ಸಾರಾಂಶ
ಜಿ. ಸೋಮಶೇಖರ
ಕೊಟ್ಟೂರು: ಕೊಟ್ಟೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಕೊನೆಯ ಅವಧಿಯ ಆಡಳಿತಕ್ಕೆ ಆ. 31ರಂದು ಚುನಾವಣೆ ನಡೆಯಲಿದೆ.20ನೇ ವಾರ್ಡ್‌ನ ಸದಸ್ಯೆ ರೇಖಾ ಬದ್ದಿ ನಿರಾಯಾಸವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುವ ಪೂರಕ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತದೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿದೆ. ಒಟ್ಟು 20 ಸದಸ್ಯ ಸ್ಥಾನ ಬಲವನ್ನು ಪಪಂ ಆಡಳಿತ ಹೊಂದಿದೆ.ಅಧ್ಯಕ್ಷ ಸ್ಥಾನಕ್ಕೆ 20ನೇ ವಾರ್ಡ್ ಸದಸ್ಯೆಯಾಗಿರುವ ರೇಖಾ ಬದ್ದಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದೀಗ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ಹಿನ್ನೆಲೆಯಲ್ಲಿ ರೇಖಾ ಅವರು ಬಹುಮತ ಪಡೆಯಲು ಆವಶ್ಯವಿರುವಷ್ಟ ಸದಸ್ಯರ ಬೆಂಬಲ ಗಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಏನೆಲ್ಲ ತಂತ್ರಗಾರಿಕೆ ಬೇಕೋ ಅದನ್ನೆಲ್ಲ ಮಾಡಿದ್ದಾರೆ. ರೇಖಾ ಅಧ್ಯಕ್ಷ ಗಾದಿಗೇರಿವುದು ನಿಶ್ಚಿತ ಎಂದು ಅವರ ಬೆಂಬಲಿಗರು ಹೇಳುತ್ತಿದ್ದಾರೆ.
ಪಪಂ ಆಡಳಿತದಲ್ಲಿ ಕಾಂಗ್ರೆಸ್ 9 ಸದಸ್ಯರನ್ನು ಹೊಂದಿದೆ. ಬಿಜೆಪಿ 8 ಸದಸ್ಯರನ್ನು ಹೊಂದಿದೆ. ಮೂವರು ಪಕ್ಷೇತರ ಸದಸ್ಯರಾಗಿದ್ದಾರೆ. ಈ ಪೈಕಿ ಈ ಹಿಂದೆ ಉಪಾಧ್ಯಕ್ಷರಾಗಿದ್ದವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರಲ್ಲಿ ತೀವ್ರ ಪೈಪೋಟಿ ಕಂಡುಬಂದಿದೆ. ಕಾಂಗ್ರೆಸ್‌ನಿಂದ ತೋಟದ ರಾಮಣ್ಣ, ವಿದ್ಯಾಶ್ರೀ ಹೆಸರು ಕೇಳಿಬರುತ್ತಿದ್ದರೆ ಬಿಜೆಪಿಯಿಂದ ಮರಬದ ಕೊಟ್ರೇಶ್, ಜಿ. ಸಿದ್ದಯ್ಯ, ಪಕ್ಷೇತರ ಸದಸ್ಯ ಬಾವಿಕಟ್ಟಿ ಶಿವಾನಂದ ಹೆಸರು ಕೇಳಿಬಂದಿವೆ.
ನಾಯಕರ ತಂತ್ರಗಾರಿಕೆ: ಕಾಂಗ್ರೆಸ್, ಬಿಜೆಪಿ ಮುಖಂಡರು ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಲು ಕಸರತ್ತು ನಡೆಸಿದ್ದಾರೆ. ವಿವಿಧ ತಂತ್ರಗಾರಿಕೆ ಮೊರೆ ಹೋಗಿದ್ದಾರೆ. ಎರಡೂ ಪಕ್ಷದ ಮುಖಂಡರು ಗುಟ್ಟು ಬಿಟ್ಟುಕೊಡುತ್ತಿಲ್ಲ. ಚುನಾವಣೆ ದಿನವಾದ ಶನಿವಾರ ಎಲ್ಲವನ್ನೂ ಬಹಿರಂಗ ಪಡಿಸುತ್ತೇವೆ ಎಂದು ಹೇಳುತ್ತಿದ್ದಾರೆ.ಈ ನಡುವೆ ಜೆಡಿಎಸ್‌ನ ಶಾಸಕ ನೇಮರಾಜ ನಾಯ್ಕ ತಟಸ್ಥವಾಗಿರುವ ಸಾಧ್ಯತೆ ಇದೆ. ಶಾಸಕರು ಮತ್ತು ಜೆಡಿಎಸ್ ನಾಯಕರನ್ನು ಯಾರೊಬ್ಬರೂ ಈ ವರೆಗೆ ಸಂಪರ್ಕಿಸಿಲ್ಲ. ಹೀಗಾಗಿ ಇಡೀ ಚುನಾವಣೆ ಪ್ರಕ್ರಿಯೆಯಿಂದ ದೂರ ಇರುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ಅವರು ಚುನಾವಣೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಜೆಡಿಎಸ್ ನಾಯಕರು ಹೇಳುತ್ತಾರೆ.
ಪಪಂನ ಪಕ್ಷೇತರ 20ನೇ ವಾರ್ಡ್ ಸದಸ್ಯೆ ರೇಖಾ ಮತ್ತು ಬೆಂಬಲಿಗರು ಈಗಾಗಲೇ ಕಾಂಗ್ರೆಸ್ ಪರ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದು, ಪಕ್ಷದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಪಪಂನ ರೇಖಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಪಪಂ ಆಡಳಿತ ಕಾಂಗ್ರೆಸ್ ವಶವಾಗಲಿದೆ ಎಂದು ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ. ದಾರುಕೇಶ್ ಹೇಳಿದರು.ಪಪಂ ಆಡಳಿತದ ಅಧಿಕಾರ ಹೊಂದುವ ಸಂಖ್ಯೆ ಬಲ ಇಲ್ಲದ ಕಾರಣಕ್ಕಾಗಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಿಲ್ಲ. 6 ಸದಸ್ಯರು ಮಾತ್ರ ಸದ್ಯಕ್ಕೆ ಪಕ್ಷದಲ್ಲಿದ್ದು, ಚುನಾವಣೆ ವೇಳೆಗೆ ಕಾದುನೋಡುವ ತಂತ್ರ ಬಳಸಿ, ಆನಂತರ ಪಕ್ಷದ ನಿರ್ಧಾರ ಪ್ರಕಟಿಸುತ್ತೇವೆ ಎಂದು ಹೊಸಪೇಟೆ ಬಿಜೆಪಿ ಜಿಲ್ಲಾಧ್ಯಕ್ಷ ಪಿ. ಚನ್ನಬಸವನಗೌಡ ಹೇಳಿದರು.