ಟ್ 6 ರಂದು ನವಿ ಮುಂಬೈನ ಪ್ರಮುಖ ಹಣಕಾಸು ಸಂಸ್ಥೆಯನ್ನು ದೋಚಿ 20 ಕೆಜಿ ಚಿನ್ನಾಭರಣ ಹೊತ್ತೊಯ್ದಿದ್ದರು. ಅಂದು ಕೂಡ ಮುರುಗಂಡಿ ದೇವರ್ ತನ್ನ ಫಿಯೇಟ್ ಕಾರನ್ನು ಕೃತ್ಯಕ್ಕೆ ಬಳಸಿದ್ದು ಚಾಲಕನಾಗಿ ಸಹಕರಿಸಿದ್ದ ಎನ್ನುವ ಮಾಹಿತಿ ದೊರೆತಿದೆ.ದರೋಡೆಗೆ ಸಂಬಂಧಿಸಿ ಮುರುಗಂಡಿ ದೇವರ್ ಸೇರಿ ಒಟ್ಟು ಏಳು ಮಂದಿಯನ್ನು 2018ರಲ್ಲಿ ಬಂಧಿಸಲಾಗಿತ್ತು. 20 ಕೆಜಿ ಚಿನ್ನಾಭರಣ (ಆಗ 6 ಕೋಟಿ ರು. ಮೌಲ್ಯ) ಮತ್ತು 9.50 ಲಕ್ಷ ರು. ನಗದು ದರೋಡೆ ಆಗಿತ್ತು. ಗ್ಯಾಂಗ್ ಲೀಡರ್ ಅರ್ಪಿತ್ ರಾಜ್ ನಾಡಾರ್, ಮುರುಗಂಡಿ, ಸುಬ್ರಹ್ಮಣ್ಯನ್ ಸೇರಿದಂತೆ ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಕೋಕಾ ಏಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪ್ರಕರಣದಲ್ಲಿ ಅರ್ಪಿತ್ ರಾಜ್ ನಾಡಾರ್ ಮತ್ತು ಸುಬ್ರಹ್ಮಣ್ಯನ್, ಮುರುಗಂಡಿ ದೇವರ್ ಪ್ರಮುಖ ಆರೋಪಿಗಳಾಗಿದ್ದರು. ಮುರುಗಂಡಿ ದೇವರ್ ಆಗಷ್ಟೇ ಕೃತ್ಯಕ್ಕೆ ಇಳಿದಿದ್ದು, ಸುಬ್ರಹ್ಮಣ್ಯನ್ ಸಹಚರನಾಗಿ ಧಾರಾವಿ ಗ್ಯಾಂಗ್ ಸೇರಿಕೊಂಡಿದ್ದ. ಇದಕ್ಕೂ ಮೊದಲು 2012ರಲ್ಲಿ ಮುರುಗಂಡಿ ಮುಂಬೈನಲ್ಲಿ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.
ಮುಂಬೈ ದರೋಡೆ ಪ್ರಕರಣದಲ್ಲಿ 2021ರ ಸೆಪ್ಟಂಬರ್ 2ರಂದು ಮುರುಗಂಡಿ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಇವರು ಜೈಲಿನಲ್ಲಿದ್ದಾಗಲೇ ಮಂಗಳೂರಿನ ವ್ಯಕ್ತಿಯೊಬ್ಬ ಅದೇ ಜೈಲಿನಲ್ಲಿದ್ದು ಸ್ನೇಹಿತರಾಗಿದ್ದರು. ನಂತರ ಧಾರಾವಿ ತಂಡದಲ್ಲಿ ಸಕ್ರಿಯವಾಗಿದ್ದರು ಎಂದು ಹೇಳಲಾಗಿದೆ. ಸದ್ಯಕ್ಕೆ ಪೊಲೀಸರು ಗುರುತಿಸಿರುವ ಪ್ರಕಾರ, ಮುರುಗಂಡಿ ತಂಡದಲ್ಲಿ ಇಬ್ಬರು ಉತ್ತರ ಪ್ರದೇಶ, ಇಬ್ಬರು ರಾಜಸ್ತಾನಿ, ಮತ್ತೊಬ್ಬ ಮಂಗಳೂರಿನ ಇದ್ದಾನೆ. ಇವರಲ್ಲಿ ಕೋಟೆಕಾರು ಬ್ಯಾಂರ್ ದರೋಡೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ.