ಸಾರಾಂಶ
ಸಮೀಕ್ಷಾ ಕಾರ್ಯಕ್ಕೆ ತೆರಳಿದ ಶಿಕ್ಷಕಿ ಶವವಾಗಿ ಪತ್ತೆಯಾಗಿರುವುದು ನೋವಿನ ಸಂಗತಿಯಾಗಿದೆ, ಇಂತಹ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಸ್ಥರು ನೋವಿನಲ್ಲಿದ್ದು, ಸರ್ಕಾರ ಕುಟುಂಬದ ಜತೆಗಿದೆ, ಪೊಲೀಸ್ ಇಲಾಖೆಯಿಂದ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಿ, ಸೂಕ್ತ ನ್ಯಾಯ ಒದಗಿಸಲಾಗುವುದು.
ಕೋಲಾರ: ರಾಜ್ಯ ಸರ್ಕಾರದ ಜನಗಣತಿ ಸಮೀಕ್ಷಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಶಾಲಾ ಶಿಕ್ಷಕಿ ಅಖ್ತರ್ ಬೇಗಂ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನಗರದ ಮಹಾಲಕ್ಷ್ಮೀ ಬಡಾವಣೆಯ ಮೃತರ ನಿವಾಸಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿ ಧೈರ್ಯ ತುಂಬಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಸಮೀಕ್ಷಾ ಕಾರ್ಯಕ್ಕೆ ತೆರಳಿದ ಶಿಕ್ಷಕಿ ಶವವಾಗಿ ಪತ್ತೆಯಾಗಿರುವುದು ನೋವಿನ ಸಂಗತಿಯಾಗಿದೆ, ಇಂತಹ ಘಟನೆ ನಡೆಯಬಾರದಿತ್ತು. ಮೃತರ ಕುಟುಂಬಸ್ಥರು ನೋವಿನಲ್ಲಿದ್ದು, ಸರ್ಕಾರ ಕುಟುಂಬದ ಜತೆಗಿದೆ, ಪೊಲೀಸ್ ಇಲಾಖೆಯಿಂದ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಿ, ಸೂಕ್ತ ನ್ಯಾಯ ಒದಗಿಸಲಾಗುವುದು. ಅವರಿಗೆ ಯಾರೇ ತೊಂದರೆ ಕೊಟ್ಟಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸಲಾಗುತ್ತದೆ, ಈ ಪ್ರಕರಣದಲ್ಲಿ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದರು.ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್‌ರಿಗೆ ಮಾಹಿತಿ ನೀಡಿದೆ, ಸರ್ಕಾರವು ಕುಟುಂಬದೊಂದಿಗೆ ಇದೆ, ಅವರ ಮನೆಯಲ್ಲಿ ಒಬ್ಬರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ಕೊಡಲು ಮೊದಲ ಆಧ್ಯತೆ ನೀಡಲಾಗುವುದು. ಜೊತೆಗೆ ಸಮೀಕ್ಷೆ ಕಾರ್ಯದಲ್ಲಿ ಮರಣ ಹೊಂದಿದ್ದರಿಂದ ಪರಿಹಾರ ಧನ ಸಹ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಫೈರೋಜ್, ಸದಸ್ಯ ಅಮರನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ, ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ರಾಧಮ್ಮ, ಕೋಲಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕೋಮುಲ್ ನಿರ್ದೇಶಕ ಷಂಷೀರ್, ಬಾಲು ಸಾಧೀಕ್, ನದೀಂ ಇದ್ದರು.