ಕೋವಿ ಠೇವಣಿ ವಿನಾಯಿತಿ: ಉಚ್ಚ ನ್ಯಾಯಾಲಯ ಆದೇಶ ಸ್ವಾಗತಿಸಿದ ರೈತ ಮುಖಂಡರು

| Published : May 16 2024, 12:45 AM IST

ಕೋವಿ ಠೇವಣಿ ವಿನಾಯಿತಿ: ಉಚ್ಚ ನ್ಯಾಯಾಲಯ ಆದೇಶ ಸ್ವಾಗತಿಸಿದ ರೈತ ಮುಖಂಡರು
Share this Article
  • FB
  • TW
  • Linkdin
  • Email

ಸಾರಾಂಶ

ಇನ್ನು ಮುಂದೆಯಾದರೂ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಅರಿತುಕೊಂಡು ಕೃಷಿಕರಿಗೆ ತೊಂದರೆ ನೀಡುವುದುನ್ನು ತಿದ್ದಿಕೊಳ್ಳುತ್ತಾರೆ ಎಂದು ನಂಬಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಚುನಾವಣಾ ಸಮಯದಲ್ಲಿ ಕೃಷಿ ರಕ್ಷಣೆಯ ಕೋವಿಯನ್ನು ಕಾನೂನು ಬಾಹಿರವಾಗಿ ಠೇವಣಿ ಇರಿಸುತ್ತಿದ್ದ ವಿಚಾರವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ರಿಟ್ ದಾವೆಯನ್ನು ಪುರಸ್ಕರಿಸಿದ ನ್ಯಾಯಾಲಯ ಏ.೨೫ರಂದು ನೀಡಿರುವ ಆದೇಶವು ಐತಿಹಾಸಿಕವಾಗಿದ್ದು, ಇದೊಂದು ಸ್ವಾಗತಾರ್ಹ ಆದೇಶವಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ. ಪುತ್ತೂರಿನ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮತ್ತು ಕೃಷಿಕ ಮಾಣಿಮೂಲೆ ಗೋವಿಂದ ಭಟ್ ಅವರು ಆದೇಶದಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ಮೇ ೧೪ರಂದು ಅಂತಿಮ ಆದೇಶವನ್ನು ಆನ್‌ಲೈನ್‌ಗೆ ಹಾಕಿದ್ದಾರೆ. ರೈತರಿಗೆ ಯಾವತ್ತೂ ಸಮಸ್ಯೆಯಾಗಬಾರದು ಎಂಬ ನಿಟ್ಟಿನಲ್ಲಿ ನ್ಯಾಯಮೂರ್ತಿಗಳು ಮುತುವರ್ಜಿಯಿಂದ ಪ್ರತಿಯೊಂದು ವಿಚಾರವನ್ನು ತಿಳಿದು ಶಾಶ್ವತವಾಗಿ ಕೋವಿ ಠೇವಣಾತಿಯಿಂದ ರಿಯಾಯಿತಿ ನೀಡುವ ಕೆಲಸ ಮಾಡಿದ್ದಾರೆ ಎಂದರು.

ಇನ್ನು ಮುಂದೆಯಾದರೂ ಅಧಿಕಾರಿಗಳು ತಮ್ಮ ವ್ಯಾಪ್ತಿಯನ್ನು ಅರಿತುಕೊಂಡು ಕೃಷಿಕರಿಗೆ ತೊಂದರೆ ನೀಡುವುದುನ್ನು ತಿದ್ದಿಕೊಳ್ಳುತ್ತಾರೆ ಎಂದು ನಂಬಿದ್ದೇವೆ. ಕೇಂದ್ರ ಚುನಾವಣಾ ಆಯೋಗವನ್ನೂ ಪಾರ್ಟಿ ಮಾಡಿರುವ ಕಾರಣ ಈ ಆದೇಶ ಭಾರತದ ಎಲ್ಲ ಪ್ರದೇಶಗಳಿಗೂ ಅನ್ವಯವಾಗುತ್ತದೆ. ಕೋವಿ ಠೇವಣಿ ವಿಚಾರದಲ್ಲಿ ಇನ್ನು ಮುಂದೆ ಸಮಸ್ಯೆಗಳು ಬರುವುದಿಲ್ಲ. ಆದೇಶವನ್ನು ಚಾಲನೆಗೆ ತರುವಲ್ಲಿ ವಿಫಲವಾದರೆ ನ್ಯಾಯಾಂಗ ನಿಂದನೆಯನ್ನು ಮಾಡಿದಂತಾಗುತ್ತದೆ. ಉಚ್ಚ ನ್ಯಾಯಾಲಯದ ಆದೇಶ ಪಾಲನೆಯಲ್ಲಿ ವಿಫಲವಾದ ಕಾರಣದಿಂದ ರೈತರ ಮನೆಗೆ ಕೋವಿಯನ್ನು ತಂದುಕೊಂಡಬೇಕಾದ ಪರಿಸ್ಥಿತಿಯೂ ಎದುರಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ದ.ಕ. ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಮತ್ತು ಮನೋಜ್ ಶಿರಾಡಿ ಇದ್ದರು.