ಜ್ಞಾನ ವಿಸ್ತರಣೆಗೆ ಓದುವ ಹವ್ಯಾಸ ರೂಢಿಸಿಕೊಳ್ಳಿ

| Published : Apr 28 2025, 12:50 AM IST

ಸಾರಾಂಶ

ಪ್ರಸ್ತುತ ಕಾಲಮಾನದಲ್ಲಿ ಬರೀ ಉತ್ತಮ ಫಲಿತಾಂಶದ ಕೇಂದ್ರೀಕೃತವಾಗಿ ಅಂಕ ಗಳಿಕೆಗಾಗಿ ಓದುವ ಪ್ರವೃತ್ತಿ ಹೆಚ್ಚಾಗಿದೆ,

ಕನ್ನಡಪ್ರಭ ವಾರ್ತೆ ನಂಜನಗೂಡು.ಮೊಬೈಲ್, ಟಿವಿ ಬಳಕೆಯಿಂದ ಜ್ಞಾನ ಸಂಪಾದನೆ ಅಸಾಧ್ಯ ಆದ್ದರಿಂದ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.ನಂಜನಗೂಡು ತಾ, ಅಖಿಲ ಭಾರತ ಸಾಹಿತ್ಯ ಪರಿಷತ್ ವತಿಯಿಂದ ನೀಲಕಂಠೇಶ್ವರ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕೊತ್ತಲವಾಡಿ ಶಿವಕುಮಾರ್ ರವರ ಸಂಗಾತ- ವಿಮರ್ಶಾ ಲೇಖನಗಳು ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಮಾನದಲ್ಲಿ ಬರೀ ಉತ್ತಮ ಫಲಿತಾಂಶದ ಕೇಂದ್ರೀಕೃತವಾಗಿ ಅಂಕ ಗಳಿಕೆಗಾಗಿ ಓದುವ ಪ್ರವೃತ್ತಿ ಹೆಚ್ಚಾಗಿದೆ, ಗೂಗಲ್ ನಲ್ಲಿ ವಿಷಯಗಳ ಬಗ್ಗೆ ಆ ಕ್ಷಣದ ಮಾಹಿತಿ ಸಿಗುತ್ತದೆ ಆದರೆ ಪುಸ್ತಕ ಓದುವುದರಿಂದ ಬಹುಕಾಲದವರೆಗೆ ಉಳಿಯುವಂತಹ ಮಾಹಿತಿ ಸಿಗುತ್ತದೆ, ಜ್ಞಾನ ಮನುಷ್ಯನನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸಲು ನೆರವಾಗುತ್ತದೆ ಎಂದರು, ಯುಪಿಎಸ್ಸಿ ಪರೀಕ್ಷೆಗಳಲ್ಲಿ ಸಾಧನೆಗೈದ ಸಾಧಕರು ನಾವು ಟಿವಿ ಮತ್ತು ಮೊಬೈಲ್ ಬಳಕೆಯಿಂದ ಸಾಧನೆಗೈದೆವು ಎಂದು ಹೇಳುವುದಿಲ್ಲ ಬದಲಾಗಿ ಅವರ ಸಾಧನೆಗೆ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳನ್ನು ಪರಾಮರ್ಶೆ ಮಾಡುವುದು, ದಿನಪತ್ರಿಕೆಗಳನ್ನು ಓದುವುದು ನನ್ನ ಸಾಧನೆಗೆ ಸಹಾಯವಾಯಿತು ಎನ್ನುತ್ತಾರೆ. ಆದ್ದರಿಂದ ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರು ಜ್ಞಾನಾರ್ಜನೆಗಾಗಿ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳವ ಮೂಲಕ ಸಾಹಿತ್ಯದ ಪೋಷಣೆ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಕೊತ್ತಲವಾಡಿ ಶಿವಕುಮಾರ್ ರವರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ, ಸಾಹಿತ್ಯ ಓದಿದವರು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗುವುದು ಸಹಜ ಆದರೆ ಶಿವಕುಮಾರ್ ರವರು ಅರ್ಥಶಾಸ್ತ್ರ ವಿಷಯದಲ್ಲಿ ಪದವಿಗಳಿಸಿ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಉತ್ತಮ ಬೆಳವಣಿಗೆಯಾಗಿದೆ, ಅಂತೆಯೇ ರೈತರು, ಕೃಷಿಕರು, ಸೇರಿದಂತೆ ವಿವಿಧ ರಂಗದಲ್ಲಿ ತೊಡಗಿರುವವರು ಸಾಹಿತ್ಯ ರಚನೆಯಲ್ಲಿ ತೊಡಗಬೇಕು ಆಗ ಕನ್ನಡ ಸಾಹಿತ್ಯ ಲೋಕಕ್ಕೆ ವೈವಿಧ್ಯಮಯ ಸಾಹಿತ್ಯ ರಚನೆಯಾಗಿ ಕನ್ನಡ ಸಾಹಿತ್ಯ ಲೋಕ ಸಂಪತ್ಭರಿತವಾಗಲಿದೆ ಎಂದರು.

ವಿಶ್ರಾಂತ ಪ್ರಾಧ್ಯಾಪಕ ಡಾ.ಸತೀಶ್‌ ಚಂದ್ರ ಕೃತಿ ಕುರಿತು ಮಾತನಾಡಿದರು. ಅಖಿಲ ಭಾರತ ಸಾಹಿತ್ಯ ಪರಿಷತ್ ನ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಜಗದೀಶ್ ಅಧ್ಯಕ್ಷತೆ ವಹಿಸಿದ್ದರು, ಡಿವಿಜಿ ಬಳಗದ ಸಂಸ್ಥಾಪಕ ಅಧ್ಯಕ್ಷ ಗೋಪಿನಾಥ್, ನೀಲಕಂಠೇಶ್ವರ ಶಾಲೆಯ ಕಾರ್ಯದರ್ಶಿ ಎನ್‌.ಎ. ಕುಮಾರಸ್ವಾಮಿ ಮಾತನಾಡಿದರು. ಮಹಿಮಾ ಪ್ರಕಾಶನ ಕೆ.ವಿ. ಶ್ರೀನಿವಾಸ್, ಉಪಸ್ಥಿತರಿದ್ದರು. ಅಖಿಲ ಭಾರತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಪ್ರಾಸ್ತಾವಿಕ ಭಾಷಣ ಮಾಡಿದರು, ಶಿವಸ್ವಾಮಿ ಪ್ರಾರ್ಥಿಸಿದರು, ಶೋಭಾ ನಾಗಶಯನ ನಿರೂಪಿಸಿದರು, ಚೇತನ್ ಶರ್ಮ ವಂದಿಸಿದರು. ಲೇಖಕರನ್ನು ಇಂದಿರೇಶ್‌ ಪರಿಚಯಿಸಿದರು. ---

ಬಾಕ್ಸ್‌ಓದುಗನೇ ಮೊದಲ ವಿಮರ್ಶಕ- ಪ್ರೊ.ಸತೀಶ್‌ ಚಂದ್ರಕೊತ್ತಲವಾಡಿ ಶಿವಕುಮಾರ್‌ ಅವರ ಸಂಗಾತ- ವಿಮರ್ಶಾ ಲೇಖನಗಳು ಕೃತಿ ಕುರಿತು ವಿಶ್ರಾಂತ ಪ್ರಾಧ್ಯಾಪಕ ಡಾ.ಸತೀಶ್ ಚಂದ್ರ ಮಾತನಾಡಿ, ಯಾವುದೇ ಕೃತಿಗಾದರೂ ಓದುಗನೇ ಮೊದಲ ವಿಮರ್ಶಕ ಎಂದರುಯಸಾಹಿತ್ಯವನ್ನು ಸೂಕ್ಷ್ಮವಾಗಿ ಗ್ರಹಿಸಿ ಸೃಜನಾತ್ಮಕತೆಯಿಂದ ವಿಮರ್ಶಾ ಲೇಖನದ ಮೂಲಕ ಓದುಗರ ಸಾಹಿತ್ಯದ ಬಗ್ಗೆ ಪ್ರೇರೇಪಣೆಗೊಳಿಸುವ ಜವಾಬ್ದಾರಿ ವಿಮರ್ಶಕರಿಗೆ ಇದೆ ಎಂದರು.ಆದರೆ ಇಂದಿನ ಕಾಲಮಾನದಲ್ಲಿ ಸಾಹಿತ್ಯವನ್ನು ಪರಿಚಯಿಸುವ ಕೆಲಸವಾಗುತ್ತಿಲ್ಲ, ಲೇಖಕರೇ ನಾನು ಇಂತಹ ಸಾಹಿತ್ಯ ರಚಿಸಿದ್ದೇನೆ ಎಂದು ಹೇಳುವಂತಹ ಸನ್ನಿವೇಶ ನಿರ್ಮಾಣವಾಗಿದೆ, ಎಂದು ಅವರು ವಿಷಾದಿಸಿದರು.ಅಂತಹ ಕೊರತೆಯನ್ನು ನಿವಾರಿಸಿ ಕೊತ್ತಲವಾಡಿ ಶಿವಕುಮಾರ್ ಅವರು ಸಂಗಾತ ವಿಮರ್ಶಾ ಲೇಖನದ ಮೂಲಕ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸುಮಾರು 20 ಲೇಖಕರ ಬಗ್ಗೆ ಮತ್ತು ಸಾಹಿತ್ಯವನ್ನು ಓದುಗರಿಗೆ ಪರಿಚಯಿಸಿ ಸಾಹಿತ್ಯವನ್ನು ಓದುವಂತೆ ಪ್ರೇರೇಪಣೆಗೊಳಿಸುವ ಕೆಲಸವನ್ನು ಮಾಡಿ ಉದಯೋನ್ಮುಖ ಕವಿಗಳಿಗೆ ಉತ್ತೇಜನ ನೀಡಿದ್ದಾರೆ ಎಂದರು.