ಸಾರಾಂಶ
ಚಿತ್ರೀಕರಣದಲ್ಲಿ ಭಾಗಿ । ರಾಜ್ಯ ಪ್ರಧಾನ ಆಯುಕ್ತ । ‘ಪುಟ್ಟಗೂಡಿನ ಪುಟ್ಟದರಸಿ’ ಕಾದಂಬರಿ ಆಧಾರಿತ । ಮಹಾಲಕ್ಷೀ ಥಿಯೇಟರ್ ಬ್ಯಾನರ್‌ನಡಿ ನಿರ್ಮಾಣ
ಕನ್ನಡಪ್ರಭ ವಾರ್ತೆ ಆಲೂರುಸ್ಕೌಟ್ ಮಾಸ್ಟರ್, ಪ್ರಾಥಮಿಕ ಶಾಲಾ ಶಿಕ್ಷಕ, ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಅವರ “ಪುಟ್ಟಗೂಡಿನ ಪಟ್ಟದರಸಿ” ಕಾದಂಬರಿ ಆಧಾರಿತ ನಿರ್ಮಾಣವಾಗುತ್ತಿರುವ ಚಲನಚಿತ್ರವು ಸ್ಕೌಟ್ಸ್ ಗೈಡ್ಸ್ ಕುರಿತು ಮೊದಲ ಕನ್ನಡ ಮಕ್ಕಳ ಸಿನಿಮಾವಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಅಭಿಪ್ರಾಯಪಟ್ಟರು.
ನಗರದಲ್ಲಿ ನಿರ್ಮಾಪಕ ಲಕ್ಷ್ಮಣ್ ಕುಮಾರ್ ಅವರ ಕಲಾಸಿಪಾಳ್ಯದ ಮಹಾಲಕ್ಷೀ ಥಿಯೇಟರ್ ಬ್ಯಾನರಡಿಯಲ್ಲಿ ನಿರ್ಮಾಣವಾಗುತ್ತಿರುವ ಕೊಟ್ರೇಶ್ ಎಸ್.ಉಪ್ಪಾರ್ ಅವರ ‘ಪುಟ್ಟಗೂಡಿನ ಪಟ್ಟದರಸಿ’ ಕಾದಂಬರಿ ಆಧಾರಿತ ಮಕ್ಕಳ ಚಲನಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿ ಮಾತನಾಡಿ, ‘ಈ ಚಿತ್ರದ ಮುಖೇನ ಸ್ಕೌಟ್ಸ್ ಮತ್ತು ಗೈಡ್ಸ್ ಧ್ಯೇಯ, ಉದ್ದೇಶಗಳು ಅನಾವರಣಗೊಂಡಿವೆ. ಸಾಮಾಜಿಕ ವಿಕಸನದಲ್ಲಿ ಸ್ಕೌಟ್ ಅಥವಾ ಗೈಡ್‌ನ ಪಾತ್ರವೇನು ಎಂಬುದನ್ನು ಇದು ಬಿಂಬಿಸಿದೆ. ಈ ಮೊದಲು ಪೋಲಿಕಿಟ್ಟಿ ಎಂಬ ನಾಟಕ ಸ್ಕೌಟ್ಸ್ ಮತ್ತು ಗೈಡ್ಸ್ ಕುರಿತು ರಚನೆಯಾಗಿ ಯಶಸ್ಸು ಕಂಡಿತ್ತು. ಪ್ರಸ್ತುತ ‘ಪುಟ್ಟಗೂಡಿನ ಪಟ್ಟದರಸಿ’ಯ ರೂಪದಲ್ಲಿ ಕಮಲಿಯ ಮೂಲಕ ಉತ್ತಮ ಮೌಲ್ಯಗಳನ್ನು ಬಿತ್ತುತ್ತಿದೆ’ ಎಂದು ತಿಳಿಸಿದರು.ಆಲೂರು ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ, ‘ನಮ್ಮ ಕ್ಷೇತ್ರದ ಶಿಕ್ಷಕ, ಸಾಹಿತಿ ಕೊಟ್ರೇಶ್ ಎಸ್.ಉಪ್ಪಾರ್ ಅವರು ಬರೆದ ‘ಪುಟ್ಟಗೂಡಿನ ಪಟ್ಟದರಸಿ’ ಕಾದಂಬರಿ ಚಲನಚಿತ್ರವಾಗಿ ಮೂಡಿಬರುತ್ತಿರುವುದು ತುಂಬಾ ಸಂತಸ ತಂದಿದೆ. ಸಕಲೇಶಪುರದ ಯುವಕ ಅರುಣ್‌ಗೌಡ ಕರಡಿಗಾಲ ನಿರ್ದೇಶನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಚಲನಚಿತ್ರದಲ್ಲಿ ನಡೆಯುವ ಮಕ್ಕಳ ಪ್ರಬಂಧ ಸ್ಪರ್ಧೆಗೆ ಸ್ಥಳೀಯ ಸಮಸ್ಯೆಯನ್ನೇ ಅಳವಡಿಸಿರುವುದು ಔಚಿತ್ಯಪೂರ್ಣವಾಗಿದೆ. ಪರಿಸರ ನಾಶಕ್ಕೆ ಮಾನವನ ದುರಾಸೆಯೇ ಕಾರಣ’ ಎಂದು ಹೇಳಿದರು.
ಸಮಾಜ ಸೇವಕ ಗಣೇಶ್ ತಮ್ಲಾಪುರ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್, ರಾಜ್ಯ ಮಾಜಿ ಜಂಟಿ ಕಾರ್ಯದರ್ಶಿ ಚಲ್ಲಯ್ಯ, ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಪಾತ್ರಧಾರಿ ಪ್ರದೀಪ್ ಗೌಡ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾಂಕ, ಜಿಲ್ಲಾ ಸ್ಕೌಟ್ಸ್ ಆಯುಕ್ತ ಸ್ಟೀಫನ್ ಪ್ರಕಾಶ್, ಜಿಲ್ಲಾ ಮಾಜಿ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲ, ಮಾಜಿ ಜಿಲ್ಲಾ ಸಹ ಕಾರ್ಯದರ್ಶಿ ಆರ್.ಜಿ.ಗಿರೀಶ್, ಗೈಡ್ ಕ್ಯಾಪ್ಟನ್ ಶಿಲ್ಪಕೃತಿ ಇದ್ದರು.ತಾರಾಗಣದಲ್ಲಿ ಕಲಾವಿದರಾದ ಸಿದ್ದುಮಂಡ್ಯ, ಪೂಜಾ ರಘುನಂದನ್, ಕುಮಾರಿ ಶರಣ್ಯ, ಗ್ಯಾರಂಟಿ ರಾಮಣ್ಣ, ಲತಾಮಣಿ ತುರುವೇಕೆರೆ, ಎಚ್.ಎಸ್.ಪ್ರಭಾಕರ್, ಅಂಬಿಕಾ, ಮುರುಳಿ ಹಾಸನ್, ಸಾಸು ವಿಶ್ವನಾಥ್, ಶರತ್ ಬಾಬು, ಡಾ.ಹಸೀನಾ ಎಚ್.ಕೆ, ಬಿ.ಪಿ.ಗಿರೀಶ್, ಭಾನುಮತಿ, ಶಶಿಚಂದ್ರಿಕಾ, ರೀನಾ, ಧರ್ಮ ತಾಳೂರು, ಸ್ಫೂರ್ತಿ, ಸಿಂಚನ, ದೀಪಿಕಾ, ಹೇಮಲತಾ, ಶ್ರೇಯಸ್, ವೀಣಾ, ಆಶಾ, ಲಕ್ಷ್ಮಿ, ಯಶಸ್, ಚಂದನ್, ಶ್ವೇತಾ ಮಂಜುನಾಥ್, ಉಷಾ ಇದ್ದಾರೆ. ಸಂಭಾಷಣೆಯನ್ನು ವಿಜಯ ಹಾಸನ್ ಬರೆದಿದ್ದು, ಛಾಯಾಗ್ರಹಣವನ್ನು ಚಂದು, ಸಂಕಲನ ಸ್ಟ್ಯಾನಿ ಜಾಯ್ಸನ್, ಸಹ ನಿರ್ದೇಶನ ಶರತ್ ಬಾಬು ಹಾಗೂ ಅನಿಲ್ ಕುಮಾರ್, ಸಹಾಯಕ ನಿರ್ದೇಶಕರಾಗಿ ಅರ್ಜುನ್ ಇದ್ದು ಇದೇ ಮೊದಲ ಬಾರಿಗೆ ಅರುಣ್ ಗೌಡ ಕರಡಿಗಾಲ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.