ಸಾರಾಂಶ
ಜಿ.ಸೋಮಶೇಖರ
ಕೊಟ್ಟೂರು: ಐತಿಹಾಸಿಕ ಕೊಟ್ಟೂರು ಕೆರೆ ತುಂಬಿ ಕೋಡಿ ಬಿದ್ದಿದ್ದು, ರೈತರು, ಸುತ್ತಮುತ್ತಲಿನ ಗ್ರಾಮಸ್ಥರ ಸಂತಸಕ್ಕೆ ಕಾರಣವಾಗಿದೆ.ಶುಕ್ರವಾರ ರಾತ್ರಿಯಿಡಿ ಸುರಿದ ಮಳೆಯಿಂದ ಕೊಟ್ಟೂರು ಕೆರೆಗೆ ಜಾಗಟಗೇರಿ, ರಾಂಪುರ, ಹಿರೇವಡೇರಹಳ್ಳಿ ಹಳ್ಳಗಳಿಂದ ಪ್ರವಾಹೋಪಾದಿಯಲ್ಲಿ ನೀರು ಹರಿದು ಬಂದಿದೆ. ಕೊಟ್ಟೂರು ಕೆರೆ ಸಂಪೂರ್ಣ ಮಳೆಯಾಶ್ರಿತವಾಗಿದ್ದು. ಕೆರೆ 860ಕ್ಕೂ ಹೆಚ್ಚು ಎಕರೆ ಪ್ರದೇಶ ವ್ಯಾಪ್ತಿ ಹೊಂದಿದ್ದು, 4000 ಎಕರೆ ವ್ಯಾಪ್ತಿಯಲ್ಲಿ ಬೆಳೆ ಬೆಳೆಯಲು ರೈತರಿಗೆ ಅನುಕೂಲವಾಗುತ್ತದೆ. ಅಲ್ಲದೆ, ಸುಮಾರು ಹತ್ತಾರು ಸಾವಿರ ಎಕರೆ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೆ ಅನುಕೂಲವಾಗುತ್ತದೆ.
ಬಿರುಕು ಬಿಟ್ಟ ತೂಬುಗಳುಹತ್ತಾರು ವರ್ಷಗಳಿಂದ ಕೆರೆಯನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಕೈಗೊಳ್ಳದೆ ನಿರ್ಲಕ್ಷವಹಿಸಿರುವ ಸಣ್ಣ ನೀರಾವರಿ ಇಲಾಖೆ ಧೋರಣೆಯಿಂದಾಗಿ ತೂಬುಗಳಲ್ಲಿ ಸಣ್ಣದಾಗಿ ಬಿರುಕು ಬಿಟ್ಟಿದೆ. ರೈತರು ಮತ್ತು ಇತರರು ಈ ವಿಷಯವನ್ನು ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೆ ಸಣ್ಣ ಪ್ರಮಾಣದ ಬಿರುಕು, ಏನು ತೊಂದರೆ ಮಾಡಲಾರದು. ಗಾಬರಿ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿ ಸಮಾಧಾನ ಪಡಿಸುವ ಕಾರ್ಯ ಮಾಡುತ್ತಿದ್ದಾರೆ.
ನೀರನ್ನು ರೈತರ ಹೊಲಗದ್ದೆಗಳಿಗೆ ಬಳಸಿಕೊಳ್ಳಲು ಆಗದಷ್ಟು ಕಾಲುವೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇವುಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಪ್ರತಿ ವರ್ಷ ಮಾಡಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಈ ಕಾರ್ಯವನ್ನು ಕೈಗೊಳ್ಳದಿರುವುದರಿಂದ ಕೆರೆಯಿಂದ ತೂಬು ಎತ್ತಿದಾಗ ಕಾಲುವೆಗಳ ಮೂಲಕ ನೀರು ಹರಿಯುತ್ತಿಲ್ಲ. ಹೀಗಾಗಿ, ಕೆರೆ ತುಂಬಿದರೂ ನೀರು ಬಳಸಿಕೊಳ್ಳದಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ಕೊಟ್ರೇಶಪ್ಪ.ಮುಂಬರುವ ದಿನಗಳಲ್ಲಾದರೂ ಕೊಟ್ಟೂರು ಕೆರೆಯನ್ನು ಅಭಿವೃದ್ಧಿ ಪಡಿಸುವ ಕಾರ್ಯವನ್ನು ಸಣ್ಣ ನೀರಾವರಿ ಇಲಾಖೆ ಕೈಗೊಳ್ಳಬೇಕು. ಈ ಕೆರೆಯಿಂದ ತಾಲೂಕಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಅಂರ್ತಜಲ ವೃದ್ಧಿಗೆ ಕಾರಣವಾಗಲಿದ್ದು, ಕೊಟ್ಟೂರು ಮತ್ತು ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಹಕಾರಿಯಾಗುತ್ತದೆ.
ಬಹುವರ್ಷಗಳ ನಂತರ ಕೊಟ್ಟೂರು ಕೆರೆ ತುಂಬಿ ಇದೀಗ ಕೋಡಿ ಹರಿಯುವ ಮಟ್ಟಕ್ಕೆ ಬಂದಿದೆ. ಈ ಹಂತದಲ್ಲಿ ಕೆರೆಯ ನಾಲ್ಕಾರು ತೂಬುಗಳಲ್ಲಿ ಬಿರುಕು ಬಿಟ್ಟಿದ್ದು ಕೂಡಲೇ ಸಣ್ಣ ನೀರಾವರಿ ಇಲಾಖೆಯವರು ಗಮನ ಹರಿಸಬೇಕು. ತುರ್ತು ದುರಸ್ತಿ ಕೈಗೊಳ್ಳುವ ಮೂಲಕ ಕೆರೆಯ ನೀರು ಪೋಲಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕೊಟ್ಟೂರು ನಿವಾಸಿ ಅಂಚೆ ಕೊಟ್ರೇಶ್ ಆಗ್ರಹಿಸಿದ್ದಾರೆ.ತೂಬುಗಳಲ್ಲಿ ಸಣ್ಣ ಪ್ರಮಾಣದ ಬಿರುಕುಗಳು ಕಾಣಿಸಿಕೊಂಡಿವೆ. ಇದು ಕೆರೆ ತುಂಬಿದಾಗ ಕಂಡುಬರುವುದು ಸಾಮಾನ್ಯ. ಇದಕ್ಕಾಗಿ ಅನಗತ್ಯವಾಗಿ ಗಾಬರಿಪಡುವ ಅವಶ್ಯಕತೆ ಇಲ್ಲ. ಸೋಮವಾರದಿಂದ ತೂಬುಗಳ ಬಿರುಕನ್ನು ದುರಸ್ತಿಗೊಳಿಸುವ ಕಾರ್ಯಕೈಗೊಳ್ಳುತ್ತೇವೆ ಎಂದು ಸಣ್ಣ ನೀರಾವರಿ ಇಲಾಖೆ ಎಇ ಮೇಡಂ ರಾಜು ತಿಳಿಸಿದ್ದಾರೆ.