ತಾಲೂಕಿನ ಕೆಲವಡಿ ಗ್ರಾಮದ ಇನ್ನಾ ಪ್ರಾಜೆಕ್ಟ್ ಸಂಸ್ಥೆಯ ಕ್ಯಾಂಪ್‌ನಲ್ಲಿ ನಿಲ್ಲಿಸಿದ್ದ ಸ್ಯಾನಿ ಕಂಪನಿಯ ಹಿಟಾಚಿ ವಾಹನದ ಬಿಡಿಭಾಗಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಅಂತಾರಾಜ್ಯ ಕಳ್ಳರನ್ನು ಗುಳೇದಗುಡ್ಡ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಆರೋಪಿಗಳಿಂದ 12 ಲಕ್ಷ ಮೌಲ್ಯದ ಕಳುವಾದ ಸಾಮಗ್ರಿಯನ್ನು ಸಂಪೂರ್ಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ತಾಲೂಕಿನ ಕೆಲವಡಿ ಗ್ರಾಮದ ಇನ್ನಾ ಪ್ರಾಜೆಕ್ಟ್ ಸಂಸ್ಥೆಯ ಕ್ಯಾಂಪ್‌ನಲ್ಲಿ ನಿಲ್ಲಿಸಿದ್ದ ಸ್ಯಾನಿ ಕಂಪನಿಯ ಹಿಟಾಚಿ ವಾಹನದ ಬಿಡಿಭಾಗಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಅಂತಾರಾಜ್ಯ ಕಳ್ಳರನ್ನು ಗುಳೇದಗುಡ್ಡ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ಆರೋಪಿಗಳಿಂದ ₹ 12 ಲಕ್ಷ ಮೌಲ್ಯದ ಕಳುವಾದ ಸಾಮಗ್ರಿಯನ್ನು ಸಂಪೂರ್ಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಕಳೇದ ಜುಲೈ 14 ರಂದು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಹಿಟಾಚಿ ವಾಹನದ ಎರಡು ಡಿಸ್ಟ್ರೇಗಳು ಹಾಗೂ ಒಂದು ಕಂಟ್ರೋಲ್ ಬೋರ್ಡ್‌ ಸೇರಿದಂತೆ ಅಂದಾಜು ₹12 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಕಳ್ಳರು ಕಳವು ಮಾಡಿದ್ದರು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಆಂಧ್ರ ಪ್ರದೇಶ ರಾಜ್ಯದ ಅನಕಪಲ್ಲಿ ಜಿಲ್ಲೆಯ ಜಗನಾಧಪುರಂ ಗ್ರಾಮದ ಶೇಖರ ಮೊದಿ ನಾಯ್ಡು ರೆಡ್ಡಿ (28) ಹಾಗೂ ವಡಾದಿ ಗ್ರಾಮದ ಹೇಮಸಾಯಿ ರಾಜು ತೋರಾತಿ(22) ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಕಳುವಾಗಿದ್ದ ಸಂಪೂರ್ಣ ಸಾಮಗ್ರಿಯನ್ನು ವಶಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಹುನಗುಂದ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಬದಾಮಿ ವೃತ್ತದ ಸಿಪಿಐ ಕರಿಯಪ್ಪ ಬನ್ನೆ ನೇತೃತ್ವದಲ್ಲಿ ಗುಳೇದಗುಡ್ಡ ಠಾಣೆಯ ಪಿಎಸ್ಐ ಬಿ.ಬಿ.ಕೊಳ್ಳಿ ಹಾಗೂ ಸಿಬ್ಬಂದಿಗಳಾದ ಎಸ್.ಐ. ಬಿಳೇಕುದರಿ, ಎಂ.ಎಸ್. ಭಾವಿಕಟ್ಟಿ, ವಿಜಯ್ ತುಂಬದ, ಬಿ.ಎಂ.ಮೊಘಲನ್ನವರ, ಎಸ್.ಎಸ್.ಮೇಟಿ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ ಕಳುವಾದ ಸಂಪೂರ್ಣ ಸ್ವತ್ತು ವಶಪಡಿಸಿಕೊಂಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ಅಧೀಕ್ಷಕರು ತಂಡಕ್ಕೆ ಬಹುಮಾನ ಘೋಷಿಸಿದ್ದಾರೆ.