ಕೆ.ಪಿ. ಹೆಗಡೆಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

| Published : Oct 31 2025, 02:45 AM IST

ಸಾರಾಂಶ

ಪ್ರಸಿದ್ಧ ಕಲಾವಿದರನ್ನು ಕುಣಿಸುತ್ತ, ನೂರಾರು ಶಿಷ್ಯರಿಗೆ ಯಕ್ಷ ವಿದ್ಯೆಯನ್ನು ಧಾರೆ ಎರೆದು, ಶುದ್ಧ ಯಕ್ಷಗಾನೀಯ ಹಾಡನ್ನು ಉಣಬಡಿಸುತ್ತ ಯಕ್ಷಗಾನದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದ ಬಡಗುತಿಟ್ಟಿನ ಹಿರಿಯ ಭಾಗವತ ಕೆ.ಪಿ. ಹೆಗಡೆ (ಕೃಷ್ಣ ಪರಮೇಶ್ವರ ಹೆಗಡೆ) ಅವರಿಗೀಗ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ.

ಮಾರ್ವಿ ಶೈಲಿಯ ಅಪೂರ್ವ ಭಾಗವತ, ಯಕ್ಷಗಾನಕ್ಕೆ ಅಮೂಲ್ಯ ಕೊಡುಗೆ ನೀಡಿದ ಹೆಗಡೆವಸಂತಕುಮಾರ್ ಕತಗಾಲ

ಕನ್ನಡಪ್ರಭ ವಾರ್ತೆ ಕಾರವಾರ

ಪ್ರಸಿದ್ಧ ಕಲಾವಿದರನ್ನು ಕುಣಿಸುತ್ತ, ನೂರಾರು ಶಿಷ್ಯರಿಗೆ ಯಕ್ಷ ವಿದ್ಯೆಯನ್ನು ಧಾರೆ ಎರೆದು, ಶುದ್ಧ ಯಕ್ಷಗಾನೀಯ ಹಾಡನ್ನು ಉಣಬಡಿಸುತ್ತ ಯಕ್ಷಗಾನದಲ್ಲಿ 40 ವರ್ಷಗಳ ಸೇವೆ ಸಲ್ಲಿಸಿದ ಬಡಗುತಿಟ್ಟಿನ ಹಿರಿಯ ಭಾಗವತ ಕೆ.ಪಿ. ಹೆಗಡೆ (ಕೃಷ್ಣ ಪರಮೇಶ್ವರ ಹೆಗಡೆ) ಅವರಿಗೀಗ ರಾಜ್ಯೋತ್ಸವ ಪ್ರಶಸ್ತಿ ಒಲಿದುಬಂದಿದೆ.

ಪೆರ್ಡೂರು, ಸಾಲಿಗ್ರಾಮ, ಪಂಚಲಿಂಗೇಶ್ವರ, ಕುಮಟಾ, ಮಂದರ್ತಿ, ಕಮಲಶಿಲೆ ಹೀಗೆ ಪ್ರಸಿದ್ಧ ಮೇಳಗಳ ಪ್ರಮುಖ ಭಾಗವತರಾಗಿ ಜನಮನ್ನಣೆ ಗಳಿಸಿದ್ದ ಇವರು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಪ್ರಾಚಾರ್ಯರಾಗಿಯೂ 25 ವರ್ಷಗಳ ಕಾಲ ಸೇವೆ ಸಲ್ಲಿಸಿ ನೂರಾರು ಕಲಾವಿದರನ್ನು ರೂಪಿಸಿದ್ದಾರೆ.

ಸರ್ವೇಶ್ವರ ಹೆಗಡೆ ಮೂರೂರು, ರವೀಂದ್ರ ಭಟ್ ಅಚವೆ, ಪರಮೇಶ್ವರ ನಾಯ್ಕ, ಲಂಬೋದರ ಹೆಗಡೆ, ಸುರೇಶ ಶೆಟ್ಟಿ, ಮತ್ತಿತರ ಪ್ರತಿಭಾವಂತ ಭಾಗವತರನ್ನು ಯಕ್ಷಗಾನಕ್ಕೆ ಕೊಟ್ಟ ಗುರು ಕೆ.ಪಿ. ಹೆಗಡೆ. ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ, ದಿ.ಶಂಭು ಹೆಗಡೆ ಕೆರಮನೆ, ಗೋಡೆ ನಾರಾಯಣ ಹೆಗಡೆ, ಕೃಷ್ಣ ಯಾಜಿ ಬಳ್ಕೂರ ಸೇರಿದಂತೆ ಬಹುತೇಕ ಪ್ರಸಿದ್ಧ ಕಲಾವಿದರಿಗೆಲ್ಲ ಸಮರ್ಥವಾಗಿ ಭಾಗವತಿಕೆ ಮಾಡಿದ್ದಾರೆ.

ತಮ್ಮ 18ನೇ ವಯಸ್ಸಿನಲ್ಲೇ ಯಕ್ಷಗಾನ ಭಾಗವತಿಕೆಯತ್ತ ಆಕರ್ಷಿತರಾಗಿ ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ದಿ.ನಾರಣಪ್ಪ ಉಪ್ಪೂರು ಅವರ ಶಿಷ್ಯರಾಗಿ ಉಪ್ಪೂರು ಅವರಿಂದ ಯಕ್ಷಗಾನದ ಎಲ್ಲ ಮಟ್ಟು, ಶೈಲಿಯನ್ನು ಕರಗತ ಮಾಡಿಕೊಂಡು ಮುಂದೆ ಅದೇ ಕೇಂದ್ರದ ಪ್ರಾಚಾರ್ಯರಾಗಿದ್ದು ಇವರ ಮಹತ್ವದ ಸಾಧನೆ.

ಕೆ.ಪಿ. ಹೆಗಡೆ ಅವರದ್ದು ಉಪ್ಪೂರರ ಮಾರ್ವಿ ಶೈಲಿ. ಅಸಾಧಾರಣ ಲಯ. ತಾಳ. ಶುದ್ಧ ಯಕ್ಷಗಾನೀಯ ಹಾಡುಗಾರಿಕೆ, ಪ್ರತಿಯೊಬ್ಬ ಕಲಾವಿದನ ಸಾಮರ್ಥ್ಯವನ್ನೂ ಹೊರಹೊಮ್ಮಿಸುವ ಸಾಮರ್ಥ್ಯ. ಈಗಲೂ ಮಾರ್ವಿ ಶೈಲಿಯ ಅಪ್ಪಟ ವಾರಸುದಾರರೆಂದೆ ಕೆ.ಪಿ. ಹೆಗಡೆ ಅವರೇ. ದಿ.ಕಾಳಿಂಗ ನಾವುಡ ಪ್ರಶಸ್ತಿ, ಅನಂತಶ್ರೀ ಪ್ರಶಸ್ತಿ, ಯಕ್ಷಗಾನ ರತ್ನ ಮತ್ತಿತರ ಪ್ರಶಸ್ತಿಗಳು ಇವರಿಗೆ ಸಂದಿವೆ.

ಸಿದ್ಧಾಪುರದ ಗೋಳಗೋಡು ಗ್ರಾಮದ ಇವರು ಸುಮಾರು 40 ವರ್ಷಗಳ ಕಾಲ ಉತ್ತರ ಕನ್ನಡ ಹಾಗೂ ಉಡುಪಿಯಾದ್ಯಂತ ಪ್ರಾಚಾರ್ಯ ದಿ.ಎಂ. ನಾರಣಪ್ಪ ಉಪ್ಪೂರರ ಕಂಪನ್ನು ಹರಡಿ, ಈಗ ಗೋಳಗೋಡು ಊರಿನಲ್ಲಿ ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಶ್ವಾಸಕೋಶದ ಸಮಸ್ಯೆಯ ಹಿನ್ನೆಲೆ ವೈದ್ಯರ ಸಲಹೆ ಮೇರೆಗೆ ಭಾಗವತಿಕೆ ನಿಲ್ಲಿಸಿದ್ದಾರೆ. ಆದರೆ 67ರ ಹರೆಯದಲ್ಲೂ ಯುವ ಭಾಗವತರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.40 ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಯಕ್ಷಗಾನಕ್ಕೆ, ಯಕ್ಷಗಾನದ ಅರ್ಹ ಕಲಾವಿದರಿಗೆ ಪ್ರಶಸ್ತಿ, ಸನ್ಮಾನಗಳು ದೊರೆಯುತ್ತಿರಲಿ ಎನ್ನುತ್ತಾರೆ ಕೆ.ಪಿ. ಹೆಗಡೆ.