ಸಾರಾಂಶ
ವಿದ್ಯಾರ್ಥಿಗಳು ಕೇವಲ ಪಿಎಚ್ ಡಿ ಪದವಿಗೆ ಸೀಮಿತವಾಗಿರದೇ ನಿರಂತರವಾಗಿ ಅಧ್ಯಯನಶೀಲ ಹಾಗೂ ಸಂಶೋಧಕರಾಗಿ ಹೊಸತನವನ್ನು ಕಂಡುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅದರೊಟ್ಟಿಗೆ ಮಹಾತ್ಮರ ಜೀವನ ಚರಿತ್ರೆ ಕುರಿತು ಸಂಶೋಧನೆಗಳನ್ನು ನಡೆಸಿ, ಐತಿಹಾಸಿಕ ಮಹತ್ವವನ್ನು ಜಗತ್ತಿಗೆ ತಿಳಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವದ್ಯಾಲಯದ ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿದ್ಯಾರ್ಥಿಗಳು ಕೇವಲ ಪಿಎಚ್ ಡಿ ಪದವಿಗೆ ಸೀಮಿತವಾಗಿರದೇ ನಿರಂತರವಾಗಿ ಅಧ್ಯಯನಶೀಲ ಹಾಗೂ ಸಂಶೋಧಕರಾಗಿ ಹೊಸತನವನ್ನು ಕಂಡುಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಅದರೊಟ್ಟಿಗೆ ಮಹಾತ್ಮರ ಜೀವನ ಚರಿತ್ರೆ ಕುರಿತು ಸಂಶೋಧನೆಗಳನ್ನು ನಡೆಸಿ, ಐತಿಹಾಸಿಕ ಮಹತ್ವವನ್ನು ಜಗತ್ತಿಗೆ ತಿಳಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವದ್ಯಾಲಯದ ಕುಲಪತಿ ಪ್ರೋ.ಸಿ.ಎಂ. ತ್ಯಾಗರಾಜ ಹೇಳಿದರು.ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಕನ್ನಡ ಭವನ ಸಹಯೋಗದೊಂದಿಗೆ ಇಲ್ಲಿನ ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಿತ್ತೂರು ಸಂಗ್ರಾಮಕ್ಕೆ ಇನ್ನೂರರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಹೊಸ ಹೊಸ ಆಯಾಮಗಳ ಪರಿಕಲ್ಪನೆ ನೀಡಬೇಕು. ಇತಿಹಾಸದ ಪುಟಗಳಲ್ಲಿ ಮರೀಚಿಕೆಯಾದ ಮಹಾತ್ಮರನ್ನು ಸಮಾಜಕ್ಕೆ ಪರಿಚಯಿಸುವ ಅಗತ್ಯವಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಗುರಿ, ಶ್ರೇಷ್ಠತೆ ಹಾಗೂ ಸಾಧನೆಯಾಗಬೇಕು ಎಂದು ಹೇಳಿದರು.ಕಿತ್ತೂರಾಣಿ ಚನ್ನಮ್ಮ, ಎಪಿಜಿ ಅಬ್ದುಲ್ ಕಲಾಂ, ಕುವೆಂಪು, ರತನ್ ಟಾಟಾ ಅವರು ಯಾವುದೇ ಅಭಿಲಾಷೆಯಿಲ್ಲದೆ ತಮ್ಮಷ್ಟಕ್ಕೆ ತಾವು ಶ್ರದ್ಧೆ, ನಿಷ್ಠೆಯಿಂದ ಕಾರ್ಯಪ್ರವೃತ್ತರಾಗಿದ್ದರು. ಈ ನಿಟ್ಟಿನಲ್ಲಿ ಯುವ ಪೀಳಿಗೆ ಕೂಡ ಅವರ ಸಹಜ ಸ್ವಾಭಾವಿಕವಾಗಿ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕೆಂದರು.
ಕಾದಂಬರಿಕಾರ ಯ.ರು. ಪಾಟೀಲ ಮಾತನಾಡಿ, ಲಕ್ಷಾಂತರ ಸೈನ್ಯ ಹೊಂದಿದ ಬ್ರಿಟಿಷರ ಸಾಮ್ರಾಜ್ಯದ ವಿರುದ್ಧ ಹೋರಾಟ ಮಾಡಬೇಕೆಂಬ ಪರಿಕಲ್ಪನೆ ಹೊಂದಿದ ವೀರರಾಣಿ ಕಿತ್ತೂರು ಚನ್ನಮ್ಮ, ತಮ್ಮ ಧೈರ್ಯ ಸಾಹಸದಿಂದ ಹೋರಾಡಿ ಮೊಟ್ಟಮೊದಲ ಬಾರಿಗೆ ಜಯಗಳಿಸಿರುವುದು ನಮ್ಮೆಲ್ಲರಿಗೂ ಪ್ರೇರಣೆ ಎಂದು ಹೇಳಿದರು.ವಿದ್ಯಾರ್ಥಿಗಳು ವೀರರಾಣಿ ಕಿತ್ತೂರು ಚನ್ನಮ್ಮನವರಂತಹ ಮಹಾನ್ ಚೇತನರ ಇತಿಹಾಸ ತಿಳಿದುಕೊಳ್ಳಬೇಕು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಎಂದು ಹೇಳಿದರು.
ನಿವೃತ್ತ ಪ್ರಾಧ್ಯಾಪಕಿ ಸ್ಮಿತಾ ಸುರೇಭಾನಕರ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಕಾಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ.ಅಮರೇಶ ಯತಗಲ, ಪ್ರಾಧ್ಯಾಪಕ ಅಪ್ಪನ ವಗ್ಗರ,ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಅಧ್ಯಯನ ಪೀಠದ ನಿರ್ದೇಶಕಿ ನಾಗರತ್ನ ಪರಾಂಡೆ ಸೇರಿದಂತೆ ಇತರರು ಇದ್ದರು. ಪ್ರೊಫೆಸರ್ ಮಹೇಶ ಗಾಜಪ್ಪನವರ ಪರಿಚಯಿಸಿದರು. ಅಪ್ಪಯ್ಯ ರಾಮರಾವ ವಂದಿಸಿದರು.