ನೇಮಕಾತಿ ಅಧಿಸೂಚನೆಯಲ್ಲಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವುದಾಗಿ ನೀಡಿದ್ದ ಭರವಸೆಯಂತೆ ಸೇವೆಗೆ ಸೇರಿದ ಕೆಪಿಸಿಎಲ್ ನೌಕರರಿಗೆ ಇದೀಗ ಪಿಂಚಣಿ ಸೌಲಭ್ಯ ಮುಂದುವರಿಯಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಜಾರಿಯಲ್ಲಿದ್ದ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ಪ್ರಯತ್ನದ ವಿರುದ್ಧ ನೌಕರರು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ನೇಮಕಾತಿ ಅಧಿಸೂಚನೆಯಲ್ಲಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೊಳಿಸುವುದಾಗಿ ನೀಡಿದ್ದ ಭರವಸೆಯಂತೆ ಸೇವೆಗೆ ಸೇರಿದ ಕೆಪಿಸಿಎಲ್ ನೌಕರರಿಗೆ ಇದೀಗ ಪಿಂಚಣಿ ಸೌಲಭ್ಯ ಮುಂದುವರಿಯಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ಆಡಳಿತ ಮಂಡಳಿಯ ಅನುಮೋದನೆಯೊಂದಿಗೆ ಜಾರಿಯಲ್ಲಿದ್ದ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ಪ್ರಯತ್ನದ ವಿರುದ್ಧ ನೌಕರರು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಇತ್ತ ಕೆಪಿಸಿಎಲ್ ವ್ಯಾಪ್ತಿಯಲ್ಲಿ ಬರುವ ರಾಯಚೂರು ಬೃಹತ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ, ವೈಟಿಪಿಎಸ್, ಬಿಟಿಪಿಎಸ್ ಸೇರಿ ಇತರೆಡೆ ದಶಕಗಳಿಂದ ಕೆಲಸ ಮಾಡಿ ನಿವೃತ್ತಿ ಪಡೆದ ನೌಕರರು ಪಿಂಚಣಿ ಸವಲತ್ತುಗಳಿಲ್ಲದೇ ಪರದಾಡುವಂತಾಗಿದೆ.

ರಾಜ್ಯ ಸರ್ಕಾರವು 2006ರಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ, ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ಜಾರಿಗೆ ತಂದಿತ್ತು. ಆದರೆ, 2010ರಲ್ಲಿ ಕೆಪಿಸಿಎಲ್ ಹೊರಡಿಸಿದ ನೇಮಕಾತಿ ಅಧಿಸೂಚನೆಯಲ್ಲಿ ಹಳೆಯ ಪಿಂಚಣಿ ಯೋಜನೆ ಅನ್ವಯವಾಗಲಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಈ ಅಧಿಸೂಚನೆಯ ಆಧಾರದಲ್ಲಿ ನೇಮಕಗೊಂಡ ನೌಕರರಿಗೆ ಸಂಸ್ಥೆಯು ಭರವಸೆ ನೀಡಿದಂತೆ ಜಿಪಿಎಫ್ (ಸಾಮಾನ್ಯ ಭವಿಷ್ಯ ನಿಧಿ) ಸೌಲಭ್ಯವನ್ನೂ ಜಾರಿಗೊಳಿಸಿತ್ತು.

ತರುವಾಯ 2012ರಲ್ಲಿ ಕೆಪಿಸಿಎಲ್ ಆಡಳಿತ ಮಂಡಳಿಯ ಮುಂದೆ ಪಿಂಚಣಿ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಮಂಡಿಸ ಲಾಗಿತ್ತು. ಅದರಂತೆ, 2011ರ ಡಿಸೆಂಬರ್ ಅಂತ್ಯದವರೆಗೆ ಸಂಸ್ಥೆಗೆ ಸೇರ್ಪಡೆಗೊಂಡ ನೌಕರರಿಗೆ ಹಳೆಯ ಪಿಂಚಣಿ ಹಾಗೂ ಜಿಪಿಎಫ್ ಯೋಜನೆಯನ್ನು ಮುಂದುವರಿಸಲು ಮತ್ತು 2012ರಿಂದ ಹೊಸದಾಗಿ ಸೇರ್ಪಡೆಗೊಂಡ ನೌಕರರಿಗೆ ಮಾತ್ರ ಎನ್ಪಿಎಸ್ ಅನ್ವಯಿಸಲು ಆಡಳಿತ ಮಂಡಳಿ ಅನುಮೋದನೆ ನೀಡಿತ್ತು ಎನ್ನಲಾಗಿದೆ.

ಆದರೆ, 2020ರಲ್ಲಿ ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಈ ವ್ಯವಸ್ಥೆಯನ್ನು ಪ್ರಶ್ನಿಸಿ, ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಆಡಳಿತ ಮಂಡಳಿಯ ಅನುಮೋದನೆ ಹಾಗೂ ನೌಕರರ ಒಪ್ಪಿಗೆ ಇಲ್ಲದೆ ಏಕಪಕ್ಷೀಯವಾಗಿ ಇಂತಹ ನಿರ್ಧಾರ ಕೈಗೊಳ್ಳುವುದು ಕಾನೂನುಬದ್ಧವೇ ಎಂಬ ಪ್ರಶ್ನೆ ಉದ್ಭವಿಸಿತು.

ಇದನ್ನು ಪ್ರಶ್ನಿಸಿ ಬಾಧಿತ ನೌಕರರ ಪೈಕಿ ಸುಮಾರು ಅರ್ಧದಷ್ಟು ಮಂದಿ 2021ರಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಹಳೆಯ ಪಿಂಚಣಿ ಯೋಜನೆ ರದ್ದುಗೊಳಿಸುವ ಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಹೀಗಾಗಿ ಪ್ರಕರಣದ ಅಂತಿಮ ತೀರ್ಪಿನತ್ತ ನೌಕರರು ಎದುರು ನೋಡುತ್ತಿದ್ದಾರೆ.

ನೌಕರರ ಪರವಾಗಿರುವ ಪ್ರಮುಖ ಅಂಶಗಳೇನು?:ನೇಮಕಾತಿ ಅಧಿಸೂಚನೆಯಲ್ಲಿ ಸ್ಪಷ್ಟವಾಗಿ ನೀಡಿದ್ದ ಭರವಸೆ, ನೇಮಕಾತಿ ಯ ನಂತರ ಜಿಪಿಎಫ್ ಯೋಜನೆಯ ಅನುಷ್ಠಾನ ಹಾಗೂ 2012ರಲ್ಲಿ ಆಡಳಿತ ಮಂಡಳಿ ನೀಡಿದ್ದ ಅನುಮೋದನೆ ನೌಕರರ ವಾದಕ್ಕೆ ಪ್ರಮುಖ ಆಧಾರಗಳಾಗಿವೆ. ಉದ್ಯೋಗಕ್ಕೆ ಸೇರುವ ಮುನ್ನ ಪ್ರಕಟಿಸಿದ ಷರತ್ತುಗಳ ಆಧಾರದಲ್ಲಿ ನೌಕರರು ಸೇವೆಗೆ ಸೇರ್ಪಡೆಗೊಂಡಿದ್ದು, ಹಲವು ವರ್ಷಗಳ ಕಾಲ ಅದೇ ವ್ಯವಸ್ಥೆಯಡಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಏಕಾಏಕಿ ಪಿಂಚಣಿ ಸೌಲಭ್ಯ ಹಿಂಪಡೆಯುವುದು ನ್ಯಾಯಸಮ್ಮತವಲ್ಲ ಎಂಬುದು ನೌಕರರ ವಾದವಾಗಿದೆ. ಅಲ್ಲದೆ, ಸಂಸ್ಥೆಯ ಆಡಳಿತ ಮಂಡಳಿ ಅನುಮೋ ದಿಸಿದ ನಿರ್ಧಾರವನ್ನು ವ್ಯವಸ್ಥಾಪಕ ನಿರ್ದೇಶಕರು ಏಕಪಕ್ಷೀಯವಾಗಿ ಬದಲಾಯಿಸಬಹುದೇ ಎಂಬ ಕಾನೂನು ಪ್ರಶ್ನೆಯೂ ಪ್ರಕರಣದಲ್ಲಿ ಮಹತ್ವ ಪಡೆದಿದೆ. ಸೇವಾ ಷರತ್ತುಗಳ ಬದಲಾವಣೆ, ಉದ್ಯೋಗಿಗಳ ನ್ಯಾಯಸಮ್ಮತ ನಿರೀಕ್ಷೆ ಹಾಗೂ ಈಗಾಗಲೇ ಜಾರಿಯಲ್ಲಿರುವ ಸೌಲಭ್ಯಗಳನ್ನು ಹಿಂಪಡೆಯುವ ಅಧಿಕಾರದ ಕುರಿತು ನ್ಯಾಯಾಲಯ ಪರಿಶೀಲನೆ ನಡೆಸಬೇಕಿದೆ.

ಕೆಪಿಸಿಎಲ್ ವಾದವೇನು?: ಇನ್ನೊಂದೆಡೆ, 2006ರಲ್ಲಿಯೇ ರಾಜ್ಯ ಸರ್ಕಾರ ಹಳೆಯ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ ರುವುದರಿಂದ, ನಂತರದ ನೇಮಕಾತಿಗಳಿಗೆ ಆ ಯೋಜನೆ ಅನ್ವಯಿಸುವುದು ಸರ್ಕಾರದ ನೀತಿಗೆ ವಿರುದ್ಧವಾಗಿದೆ ಎಂಬ ವಾದವನ್ನು ಕೆಪಿಸಿಎಲ್ ಮಂಡಿಸುವ ಸಾಧ್ಯತೆಯಿದೆ. ಹಳೆಯ ಪಿಂಚಣಿ ಯೋಜನೆಯಿಂದ ಸಂಸ್ಥೆಗೆ ಉಂಟಾಗುವ ದೀರ್ಘ ಕಾಲೀನ ಆರ್ಥಿಕ ಹೊರೆ ಹಾಗೂ ಸಂಸ್ಥೆಯ ಅಧಿಕಾರ ವ್ಯಾಪ್ತಿಯ ಬಗ್ಗೆಯೂ ಪ್ರಶ್ನೆಗಳು ಎದುರಾಗಬಹುದು.

ಒಟ್ಟಾರೆ, 2010ರ ನೇಮಕಾತಿ ಅಧಿಸೂಚನೆ, 2012ರ ಆಡಳಿತ ಮಂಡಳಿ ಅನುಮೋದನೆ, ಜಿಪಿಎಫ್ ಯೋಜನೆಯ ಅನುಷ್ಠಾನ ಮತ್ತು 2020ರ ರದ್ದತಿ ಪ್ರಯತ್ನಗಳ ಸಿಂಧುತ್ವ ಪ್ರಕರಣದ ಪ್ರಮುಖ ನಿರ್ಧಾರಕ ಅಂಶಗಳಾಗಿವೆ. ನ್ಯಾಯಾಲಯ ನೀಡಿರುವ ತಡೆಯಾಜ್ಞೆಯು ನೌಕರರಿಗೆ ಮಧ್ಯಂತರ ರಕ್ಷಣೆಯಾಗಿದೆ. ಆದರೆ, ಇದರಿಂದ ಅಂತಿಮ ಗೆಲುವು ಖಚಿತವಾ ಗುವುದಿಲ್ಲ. ಎರಡೂ ಕಡೆಯ ವಾದಗಳು ಮತ್ತು ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯ ನೀಡುವ ಅಂತಿಮ ತೀರ್ಪು ನೌಕರರ ಪಿಂಚಣಿ ಭವಿಷ್ಯವನ್ನು ನಿರ್ಧರಿಸಲಿದೆ.

ಕೆಪಿಟಿಸಿಎಲ್ ಮೇಲಾಧಿಕಾರಿಗಳ ಅಸ್ಪಷ್ಟತೆಯ ತೀರ್ಮಾನಗಳಿಂದಾಗಿ ಪಿಂಚಣಿ ಸವಲತ್ತು ಪಡೆಯದೇ ನಿವೃತ್ತಿ ಹೊಂದಿದ್ದು, ಕಳೆದ 6 ವರ್ಷಗಳಿಂದ ಯಾವುದೇ ಪಿಂಚಣಿ ಲಭಿಸಿಲ್ಲ. ನನ್ನಂತೆ ಐದಾರು ಜನರು ಸಹ ನಿವೃತ್ತಿ ಹೊಂದಿದ್ದು, ಪಿಂಚಣಿಯಿಲ್ಲದೇ ಕುಟುಂಬ ಸಾಗಿಸುವುದು ಕಷ್ಟವಾಗಿದೆ ಎಂದು ಕೆಪಿಸಿಎಲ್ ನಿವೃತ್ತ ನೌಕರ ಯೇಸುದಾಸ್ ಹೇಳಿದರು.