ಕನ್ನಡಪ್ರಭ ವಾರ್ತೆ ಮಧುಗಿರಿ

ಸರ್ಕಾರದ ತನಿಖೆಗೂ ಮುನ್ನವೇ ಕೆಪಿಸಿಸಿ ಸದಸ್ಯ ಸಿದ್ಧಾಪುರ ರಂಗಶಾಮಯ್ಯ ಮಲ್ಲಿಕಾರ್ಜುನ ಆತ್ಮಹತ್ಯೆಯಲ್ಲಿ ಜಂಟಿ ನಿರ್ದೇಶಕರ ಪಾತ್ರವಿಲ್ಲ ಎಂದು ಶರಾ ಬರೆದಿದ್ದಾರೆ. ಈ ಸಂಬಂಧ ಭಾನುವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬರೆದಿರುವ ಆತ್ಮಹತ್ಯೆ ಪತ್ರದಲ್ಲಿ ಯಾವುದೇ ಹುರುಳಿಲ್ಲ. ಜಿಲ್ಲಾ ಜಂಟಿ ನಿರ್ದೇಶಕ ಕೃಷ್ಣಪ್ಪ ದಕ್ಷತೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ಹೆಸರಾಗಿದ್ದು,ಪ್ರಸ್ತುತ ಮಲ್ಲಿಕಾರ್ಜನಯ್ಯಗೆ ಯಾವುದೇ ಕಿರುಕುಳ ಹಿಂಸೆ ಒತ್ತಡ ಹಾಕಿಲ್ಲ. ನಿವೃತ್ತಿ ಹೊಂದಲು 10 ದಿನ ಬಾಕಿ ಇರುವಾಗ ಆತ್ಮಹತ್ಯಗೆ ಶರಣಾಗಿರುವುದು ತಮ್ಮ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಗಿಟ್ಟಿಸಿಕೊಳ್ಳಲು ಈ ರೀತಿ ಮಾಡಿಕೊಂಡಿರಬಹುದು ಎಂದು ಮಲ್ಲಿಕಾರ್ಜುನಯ್ಯ ವಿರುದ್ಧ ರಂಗಶ್ಯಾಮಣ್ಣ ಕಿಡಿಕಾರಿದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ಮಲ್ಲಿಕಾರ್ಜುನಯ್ಯ ಕೆಲವರು ಕೃಷ್ಣಪ್ಪ ಅವರ ಹೆಸರನ್ನು ಈ ಪ್ರಕರಣಕ್ಕೆ ಜೋಡಿಸಿ ಆರೋಪ ಮಾಡುತ್ತಿರುವುದು ಸಂಪೂರ್ಣ ಅಸತ್ಯ ಹಾಗೂ ಆಧಾರರಹಿತವಾಗಿದೆ. ಮಲ್ಲಿಕಾರ್ಜುನಯ್ಯ ಉದ್ದೇಶಪೂರ್ವಕವಾಗಿ ಜಂಟಿ ನಿರ್ದೇಶಕ ಕೃಷ್ಣಪ್ಪನವರ ಮುಖಕ್ಕೆ ಮಸಿ ಬಳಿಯಲು ಪತ್ರ ಬರೆದಿರುವುದು ಸರಿಯಲ್ಲ. ಈ ದುರ್ಘಟನೆ ಬಗ್ಗೆ ಸರಿಯಾದ ತನಿಖೆ ನಡೆಯಬೇಕು. ತನಿಖೆ ಮೂಲಕ ಸತ್ಯ ಹೊರಬರಲಿ ಎಂದು ಅವರು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಛಲವಾದಿ ಮಹಾಸಭಾ ಅಧ್ಯಕ್ಷ ವೆಂಕಟೇಶ್, ಎಸ್‌ಬಿಟಿ ರಾಮು,ಆರ್‌.ಕೆ.ದೃವಕುಮಾರ್‌,ಮಿಡಿಗೇಶಿ ವಿ.ಆ್‌.ರಾಜಗೋಪಾಲ್, ದಯಾನಂದ್,ಅಂಬೇಡ್ಕರ್,ಲಕ್ಷ್ಮಣ್,ನರಸಿಂಹಯ್ಯ ಇತರರಿದ್ದರು.