ಮನಸ್ಸಿನ ಹಸಿವೆ ತೀರಿಸಲು ಕೋಟಿ ಗೀತಾ ಯಜ್ಞ: ಶ್ರೀ ಸುಗುಣೇಂದ್ರ ತೀರ್ಥರು

| Published : Jan 09 2024, 02:00 AM IST

ಮನಸ್ಸಿನ ಹಸಿವೆ ತೀರಿಸಲು ಕೋಟಿ ಗೀತಾ ಯಜ್ಞ: ಶ್ರೀ ಸುಗುಣೇಂದ್ರ ತೀರ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಉದುಪಿ ರಥಬೀದಿಯಲ್ಲಿ ಭಾವಿ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಪೌರ ಸನ್ಮಾನ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಈ ಜಗತ್ತಿನ ದೊಡ್ಡ ಸಮಸ್ಯೆ ಹೊಟ್ಟೆಯ ಹಸಿವು ಇಲ್ಲ, ಅದು ಮನಸ್ಸಿನ ಹಸಿವು. ಮನಸ್ಸಿನ ಹಸಿವು ತೀರಿದರೆ ಆ ಮೂಲಕ ಹೊಟ್ಟೆಯ ಹಸಿವು ಕೂಡ ತೀರುತ್ತದೆ ಎಂದು ಭಾವಿ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಅವರು ಸೋಮವಾರ ಸಂಜೆ ರಥಬೀದಿಯಲ್ಲಿ ತಮ್ಮ ಪಟ್ಟ ಶಿಷ್ಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರೊಂದಿಗೆ ಉಡುಪಿ ಜನತೆಯ ಪರವಾಗಿ ನಗರಸಭೆ-ಜಿಲ್ಲಾಡಳಿತದ ವತಿಯಿಂದ ಪೌರಸನ್ಮಾನ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.

ಉಡುಪಿಯ ಕೃಷ್ಣನನ್ನು ಅನ್ನಬ್ರಹ್ಮ ಎಂದು ಕರೆಯಲಾಗುತ್ತದೆ. ಆತ ಕೇವಲ ಹೊಟ್ಟೆಗೆ ಅನ್ನ ನೀಡಿದ್ದಲ್ಲ, ಗೀತೆಯ ಮೂಲಕ ಮನಸ್ಸಿಗೂ ಅನ್ನ ನೀಡಿದ್ದಾನೆ. ಗೀತೆಯು ಮನಸ್ಸಿನ ಹಸಿವೆ ತೀರಿಸುತ್ತದೆ, ಆದ್ದರಿಂದ ಗೀತೆಯನ್ನು ಬದುಕಿನಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ. ಇದೇ ತಮ್ಮ ಕೋಟಿ ಗೀತಾ ಯಜ್ಞಕ್ಕೆ ಕಾರಣ ಎಂದರು.

ಉಭಯ ಶ್ರೀಗಳನ್ನು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಉಡುಪಿ ಜಿಲ್ಲೆಯ ಜನತೆ ಪರವಾಗಿ ಸನ್ಮಾನಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್‌ ಎ. ಸುವರ್ಣ ವಹಿಸಿದ್ದರು. ಮಣಿಪಾಲ ಮುನಿಯಾಲು ಆಯುರ್ವೇದ ಕಾಲೇಜಿನ ಉಪಪ್ರಾಚಾರ್ಯ ಪ್ರೊ.ಹರಿಪ್ರಸಾದ್ ಭಟ್ ಹೆರ್ಗ ಶ್ರೀಗಳ ಅಭಿನಂದನಾ ಭಾಷಣ ಮಾಡಿದರು.

ಅಭ್ಯಾಗತರಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಶ್ರೀಕೃಷ್ಣನ್ ಎಚ್., ಕೆನರಾ ಬ್ಯಾಂಕ್ ಮಂಗಳೂರು ಪ್ರಧಾನ ವ್ಯವಸ್ಥಾಪಕ ಮಂಜುನಾಥ ಜಿ.ಪಂಡಿತ್, ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ, ಜಾಗತಿಕ ಬಂಟರ ಒಕ್ಕೂಟದ ಐಕಳ ಹರೀಶ್ ಶೆಟ್ಟಿ, ಕುಂಭಾಶಿಯ ರಮಣ ಉಪಾಧ್ಯಾಯ ಆಗಮಿಸಿದ್ದರು.

ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಪ್ರ.ಕಾರ್ಯದರ್ಶಿ ಐಕಳ ದೇವಿಪ್ರಸಾದ್ ಶೆಟ್ಟಿ, ಎಎಸ್ಪಿ ಪರಮೇಶ್ವರ ಹೆಗಡೆ, ಪ್ರದೀಪ್ ಕುಮಾರ್ ಕಲ್ಕೂರ ವೇದಿಕೆಯಲ್ಲಿದ್ದರು.

ನಗರಸಭೆಯ ಕಂದಾಯ ಅಧಿಕಾರಿ ಸಂತೋಷ್ ಅಭಿನಂದನಾ ಪತ್ರ ವಾಚಿಸಿದರು. ಪೌರಾಯುಕ್ತ ರಾಯಪ್ಪ ಸ್ವಾಗತಿಸಿದರು. ಪುತ್ತಿಗೆ ಮಠದ ವಿದ್ವಾಂಸ ಗೋಪಾಲ ಆಚಾರ್ಯರು ಕಾರ್ಯಕ್ರಮ ನಿರೂಪಿಸಿದರು.ಪುತ್ತಿಗೆ ಪರ್ಯಾಯ - ವಿಶ್ವ ಪರ್ಯಾಯ

ಪುತ್ತಿಗೆ ಮಠದ ಪರ್ಯಾಯ ಎಂದರೆ ಜನರ ಪರ್ಯಾಯ, ಈ ಬಾರಿ ವಿಶ್ವಾದ್ಯಂತ ಭಕ್ತರಿಂದ ಗೀತೆಯ ಉಪಾಸನೆ ಈ ಪರ್ಯಾಯದಲ್ಲಿ ನಡೆಯುತ್ತಿರುವುದರಿಂದ ಇದು ವಿಶ್ವ ಪರ್ಯಾಯವಾಗುತ್ತಿದೆ. ಇದು ಜನರಿಗೆ ಮಾತ್ರವಲ್ಲ ಕೃಷ್ಣನಿಗೂ ಪ್ರಿಯವಾದ ಪರ್ಯಾಯವಾಗಲಿದೆ. ಇದರಿಂದ ಲೋಕಕಲ್ಯಾಣ ಸಾಧ್ಯವಾಗಲಿದೆ ಎಂದು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ತಿಳಿಸಿದರು. ಸ್ವದೇಶೋ ಭುವನತ್ರಯ: ಪುತ್ತಿಗೆ ಶ್ರೀಪಾದರು

ಎಲ್ಲವೂ ನಮ್ಮ ದೇಶ, ಆದ್ದರಿಂದ ವಿದೇಶ ಎನ್ನುವುದೇ ಇಲ್ಲ. ಭೌತಿಕ ಗಡಿಗಳನ್ನು ಪರಿಗಣಿಸಿದರೆ ಮಾತ್ರ ವಿದೇಶ, ಆದರೆ ಆಧ್ಯಾತ್ಮಿಕವಾಗಿ ಯಾವುದೇ ಗಡಿಗಳಿಲ್ಲ. ಆದ್ದರಿಂದ ನಾವು ಆಧ್ಯಾತ್ಮಿಕ ದೃಷ್ಟಿಯಲ್ಲಿ ವಿದೇಶ ಪ್ರಯಾಣ ಮಾಡಿಯೇ ಇಲ್ಲ. ಆದ್ದರಿಂದ ಆಧ್ಯಾತ್ಮಿಕಕ್ಕೆ ದೈಶಿಕವಾದ ಗಡಿಗಳಿಲ್ಲ. ಆಧ್ಯಾತ್ಮಿಕಕ್ಕೆ ಇಡೀ ಜಗತ್ತೇ ವೇದಿಕೆ. ಸ್ವದೇಶೋ ಭುವನತ್ರಯ ಎಂಬಂತೇ ಇಡೀ ಜಗತ್ತೇ ನಮ್ಮ ಸ್ವದೇಶ ಎಂದು ಭಾವಿಸಿದ್ದೇವೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.