ಕುಂದಾಪುರ: ಕೋಟೇಶ್ವರದ ಲೋಟಸ್ ಎಡ್ಜ್ ಕ್ಯಾಂಪಸ್‌ನಲ್ಲಿ ಸುಲೋಚನಾ ಸರ್ವೋತ್ತಮ ಎಜುಕೇಶನಲ್ ಟ್ರಸ್ಟ್ ಅಡಿಯಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ಚಿರಂತನ ಶಿಕ್ಷಣ ಸಂಸ್ಥೆಗಳು ಉದ್ಘಾಟನಾ ಸಮಾರಂಭ ಮೇ 21ರಂದು ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕಿ ಡಾ. ಚಿಂತನಾ ರಾಜೇಶ್ ತಿಳಿಸಿದ್ದಾರೆ.
ಸೋಮವಾರ ಸಂಸ್ಥೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಬದುಕಿಗೆ ಪೂರಕವಾದ ಸಮಗ್ರ ಶಿಕ್ಷಣ, ಗುಣಮಟ್ಟದ ಶಿಕ್ಷಕರ ತರಬೇತಿ ಹಾಗೂ ಮಕ್ಕಳ ಮಾನಸಿಕ ಆರೋಗ್ಯದ ಅಗತ್ಯಗಳನ್ನು ಒಂದೇ ಸೂರಿನಡಿ ಪೂರೈಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಸಂಸ್ಥೆಯನ್ನು ಪ್ರಾರಂಭಿಸಲಾಗುತ್ತಿದೆ.ಮಗುವಿನ ಜೀವನದ ಆರಂಭಿಕ 2000 ದಿನಗಳ ಬೌದ್ಧಿಕ, ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, ವೈಜ್ಞಾನಿಕ ಕಲಿಕಾ ಮಾದರಿಯೊಂದಿಗೆ ಮಗು ಸ್ನೇಹಿ, ಫೌಂಡೇಶನ್ ಸ್ಕೂಲ್ ಪ್ರೀ-ಸ್ಕೂಲ್ ಶಿಕ್ಷಣ ನೀಡಲಾಗುತ್ತದೆ ಹಾಗೂ ಪ್ರೀ-ಸ್ಕೂಲ್ ಹಂತದಲ್ಲಿ ಬೋಧಿಸುವ ಶಿಕ್ಷಕರನ್ನು ಸಿದ್ಧಪಡಿಸಲು ಉನ್ನತ ಗುಣಮಟ್ಟದ ಪ್ರೀ-ಸ್ಕೂಲ್ ಟೀಚರ್ ಟ್ರೈನಿಂಗ್ ಕೋರ್ಸ್ ಆರಂಭಿಸಲಾಗುತ್ತಿದೆ.
ಪಿಯುಸಿ/ಡಿಗ್ರಿ ಆದವರು ಮಾತ್ರವಲ್ಲದೆ, ಈ ವರ್ಷದಿಂದ ಎಸ್ಸೆಸ್ಸೆಲ್ಸಿ ಮುಗಿಸಿದವರಿಗೂ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ 2 ಬ್ಯಾಚ್‌ಗಳು ಯಶಸ್ವಿಯಾಗಿ ತರಬೇತಿ ಮುಗಿಸಿದ್ದು, ತರಬೇತಿ ಪಡೆದುಕೊಂಡವರಿಗೆ ಶೇ.100 ಉದ್ಯೋಗಾವಕಾಶ ದೊರಕಿದೆ. ಪ್ರಸ್ತುತ 3ನೇ ವರ್ಷದ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಉದ್ಯೋಗದಲ್ಲಿ ಇರುವವರಿಗೆ ಮತ್ತು ಇಲ್ಲದವರಿಗೆ ಪ್ರತ್ಯೇಕ ತರಬೇತಿ ವ್ಯವಸ್ಥೆ ಇದ್ದು, ಅಧಿಕೃತ ಪ್ರಮಾಣಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.ವಿವಿಧ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗಾಗಿ ಇನ್-ಸರ್ವಿಸ್ ಮತ್ತು ಪ್ರಿ-ಸರ್ವಿಸ್ ಪುನಶ್ಚೇತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ಇಂದಿನ ಅಗತ್ಯಕ್ಕೆ ತಕ್ಕಂತೆ ಮಕ್ಕಳ ಮತ್ತು ಹದಿಹರೆಯದವರಿಗಾಗಿ ಶಾಲಾ ಆಧಾರಿತ ವಿಶೇಷ ಆಪ್ತ ಸಮಾಲೋಚನೆ ಹಾಗೂ ವೃತ್ತಿಪರ ಮಾರ್ಗದರ್ಶನವನ್ನು ನೀಡುವ ಕೇಂದ್ರ ಪ್ರಾರಂಭಿಸಲಾಗಿದೆ.
ಭವಿಷ್ಯದಲ್ಲಿ ಹೆಚ್ಚು ಬೇಡಿಕೆ ಇರುವ ಕೌನ್ಸೆಲಿಂಗ್ ಮತ್ತು ಮಾರ್ಗದರ್ಶನ ಕ್ಷೇತ್ರಕ್ಕೆ ಪೂರಕವಾದ ಹಾಗೂ ಕೌಶಲ್ಯಾಧಾರಿತ ವೃತ್ತಿಪರ ಕೋರ್ಸ್‌ಗಳನ್ನು ಇಲ್ಲಿ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎನ್‌ಐಓಎಸ್ ವಿಭಾಗಗಳನ್ನು ಸಂಸ್ಥೆಗೆ ಸೇರಿಸುವ ಆಶಯವನ್ನು ಹೊಂದಲಾಗಿದೆ ಎಂದು ವಿವರಿಸಿದರು.21ರಂದು ನಡೆಯುವ ಸಮಾರಂಭದಲ್ಲಿ ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ.ಎಂ. ಸುಕುಮಾರ್ ಶೆಟ್ಟಿ ಸಂಸ್ಥೆಯನ್ನು ಉದ್ಘಾಟಿಸುವರು. ಕುಂದಾಪುರದ ಶ್ರೀಮಾತಾ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಕಾಶ್ ತೋಳಾರ್, ವಲಯ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಉದ್ಯಮಿ ಕಮಲ ಕಿಶೋರ್ ಹೆಗ್ಡೆ ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಕಾಡೆಮಿಕ್ ಲೀಡ್ ವಿಲ್ಮಾ ಡಿಸಿಲ್ವಾ ಮತ್ತು ಪ್ರಾಂಶುಪಾಲರಾದ ವಿನುತಾ ಬಿ. ಶೆಟ್ಟಿ ಇದ್ದರು.