ಇಂದು ಮೂಲಾ ನಕ್ಷತ್ರದಲ್ಲಿ ಕೊಟ್ಟೂರು ರಥೋತ್ಸವ

| Published : Mar 04 2024, 01:15 AM IST

ಸಾರಾಂಶ

ಸ್ವಾಮಿಯ ರಥ ಸುಮಾರು 70 ಅಡಿಗಿಂತಲೂ ಎತ್ತರವಾಗಿದೆ. ಅಷ್ಟೇ ಸುಂದರವಾಗಿ ರಥವನ್ನು ನಿರ್ಮಾಣ ಮಾಡಲಾಗಿದೆ.

ಜಿ. ಸೋಮಶೇಖರ

ಕೊಟ್ಟೂರು: ಅಶುಭವೆಂದೇ ಕರೆಯಲಾಗುವ ಮೂಲ ನಕ್ಷತ್ರದಲ್ಲಿ ಮಾ. 4ರಂದು ಸಂಜೆ ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಲಿದೆ.

ಈ ರಥೋತ್ಸವದ ಮತ್ತೊಂದು ವೈಶಿಷ್ಟ್ಯವೆಂದರೆ ಹರಿಜನ ಮಹಿಳೆಯರಾದ ಉಡುಸಲಮ್ಮ ಮತ್ತು ದುರುಗಮ್ಮ ರಥೋತ್ಸವಕ್ಕೂ ಮುಂಚಿತವಾಗಿ ಸ್ವಾಮಿಗೆ ಕಳಸದಾರತಿ ಬೆಳಗುವರು. ಬಳಿಕ ಮೂಲ ನಕ್ಷತ್ರದ ವೇಳೆ ರಥೋತ್ಸವಕ್ಕೆ ಚಾಲನೆ ಸಿಗಲಿದೆ. 6 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವರ ನಿರೀಕ್ಷೆ ಇದೆ.

ಸ್ವಾಮಿಯ ರಥ ಸುಮಾರು 70 ಅಡಿಗಿಂತಲೂ ಎತ್ತರವಾಗಿದೆ. ಅಷ್ಟೇ ಸುಂದರವಾಗಿ ರಥವನ್ನು ನಿರ್ಮಾಣ ಮಾಡಲಾಗಿದೆ.

ಪಾದಯಾತ್ರೆ ಮೂಲಕ ಆಗಮನ: 50 ಸಾವಿರಕ್ಕೂ ಹೆಚ್ಚು ಭಕ್ತರು ಪಾದಯಾತ್ರೆಯ ಮೂಲಕ ಕೊಟ್ಟೂರೇಶ್ವರನ ರಥೋತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಆಗಮಿಸಿದರು. ಇಷ್ಟು ಪ್ರಮಾಣದ ಪಾದಯಾತ್ರಿಗಳು ಕೊಟ್ಟೂರೇಶ್ವರನ ರಥೋತ್ಸವಕ್ಕೆ ಬಿಟ್ಟರೆ ಬೇರೆಡೆ ಕಂಡುಬಂದಿರುವ ಉದಾಹರಣೆಯಂತೂ ಇಲ್ಲ.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹರಿಹರ, ಕೊಕ್ಕನೂರು, ಮುಂಡರಗಿ, ಹೊನ್ನಾಳಿ, ನ್ಯಾಮತಿ, ಮಲೆಬೆನ್ನೂರು, ತುಮಕೂರು, ಹಾವೇರಿ, ಬ್ಯಾಡಗಿ, ಕೊಪ್ಪಳ, ಹರಪನಹಳ್ಳಿ, ಹೂವಿನಹಡಗಲಿ, ಸಂಡೂರು, ಕೂಡ್ಲಿಗಿ ಮತ್ತಿತರ ಕಡೆಯಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ.

ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತರಿಗೆ ಪಟ್ಟಣದ ವಿವಿಧ ಸಂಘ- ಸಂಸ್ಥೆಗಳವರು ಎಳೆನೀರು, ಐಸ್‌ಕ್ರಿಮ್‌, ಶರಬತ್ತು, ಮಿನರಲ್ ವಾಟರ್, ಭೋಜನ, ಆರೈಕೆ, ಔಷಧೋಪಚಾರ ಸೇವೆ ಸಲ್ಲಿಸುವುದು ಕಂಡುಬಂತು.

ಭಾರಿ ಬಂದೋಬಸ್ತ್: ಲಕ್ಷಾಂತರ ಭಕ್ತರು ಜಮಾವಣೆಗೊಳ್ಳುವ ಕೊಟ್ಟೂರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಪಟ್ಟಣದಲ್ಲಿ ಭಾರಿ ಪ್ರಮಾಣದ ಬಂದೋಬಸ್ತ್‌ ಆಯೋಜಿಸಲಾಗಿದೆ ಎಂದು ಸಬ್‌ ಇನ್‌ಸ್ಪೆಕ್ಟರ್‌ ಗೀತಾಂಜಲಿ ಸಿಂಧೆ ತಿಳಿಸಿದರು.

3 ಡಿವೈಎಸ್ಪಿ, 15 ಸಿಪಿಐ, 20 ಪಿಎಸ್ಐ ಹಾಗೂ 700ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಬಂದೋಬಸ್ತ್‌ ಕಾರ್ಯಕ್ಕೆ ನಿಯೋಜಿಸಲಾಗಿದೆ. ಜತೆಗೆ 2 ಕೆಎಸ್‌ಅರ್‌ಪಿ ಮತ್ತು ಡಿಎಆರ್‌ ತುಕಡಿಗಳಲ್ಲದೆ ಜಾತ್ರೆಯಲ್ಲಿ ಕಳ್ಳತನ ಎಸಗುವವರನ್ನು ಹಿಡಿಯಲು ಅಪರಾಧ ವಿಭಾಗದ ಪೊಲೀಸರು ಮಫ್ತಿಯಲ್ಲಿ ಸೇವೆ ಸಲ್ಲಿಸಲು ಕರೆಸಿಕೊಳ್ಳಲಾಗಿದೆ.

ಪಟ್ಟಣದೊಳಗೆ ಬಸ್ಸು ಸೇರಿದಂತೆ ಯಾವುದೇ ಬಾರಿ ವಾಹನಗಳು ಪ್ರವೇಶಿಸದಂತೆ ಪಟ್ಟಣದ 6 ರಸ್ತೆಗಳ ಬದಿಗಳಲ್ಲಿ ವಾಹನಗಳ ನಿಲುಗಡೆಗೆ ತಾತ್ಕಾಲಿಕ ಜಾಗ ನಿಗದಿಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಪಟ್ಟಣದಲ್ಲಿ ಜಾತ್ರೆಗೆ ಬರುವ ಜನರ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಗಮನಹರಿಸಿದ್ದೇವೆ ಎಂದರು.ನಿಜಕ್ಕೂ ಇತಿಹಾಸ: ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ಜಾತ್ರೆಗಳಲ್ಲಿ ಕೊಟ್ಟೂರೇಶ್ವರ ರಥೋತ್ಸವವು ಒಂದು. ಸ್ವಾಮಿಯ ಬಗೆಗಿನ ಭಕ್ತಿ ಈ ತೆರನಾಗಿ ಕಂಡುಬರುತ್ತಿದೆ. ಪಾದಯಾತ್ರೆ ಮೂಲಕವೇ ಲಕ್ಷಾಂತರ ಜನ ಬರುವುದು ನಿಜಕ್ಕೂ ಇತಿಹಾಸವೇ ಸರಿ ಕೊಟ್ಟೂರೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ಕೃಷ್ಣಪ್ಪ ತಿಳಿಸಿದರು.

ಪವಾಡವೇ ಸರಿ: ಕೊಟ್ಟೂರೇಶ್ವರನ್ನು ನಂಬಿಯೇ ನನ್ನೆಲ್ಲ ಕಷ್ಟ- ಕಾರ್ಪಣ್ಯ ಕಳೆದುಕೊಂಡಿದ್ದು, ಈ ಕಾರಣಕ್ಕಾಗಿ ಎಲ್ಲೇ ಇದ್ದರೂ ಸ್ವಾಮಿಯ ರಥೋತ್ಸವಕ್ಕೆ ತಪ್ಪದೇ ಬಂದೇ ಬರುತ್ತೇವೆ. 2017ರಲ್ಲಿ ರಥದ ಅವಘಡ ಸಂಭವಿಸಿದರೂ ಲಕ್ಷಾಂತರ ಜನರ ಪೈಕಿ ಒಬ್ಬರಿಗಾದರೂ ಯಾವುದೇ ತೆರನಾದ ಸಣ್ಣಪುಟ್ಟ ಗಾಯಗಳಾಗಿರುವುದನ್ನು ಗಮನಿಸಿದರೆ ಈತನ ಪವಾಡವೇ ಸರಿ ಎಂದು ಭಕ್ತರಾದ ವಿಜಯಲಕ್ಷ್ಮೀ ತಿಳಿಸಿದರು.