ಸಾರಾಂಶ
- ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪ
- ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹ----ಕನ್ನಡಪ್ರಭ ವಾರ್ತೆ ಮೈಸೂರು
ಕೇಂದ್ರ ಬಿಜೆಪಿ ಸರ್ಕಾರವು ಮೀಸಲಾತಿ ವಿಚಾರದಲ್ಲಿ ಹಿಂದಿನಿಂದಲೂ ನಾಟಕೀಯ ವರ್ತನೆ ತೋರುತ್ತಿದ್ದು, ಸದಾಶಿವ ವರದಿ ಜಾರಿಗೆ ನಾಟಕವನ್ನಾಡದೇ ವರದಿ ಯಥಾವತ್ ಜಾರಿಗೊಳಿಸಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 101 ಜಾತಿ ಇರುವ ವ್ಯವಸ್ಥೆಯಡಿಯಲ್ಲಿ ಎಲ್ಲರಿಗೂ ಸಮಪಾಲು ಇರಬೇಕೆಂಬ ಬೇಡಿಕೆಗೆ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ ಸದಾಶಿವ ಆಯೋಗವನ್ನು ರಚನೆ ಮಾಡಲಾಯಿತು. ಅನಂತರ ಬಂದ ಮುಖ್ಯಮಂತ್ರಿ ಸದಾನಂದಗೌಡ ಅವರ ಅವಧಿಯಲ್ಲಿ ವರದಿ ಸಲ್ಲಿಕೆಯಾಗಿ ಜಗದೀಶ್ ಶೆಟ್ಟರ್ ಅವಧಿಯಲ್ಲಿ ಮೂಲೆ ಸೇರಿತ್ತು. ಸಂವಿಧಾನದ ತಿದ್ದುಪಡಿ ಕಾಲಂ 341 ಅಡಿಯ ಕಾನೂನು ಪ್ರಕಾರ ಶೇ.17 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲು ಕಾನೂನಾತ್ಮಕವಾಗಿ ಮಾಡಬೇಕಿತ್ತು. ಆದರೆ, ಹಿಂದಿನ ಬಿಜೆಪಿ ಸರ್ಕಾರ ಅದನ್ನು ಮಾಡದೇ ಕೇವಲ ಒಬ್ಬ ಅಧಿಕಾರಿ ಕೈಯಲ್ಲಿ ಒಂದು ಲೆಟರ್ ಕಳುಹಿಸಿ ಅದನ್ನೇ ಚುನಾವಣೆಯ ಫಸಲಾಗಿಸಿಕೊಳ್ಳಲು ಮುಂದಾಗಿ ವರದಿಯನ್ನೂ ಮೂಲೆಗುಂಪಾಗಿಸಿದರು ಎಂದು ಆರೋಪಿಸಿದರು.
ಆದರೆ, ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ವರ್ಷದೊಳಗೆ ಸದಾಶಿವ ವರದಿಯನ್ನು ಯಥಾವತ್ ಜಾರಿಗೆ ಕೇಂದ್ರಕ್ಕೆ ಒತ್ತಾಯಿಸುವ ನಿರ್ಣಯ ಘೋಷಿಸಿತ್ತು. ಅದರಂತೆ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಕೇಂದ್ರಕ್ಕೆ ವರದಿ ಕಳುಹಿಸಿಕೊಟ್ಟಿದ್ದೇವೆ. ಆದರೆ, ಈ ಬಗ್ಗೆ ಕೇಂದ್ರ ಬಿಜೆಪಿ ಸರ್ಕಾರ ಒಂದು ಸಮಿತಿ ರಚಿಸಿ ಪರಿಶೀಲಿಸುತ್ತೇವೆಂದು ಹೇಳುತ್ತಿರುವುದು ಬಿಜೆಪಿಯ ಮತ್ತೊಂದು ನಾಟಕ ಆಗಿದೆ ಎಂದು ಅವರು ದೂರಿದರು.ಮುಸ್ಲಿಂ ಸಮುದಾಯದ ಮೀಸಲಾತಿಯನ್ನು ಲಿಂಗಾಯತ, ಒಕ್ಕಲಿಗರಿಗೆ ಕೊಟ್ಟ ಹಂಚಿದ ಮೀಸಲಾತಿ ಊರ್ಜಿತವಾಗದೇ ನ್ಯಾಯಾಲಯದಲ್ಲಿ ತಡೆಯಾಗಿದೆ. ಎಸ್ಟಿ ಮೀಸಲಾತಿ 4 ರಿಂದ 7ಕ್ಕೆ ಹೆಚ್ಚಿಸಿರುವುದಾಗಿ ಶ್ರೀರಾಮುಲು ಅಬ್ಬರದ ಪ್ರಚಾರ ಮಾಡಿದರು. ಅದರ ಮೀಸಲಾತಿ ಏನಾಯಿತು. ಮೀಸಲಾತಿ ವಿಚಾರದಲ್ಲಿ ಬಿಜೆಪಿ ಆಡುತ್ತಿರುವ ನಾಟಕ ಸಾಕಾಗಿದೆ. ಈಗಲಾದರೂ ಸದಾಶಿವ ವರದಿ ಆಯೋಗದ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಈಶ್ವರ ಚಕ್ಕಡಿ, ಕೆ. ಮಹೇಶ್, ನಾಗೇಶ್, ರಮೇಶ್ ಮೊದಲಾದವರು ಇದ್ದರು.-----
ಕೋಟ್...ಕಾಂಗ್ರೆಸ್ ಗ್ಯಾರಂಟಿಯ ಅನುಷ್ಠಾನ ಸಮಿತಿ ರಚಿಸಲು ತಿಳಿಸಿದ್ದು, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಆಗಲಿದೆ. ಇದರಲ್ಲಿ ಶಾಸಕರು ಸೇರಿ ಯಾವುದೇ ಜನಪ್ರತಿನಿಧಿಗಳಿಗೆ ಅವಕಾಶ ಇರುವುದಿಲ್ಲ. ಕಾರ್ಯಕರ್ತರ ಪಡೆಗೆ ಮುಕ್ತ ಅವಕಾಶ ಇರಲಿದೆ.
- ಡಾ.ಬಿ.ಜೆ. ವಿಜಯ್ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ