ಕೊಟ್ಟೂರು ವಾರದ ಸಂತೆ ಸ್ಥಳ ಕೆಸರುಮಯ

| Published : Jul 26 2024, 01:32 AM IST

ಸಾರಾಂಶ

ವಾರದ ಗುರುವಾರದ ಸಂತೆ ಕೆಸರಿನ ಕೊಚ್ಚೆಯಲ್ಲೇ ನಡೆಯುತ್ತದೆ. ಇದೇ ಜಾಗದಲ್ಲಿಯೇ ತರಕಾರಿಯನ್ನು ಗ್ರಾಹಕರು ಖರೀದಿಸುವ ದುಸ್ಥಿತಿ.

ಜಿ.ಸೋಮಶೇಖರ

ಕೊಟ್ಟೂರು: ಪಟ್ಟಣದಲ್ಲಿ ವಾರದ ಗುರುವಾರದ ಸಂತೆ ಕೆಸರಿನ ಕೊಚ್ಚೆಯಲ್ಲೇ ನಡೆಯುತ್ತದೆ. ಇದೇ ಜಾಗದಲ್ಲಿಯೇ ತರಕಾರಿಯನ್ನು ಗ್ರಾಹಕರು ಖರೀದಿಸುವ ದುಸ್ಥಿತಿ.

ಆದರೆ ಸ್ಥಳೀಯ ಆಡಳಿತ ತರಕಾರಿ ಮಾರಾಟಕ್ಕೆ ಇದುವರೆಗೂ ನಿರ್ದಿಷ್ಟ ಸ್ಥಳ ನಿಗದಿಪಡಿಸಿಲ್ಲ. ಇಂತಹ ಸಹಿಸಲಸಾಧ್ಯ ವಾತಾವರಣದಲ್ಲೇ ತರಕಾರಿಗಳನ್ನು ಜನತೆ ಖರೀದಿಸಬೇಕಿದೆ.

ಮಳೆಗಾಲದ ಅವಧಿಯಲ್ಲಿ ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ತೇರುಬಯಲು ಪ್ರದೇಶ ಕೆಸರಿನ ಗದ್ದೆಯಂತಾಗಿ ಬಿಡುತ್ತದೆ. ಜತೆಗೆ ಕೆಟ್ಟುಹೋದ ತರಕಾರಿಗಳನ್ನು ರಸ್ತೆಗೆ ಎಸೆಯುವುದರಿಂದ ದುರ್ನಾತ ಮತ್ತಷ್ಟು ವ್ಯಾಪಿಸುತ್ತಿದೆ. ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆಯಾಗಿದೆ. ರೋಗ-ರುಜೀನ ಬಾರದಂತೆ ತಡೆಗಟ್ಟುವ ಉದ್ದೇಶದಿಂದ ಸ್ವಚ್ಛತೆ ಕಾಪಾಡಿದರೆ ಒಳ್ಳೆಯದು ಎನ್ನುತ್ತಾರೆ ಸ್ಥಳೀಯರು.

ವಾರದ ಸಂತೆ ಸ್ಥಳವೆಂದು ಪಪಂ ಆಡಳಿತ ಈ ಹಿಂದೆ ಉಜ್ಜಯನಿ ರಸ್ತೆಯಲ್ಲಿನ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಗಚ್ಚಿನಮಠದ ಆವರಣವನ್ನು ಗುರುತಿಸಿ ಅಲ್ಲಿಯೇ ಸಂತೆ ಮಾಡಲು ಜನತೆ ಮತ್ತು ವ್ಯಾಪಾರಿಗಳಿಗೆ ಅನುವು ಮಾಡಿಕೊಟ್ಟಿತ್ತು. ಈ ಜಾಗದಲ್ಲಿ ಶಾಲಾ ಕೊಠಡಿಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮೂರು ದಶಕಗಳ ಹಿಂದೆ ಅಲ್ಲಿಂದ ವಾರದ ಸಂತೆ ತೇರು ಬಯಲು ಪ್ರದೇಶಕ್ಕೆ ತನ್ನಂತಾನೇ ವರ್ಗಾವಣೆಗೊಂಡಿತು.

ಸ್ಥಳೀಯ, ತಾಲೂಕಿನ ಹಳ್ಳಿಗಳ 300ಕ್ಕೂ ಹೆಚ್ಚು ತರಕಾರಿ ವ್ಯಾಪಾರಿಗಳು ವಾರದ ಸಂತೆಯಲ್ಲಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಾರೆ. ತೇರುಬಯಲು ಪ್ರದೇಶದಲ್ಲಿ ವಾರದ ಸಂತೆಗೆ ಯಾವುದೇ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಕರ್ಯ ಇಲ್ಲ. ಸ್ವಚ್ಛತೆಯಂತೂ ಇಲ್ಲವೇ ಇಲ್ಲ.

ವಾರದ ಸಂತೆಗೆ ಪ್ರತ್ಯೇಕ ಜಾಗವನ್ನು ಕೊಟ್ಟೂರು ಪಪಂ ನಿಗದಿಪಡಿಸದೇ ಇರುವುದರಿಂದ ತೇರುಬೀದಿಯ ಈ ಸ್ಥಳದಲ್ಲೇ ನಾವು ವಾರದ ಸಂತೆಗೆ ಬೇಕಾದ ಸಾಮಗ್ರಿ ಹೊತ್ತು ತಂದು ಮಾರಾಟ ಮಾಡುತ್ತೇವೆ. ಈ ಸ್ಥಳವೇ ನಮಗೆ ಖಾಯಂ ಸ್ಥಳ ಎಂಬಂತಾಗಿದೆ. ಕನಿಷ್ಠಪಕ್ಷದ ಮೂಲಸೌಕರ್ಯ ಕಲ್ಪಿಸಿದರೆ ಒಳ್ಳೆಯದು ಎನ್ನುತ್ತಾರೆ ಕೊಟ್ಟೂರು ತರಕಾರಿ ವ್ಯಾಪಾರಿ ಕೊಟ್ರೇಶ್‌.

ಪಟ್ಟಣ ಪ್ರದೇಶದೊಳಗೆ ಸಂತೆ ಮಾರುಕಟ್ಟೆಗೆ ಕಟ್ಟಡ ನಿರ್ಮಿಸಲು ಸೂಕ್ತ ನಿವೇಶನವೇ ಇಲ್ಲ. ಪಪಂ ಆಡಳಿತ ಅನುದಾನ ಮೀಸಲಿರಿಸಲು ಸಾಧ್ಯವಾಗಿಲ್ಲ. ಬೇರೆ ಕಡೆ ಸಂತೆ ನಡೆಸಲು ವ್ಯಾಪಾರಿಗಳಿಗೆ ಸೂಚಿಸಿದರೆ ಆ ಸ್ಥಳಕ್ಕೆ ವ್ಯಾಪಾರಿಗಳು ಹೋಗಲು ಒಪ್ಪುತ್ತಿಲ್ಲ. ಸಂತೆಗೆ ನಿರ್ದಿಷ್ಟ ಪ್ರದೇಶ ಕೊಡಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಕೊಟ್ಟೂರು ಪಪಂ ಮುಖ್ಯಾಧಿಕಾರಿ ಎ.ನಸರುಲ್ಲಾ.