ಕೋಟ್ಪಾ ಕಾರ್ಯಾಚರಣೆಯಲ್ಲಿ ಕೋಟ್ಪಾ ಕಾಯ್ದೆ ಸೆಕ್ಷನ್-4 ಅಡಿ 62 ಪ್ರಕರಣ ದಾಖಲಿಸಿ 14,500 ರು. ದಂಡ, ಸೆಕ್ಷನ್-6ಎ ಅಡಿ 10 ಪ್ರಕರಣಗಳಿಗೆ 1,000 ರು. ದಂಡ ಹಾಗೂ ಸೆಕ್ಷನ್-6ಬಿ ಅಡಿ 12 ಪ್ರಕರಣಗಳಿಗೆ 1,150 ರು. ದಂಡ ವಿಧಿಸಲಾಯಿತು. ಒಟ್ಟಾರೆ 84 ಪ್ರಕರಣಗಳನ್ನು ದಾಖಲಿಸಿ 16,650 ರು. ದಂಡ ವಿಧಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಶಿವಪುರ ಹಾಗೂ ಭಾರತೀನಗರ ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ತಡೆಗಟ್ಟುವ ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆ ಉದ್ದೇಶದಿಂದ ಕೋಟ್ಪಾ ಕಾಯ್ದೆಯಡಿ ವಿಶೇಷ ಕಾರ್ಯಾಚರಣೆ ನಡೆಸಿ 84 ಪ್ರಕರಣ ದಾಖಲು ಮಾಡಲಾಯಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ಫೋರ್ಸ್ಮೆಂಟ್ ಅಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಮದ್ದೂರು ನಗರಸಭೆ ಕೆ.ಎಂ.ದೊಡ್ಡಿ ಹಾಗೂ ಮದ್ದೂರು ಪೊಲೀಸ್ ಠಾಣೆಗಳ ಸಹಭಾಗಿತ್ವದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ಜಿಲ್ಲಾ ಎನ್ಫೋರ್ಸ್ಮೆಂಟ್ ಅಧಿಕಾರಿ ಡಾ.ಬೆಟ್ಟಸ್ವಾಮಿ, ಮದ್ದೂರು ನಗರಸಭೆ ಪೌರಾಯುಕ್ತೆ ರಾಧಿಕಾ ಹಾಗೂ ವೃತ್ತ ನಿರೀಕ್ಷಕ ನವೀನ್ ಕುಮಾರ್ ಮಾರ್ಗದರ್ಶನದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಕಾರ್ಯಾಚರಣೆಯಲ್ಲಿ ಕೋಟ್ಪಾ ಕಾಯ್ದೆ ಸೆಕ್ಷನ್-4 ಅಡಿ 62 ಪ್ರಕರಣ ದಾಖಲಿಸಿ 14,500 ರು. ದಂಡ, ಸೆಕ್ಷನ್-6ಎ ಅಡಿ 10 ಪ್ರಕರಣಗಳಿಗೆ 1,000 ರು. ದಂಡ ಹಾಗೂ ಸೆಕ್ಷನ್-6ಬಿ ಅಡಿ 12 ಪ್ರಕರಣಗಳಿಗೆ 1,150 ರು. ದಂಡ ವಿಧಿಸಲಾಯಿತು. ಒಟ್ಟಾರೆ 84 ಪ್ರಕರಣಗಳನ್ನು ದಾಖಲಿಸಿ 16,650 ರು. ದಂಡ ವಿಧಿಸಲಾಗಿದೆ.ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ತಿಮ್ಮರಾಜು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಮಾಜ ಕಾರ್ಯಕರ್ತ ಮೋಹನ್ ಕುಮಾರ್, ಭಾರತೀನಗರದ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಮದ್ದೂರು ನಗರಸಭೆ ಆರೋಗ್ಯ ನಿರೀಕ್ಷಕ ಭರತ್, ಆರಕ್ಷಕರಾದ ಓಂಕಾರಪ್ಪ ಹಾಗೂ ಗಿರಿಜಾ ಹಳ್ಳಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಇದೇ ವೇಳೆ ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ ತಂಬಾಕು ಉತ್ಪನ್ನಗಳ ಪ್ರತ್ಯಕ್ಷ ಹಾಗೂ ಪರೋಕ್ಷ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘನೆ ಮರುಕಳಿಸಿದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಯಿತು.ಶಾಲೆ ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ಸಂಪೂರ್ಣ ನಿಷೇಧವಾಗಿರುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಯಿತು. ಪಟ್ಟಣ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಗರಸಭೆಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕೆಂದು ಅಂಗಡಿ ಮಾಲೀಕರಿಗೆ ತಿಳಿಸಲಾಯಿತು.