ಇಂದು ಕೊಟ್ಟೂರೇಶ್ವರ ಮಹಾ ಕಾರ್ತಿಕೋತ್ಸವ

| Published : Dec 16 2024, 12:48 AM IST

ಸಾರಾಂಶ

ಈ ಶರಣ ಕೊಟ್ಟೂರನ್ನು ಕೇಂದ್ರವಾಗಿರಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ಕಾಲಕಾಲಕ್ಕೆ ನೆರವೇರಿಸುತ್ತಾ ಬಂದಿದ್ದಾನೆ.

ಜಿ. ಸೋಮಶೇಖರ

ಕೊಟ್ಟೂರು: 16ನೇ ಶತಮಾನದ ಮಹಾನ್ ಶರಣ, ಪಂಚ ಗಣಾಧೀಶ ಕೊಟ್ಟೂರು ಶ್ರೀ ಗುರು ಬಸವೇಶ್ವರ (ಕೊಟ್ಟೂರೇಶ್ವರ ಸ್ವಾಮಿ) ನಾಡಿನ ಧಾರ್ಮಿಕ ಕ್ಷೇತ್ರದ ಹೆಸರಾಂತ ತಾಣ ಎಂದು ಕೊಟ್ಟೂರು ಗುರುತಿಸಿಕೊಳ್ಳಲು ಕಾರಣರು. ಈ ಶರಣ ಕೊಟ್ಟೂರನ್ನು ಕೇಂದ್ರವಾಗಿರಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ಕಾಲಕಾಲಕ್ಕೆ ನೆರವೇರಿಸುತ್ತಾ ಬಂದಿದ್ದಾನೆ ಎಂಬುದು ಭಕ್ತರ ಅಚಲ ನಂಬಿಕೆ. ಜೀವಂತ ಯೋಗಿ ಮಹಾನ್ ಶರಣನೂ ಆಗಿರುವ ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕ ಮಹೋತ್ಸವ ಮತ್ತು ಅತ್ಯಾಕರ್ಷಕ ಬೆಳ್ಳಿ ರಥೋತ್ಸವ ಡಿ. 16ರಂದು ಇಡೀ ರಾತ್ರಿ ನಡೆಯಲಿದೆ.

ಶ್ರೀಸ್ವಾಮಿಯ ಕಾರ್ತಿಕೋತ್ಸವದ ಪ್ರಮುಖ ಆಕರ್ಷಣೆ ಬೆಳ್ಳಿ ರಥೋತ್ಸವವಾಗಿದೆ. ನಾಡಿನ ಅಪರೂಪದ ಮಹೋತ್ಸವವಾಗಿದೆ. ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ಬೆಳ್ಳಿ ರಥಗಳು ಮಠಗಳ ಸುತ್ತಲು ಮಾತ್ರ ಪ್ರದಕ್ಷಿಣೆ ಹಾಕುವುದು ಸಂಪ್ರದಾಯ. ಆದರೆ ಕೊಟ್ಟೂರಿನ ಶ್ರೀಸ್ವಾಮಿಯ ಬೆಳ್ಳಿ ರಥೋತ್ಸವ ಐದಾರು ನೂರು ಮೀಟರ್‌ಗಳಷ್ಟು ಮಧ್ಯರಾತ್ರಿಯುದ್ದಕ್ಕೂ 50 ಸಾವಿರಕ್ಕೂ ಹೆಚ್ಚು ಜನಸ್ತೋಮದ ಮಧ್ಯೆ ನಡೆಯಲಿದೆ. ಮತ್ತೊಂದು ಸ್ವಾಮಿಯ ವಿಶೇಷ ಎಂದರೆ ಸ್ವಾಮಿಯ ಮೂಲ ಬಂಗಾರದ ಮೂರ್ತಿಯನ್ನೇ ಬೆಳ್ಳಿ ರಥದಲ್ಲಿ ವಿರಾಜಮಾನಗೊಳಿಸಲಾಗುತ್ತದೆ.

ಪಂಚಗಣಾಧೀಶರಲ್ಲಿ ಕೊಟ್ಟೂರೇಶ್ವರ ಒಬ್ಬನಾಗಿದ್ದು, ಕೊಟ್ಟೂರಿಗೆ ಬಂದು ಧಾರ್ಮಿಕ ಶ್ರೇಷ್ಠತೆ ಮತ್ತು ಧರ್ಮದ ಪ್ರಚಾರವನ್ನು ಕೈಗೊಂಡರು.

ಕೊಟ್ಟೂರು ಪೂರ್ವದಿಂದಲೂ ಭಕ್ತಿಯ ತವರೂರು. ಸ್ವಾಮಿಗೆ ನಾಲ್ಕು ಮಠಗಳಿವೆ. ಒಂದೇ ಸ್ವಾಮಿಗೆ ನಾಲ್ಕು ಮಠಗಳು ಒಂದೇ ಸ್ಥಳದಲ್ಲಿ ಇರುವುದು ಅಪರೂಪ. ಇಂತಹ ಅಪರೂಪದ ತಾಣವಾಗಿ ಕೊಟ್ಟೂರು ಭಕ್ತರನ್ನು ಸೆಳೆಯುವ ಮೂಲಕ ಧಾರ್ಮಿಕ ಕ್ಷೇತ್ರದಲ್ಲಿ ವೈಶಿಷ್ಟ್ಯತೆ ತೋರಿದೆ. ಹಿರೇಮಠ, ಗಚ್ಚಿನಮಠ, ಮೂರ್ಕಲ್ ಮಠ ಮತ್ತು ತೊಟ್ಟಿಲಮಠವೆಂಬ ಮಠಗಳು ಇದ್ದು, ದಯವೇ ಧರ್ಮದ ಮೂಲ ವಚನದಂತೆ ಸಕಲರ ಲೇಸನ್ನು ಸ್ವಾಮಿ ಬಯಸಿದ್ದರು.

ಇಂತಹ ಮಹಾಮಹಿಮನ ಕೃಪಾಶೀರ್ವಾದ ಇಂದಿಗೂ ಭಕ್ತರ ಮೇಲೆ ಇದೆ. ಇದಕ್ಕೆ ಸಾಕ್ಷಿಯೆಂಬಂತೆ ವಾರ್ಷಿಕ ಧಾರ್ಮಿಕ ಮಹೋತ್ಸವಗಳಾದ ಕಾರ್ತಿಕೋತ್ಸವ ಮತ್ತು ರಥೋತ್ಸವ ದಿನಗಳಂದು ಜಮಾವಣೆಗೊಳ್ಳುವ ಲಕ್ಷಾಂತರ ಭಕ್ತರ ಜನಸ್ತೋಮವೇ ಸಾಕ್ಷಿಯಾಗಿದೆ.

ಕಾರ್ತಿಕೋತ್ಸವ ನಿಮಿತ್ತ ಧಾರ್ಮಿಕ ದತ್ತಿ ಮತ್ತು ಉಂಬಳಿ ಇಲಾಖೆಯಿಂದ ಸ್ವಾಮಿಯ ಹಿರೇಮಠದಲ್ಲಿ ಎಲ್ಲ ಈ ಮಹೋತ್ಸವಕ್ಕೆ ಎಲ್ಲ ಬಗೆಯ ಸಿದ್ಧತೆ ಕೈಗೊಳ್ಳಲಾಗಿದೆ. ಕಾರ್ತಿಕದ ದೀಪಗಳಿಗೆ ಎಣ್ಣೆ ಹಾಕಲೆಂದು ಕಟಕಟೆಗಳನ್ನು ದೇವಸ್ಥಾನದ ಹೊರಭಾಗದಲ್ಲಿ ಅಳವಡಿಸಲಾಗಿದೆ ಎನ್ನುತ್ತಾರೆ ಗುರುಬಸವೇಶ್ವರ ದೇವಸ್ಥಾನದ ಕಾರ್ಯ ನಿರ್ವಾಹಕಾಧಿಕಾರಿ ಹನುಮಂತಪ್ಪ.