ಸಾರಾಂಶ
ಬೆಂಗಳೂರು : ಬಹುಕೋಟಿ ಮೌಲ್ಯದ ಬಿಟ್ ಕಾಯಿನ್ ಹಗರಣ ಸಂಬಂಧ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಅವರನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬುಧವಾರ ವಿಚಾರಣೆ ಮಾಡಿದ್ದಾರೆ.
ಹಗರಣದ ಪ್ರಮುಖ ಆರೋಪಿ, ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ನಲಪಾಡ್ ನಡುವೆ ಹಣದ ವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿತ್ತು. ಹ್ಯಾಕರ್ ಶ್ರೀಕಿ ತಾನು ಕಳವು ಮಾಡಿದ್ದ ಬಿಟ್ ಕಾಯಿನ್‌ಗಳನ್ನು ನಗದು ರೂಪಕ್ಕೆ ಪರಿವರ್ತಿಸಿದ್ದ. ಈ ಹಣದ ಪೈಕಿ ಸುಮಾರು 5 ಕೋಟಿ ರು. ಹಣವನ್ನು ಶ್ರೀಕಿಯು ನಲಪಾಡ್‌ಗೆ ವರ್ಗಾಯಿಸಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ನಲಪಾಡ್‌ನನ್ನು ಕರೆಸಿ ವಿಚಾರಣೆ ಮಾಡಿದ್ದಾರೆ.
ಈ ಸಂಬಂಧ ಎಸ್ಐಟಿ ನೋಟಿಸ್ ಹಿನ್ನೆಲೆಯಲ್ಲಿ ನಲಪಾಡ್ ಬುಧವಾರ ವಿಚಾರಣೆಗೆ ಹಾಜರಾಗಿದ್ದರು. ಎಸ್ಐಟಿ ಅಧಿಕಾರಿಗಳು ಸುಮಾರು ಮೂರು ತಾಸು ನಲಪಾಡ್ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ನನಗೂ ಶ್ರೀಕಿಗೂ ಯಾವುದೇ ಸಂಬಂಧವಿಲ್ಲ. ಆತನೊಂದಿಗೆ ಯಾವುದೇ ಹಣಕಾಸು ವ್ಯವಹಾರ ಮಾಡಿಲ್ಲ ಎಂದು ನಲಪಾಡ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಬಿಟ್ ಕಾಯಿನ್ ಹಗರಣ ಸಂಬಂಧ 2023ರಲ್ಲಿ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ವಿದ್ವತ್ ಹಲ್ಲೆ ಕೇಸ್‌ನಲ್ಲಿ ಶ್ರೀಕಿಯೂ ಆರೋಪಿ
ಹ್ಯಾಕರ್ ಶ್ರೀಕಿ ಮತ್ತು ಮೊಹಮ್ಮದ್ ನಲಪಾಡ್ ಸ್ನೇಹಿತರಾಗಿದ್ದಾರೆ. 2018ರ ಫೆಬ್ರವರಿ 17ರಂದು ರಾತ್ರಿ ನಗರದ ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಮತ್ತು ಅವರ ಸಹಚರರು ಮಾರಣಾಂತಿಕ ಹಲ್ಲೆ ಮಾಡಿದ್ದರು. ಈ ಪ್ರಕರಣದಲ್ಲಿ ನಲಪಾಡ್ ಸ್ನೇಹಿತ ಶ್ರೀಕಿಯನ್ನು ಸಹ ಪೊಲೀಸರು ಬಂಧಿಸಿದ್ದರು.