ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕಿನ ಕೊತ್ನಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಶಾಸಕರ ನೇತೃತ್ವದಲ್ಲಿ ಗ್ರಾಮಸ್ಥರ ಸಭೆ ನಡೆಯಿತು.ಸಭೆಯಲ್ಲಿ ತಾಲೂಕಿನ ಗಡಿ ಭಾಗದಲ್ಲಿರುವ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊತ್ನಳ್ಳಿ, ನಗರಳ್ಳಿ, ನಡ್ಲಕೊಪ್ಪ ಸೇರಿದಂತೆ ಸಾಕಷ್ಟು ಗ್ರಾಮಗಳು ಸಮಸ್ಯೆಗಳ ನಡುವೆ ಜೀವನ ನಡೆಸಲಾಗುತ್ತಿದೆ. ಈಗಾಗಲೇ ಕಾಫಿ, ಕಾಳು ಮೆಣಸು ಶೀತ ಹೆಚ್ಚಾದ ಪರಿಣಾಮ ನಷ್ಟವಾಗಿದೆ. ಇದರೊಂದಿಗೆ ಈ ಭಾಗದಲ್ಲಿ ಹೆಚ್ಚಾಗಿ ಸಿ ಮತ್ತು ಡಿ ಮತ್ತು ಸೆಕ್ಷನ್ ೪ ಎಂಬ ಭೂತ ಇಲ್ಲಿನವರನ್ನು ಕಾಡುತ್ತಿದೆ. ಕೂಡಲೇ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಗ್ರಾಮದ ರಾಜೇಶ್ ಶಾಸಕರಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಸಿ ಮತ್ತು ಡಿ ಮತ್ತು ಸೆಕ್ಷನ್ ೪ ಸಮಸ್ಯೆ ನಿನ್ನೆ ಮೊನ್ನೆಯದಲ್ಲ. ಯಾವ ರೈತರನ್ನು ಒಕ್ಕೆಲೆಬ್ಬಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚೆಯಾಗಿಲ್ಲ. ಜಾಗದ ಸಮಸ್ಯೆ ೧೯೯೧ರಿಂದ ಪ್ರಾರಂಭವಾಗಿದೆ. ಕಂದಾಯ ಇಲಾಖೆಯವರ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಗೂಗಲ್ ಸರ್ವೆ ನಡೆಸಿ ಸರ್ಕಾರಿಕ್ಕೆ ವರದಿ ನೀಡಿದ ಪರಿಣಾಮ ಸಮಸ್ಯೆಗೆ ಕಾರಣವಾಗಿದೆ. ತಕ್ಷಣಕ್ಕೆ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಮುಂದಿನ ವಾರದಲ್ಲಿ ಕರೆತಂದು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು. ಮುಂದಿನ ದಿನಗಳಲ್ಲಿ ಅರಣ್ಯ, ಕಂದಾಯ ಮತ್ತು ಸಂಬಂಧಿಸಿದ ರೈತರನ್ನು ಸೇರಿಸಿ ಜಂಟಿ ಸರ್ವೆ ಮಾಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.ಈ ಭಾಗದಲ್ಲಿ ಕೆಲವು ರಸ್ತೆಗಳು ಹಾಳಾಗಿರುವುದು ಮತ್ತು ಚಿಕ್ಕ ರಸ್ತೆಗಳಿರುವುದು ಕಂಡುಬಂದಿದೆ. ಈಗಾಗಲೇ ಸರ್ಕಾರ ವಿಶೇಷ ಅನುದಾನ ನೀಡಿದ್ದು, ಮಳೆಗಾಲ ಮುಗಿದ ನಂತರ ಡಿಸೆಂಬರ್ ತಿಂಗಳಿನಲ್ಲಿ ರಸ್ತೆ ಕೆಲಸ ಮಾಡಿಸಲಾಗುವುದು. ಕೃಷಿ ನಷ್ಟ ಪರಿಹಾರಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಮಳೆ ಹೆಚ್ಚಾದ ಕಾರಣ ಅಧಿಕಾರಿಗಳು ನಷ್ಟದ ಪರಿಶೀಲನೆ ಮಾಡಲು ಸಾದ್ಯವಾಗುತ್ತಿಲ್ಲ. ಮಳೆ ನಿಂತ ತಕ್ಷಣ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಲಿದ್ದಾರೆ. ಶೇ.೩೩ಕ್ಕೂ ಹೆಚ್ಚಿನ ನಷ್ಟವಾದ ಎಲ್ಲ ರೈತರಿಗೂ ಸೂಕ್ತ ಪರಿಹಾರ ನೀಡಲಾಗುವುದು. ಸರ್ಕಾರ ಸಿ ಮತ್ತು ಡಿ. ಭೂಮಿಗೆ ಹಕ್ಕು ಪತ್ರ ನೀಡಲು ಸಾಧ್ಯವಾಗದಿದ್ದಲ್ಲಿ ಕನಿಷ್ಟ ೩೦ ವರ್ಷಗಳ ವರೆಗೆ ಕೃಷಿ ಭೂಮಿಯನ್ನು ಗೇಣಿಗಾದರೂ ರೈತರಿಗೆ ನೀಡಬೇಕಾಗಿದೆ. ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಬೆರೆಸದೆ, ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಶಾಂತಳ್ಳಿಯ ಕೆ.ಎಂ. ಲೋಕೇಶ್, ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ರಮ್ಯ, ಅಂಗನವಾಡಿ ಶಿಕ್ಷಕಿ ಸುಪ್ರಿಯ ಹಾಗೂ ಗ್ರಾಮಸ್ಥರು ಇದ್ದರು.