ವಜ್ರ ಮಹೋತ್ಸವ ಹೊಸ್ತಿಲಲ್ಲಿ ಕೆಪಿಎಸ್‌ ಶಾಲೆ

| Published : Aug 19 2025, 01:00 AM IST

ವಜ್ರ ಮಹೋತ್ಸವ ಹೊಸ್ತಿಲಲ್ಲಿ ಕೆಪಿಎಸ್‌ ಶಾಲೆ
Share this Article
  • FB
  • TW
  • Linkdin
  • Email

ಸಾರಾಂಶ

ರಾತ್ರಿ-ಹಗಲು ಶ್ರಮವಹಿಸಿ ಪಾಠ ಮಾಡುವ ಶಿಕ್ಷಕರು, ರುಚಿ-ಶುಚಿಯಾಗಿ ಅಡುಗೆ ಮಾಡುವ ಸಿಬ್ಬಂದಿ, ಸಕಲ ಮೂಲಸೌಲಭ್ಯ ಹೊಂದಿರುವ ಆನವಟ್ಟಿಯ ಸರ್ಕಾರಿ ಕೆಪಿಎಸ್‌ ಪ್ರೌಢ ಶಾಲೆ ಈಗ 75 ವರ್ಷಗಳನ್ನು ಪೂರೈಸುತ್ತಿದ್ದು, ವಜ್ರ ಮಹೋತ್ಸವದ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ.

ಕನ್ನಡಪ್ರಭ ವಾರ್ತೆ ಆನವಟ್ಟಿ

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದಿಂದ ಉತ್ತಮ ಹೆಸರಿನೊಂದಿಗೆ, ಪ್ರತಿವರ್ಷ ಉತ್ತಮ ಫಲಿತಾಂಶ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದುಕೊಳ್ಳಲು ರಾತ್ರಿ-ಹಗಲು ಶ್ರಮವಹಿಸಿ ಪಾಠ ಮಾಡುವ ಶಿಕ್ಷಕರು, ರುಚಿ-ಶುಚಿಯಾಗಿ ಅಡುಗೆ ಮಾಡುವ ಸಿಬ್ಬಂದಿ, ಸಕಲ ಮೂಲಸೌಲಭ್ಯ ಹೊಂದಿರುವ ಆನವಟ್ಟಿಯ ಸರ್ಕಾರಿ ಕೆಪಿಎಸ್‌ ಪ್ರೌಢ ಶಾಲೆ ಈಗ 75 ವರ್ಷಗಳನ್ನು ಪೂರೈಸುತ್ತಿದ್ದು, ವಜ್ರ ಮಹೋತ್ಸವದ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ.

1951ರಲ್ಲಿ ಪ್ರೌಢಶಾಲೆ ಪ್ರಾರಂಭವಾಗಿದ್ದು, ಸುಮಾರು 20 ವರ್ಷಕ್ಕೂ ಹೆಚ್ಚು ಕಾಲ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ಎಚ್‌.ಜಯಪ್ಪ ರಾಜ್ಯದಲ್ಲೇ ಆನವಟ್ಟಿಯ ಜೂನಿಯರ್‌ ಕಾಲೇಜ್‌ ಗುರುತಿಸುವಂತೆ ಮಾಡಿದರು. ಅದೇ ಪರಂಪರೆಯನ್ನು ಇಂದಿನ ಉಪಪ್ರಾಂಶುಪಾಲ ಎಂ.ಮಹಾದೇವಪ್ಪ ಉಳಿಸಿ ಬೆಳೆಸಿದ್ದಾರೆ.

8ರಿಂದ 10ನೇ ತರಗತಿವರೆಗೆ 1211 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಳೆದ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ ಇಂಗ್ಲೀಷ್‌ ಮಾಧ್ಯಮದಲ್ಲಿ ಶೇ.100, ಕನ್ನಡ ಮಾಧ್ಯಮದಲ್ಲಿ ಶೇ.92 ಫಲಿತಾಂಶ ಪಡೆದಿದ್ದು, ಸಂಜಯ್‌ ಎಂಬ ವಿದ್ಯಾರ್ಥಿ 621 ಅಂಕ ಪಡೆದ ಸಾಧನೆ ಮಾಡಿದ್ದಾರೆ. ಈ ಉತ್ತಮ ಫಲಿತಾಂಶದಿಂದಾಗಿ ಸಿರ್ಸಿ, ಹಾವೇರಿಯ ತಾಲೂಕುಗಳಿಂದ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

ಕಾಯಂ ಸರ್ಕಾರಿ ಶಿಕ್ಷಕರು 32, ಅತಿಥಿ ಶಿಕ್ಷಕರು 10, ಎಸ್‌ಡಿಎಂಸಿ ಸಮಿತಿಯಿಂದ ಮೂರು ಜನ ಅತಿಥಿ ಶಿಕ್ಷಕರು, 8 ಜನ ಅಡುಗೆ ಸಿಬ್ಬಂದಿ, 24 ಯೂನಿಟ್‌ ಶೌಚಾಲಗಳು, 34 ಕೊಠಡಿ, 8ರಿಂದ 10 ನೇ ತರಗತಿ ವರೆಗೂ ಎ ಯಿಂದ ಐ ವರೆಗೂ 27 ವಿಭಾಗಗಳು, 2 ಪ್ರಯೋಗಾಲಯಗಳು ಮೊದಲಾದ ಆಧುನಿಕ ಸೌಲಭ್ಯಗಳು ಶಾಲೆಯಲ್ಲಿವೆ.

ಶುದ್ಧ ಕುಡಿಯುವ ನೀರಿನ ಘಟಕ:

ನನ್ನ ಶಾಲೆ, ನನ್ನ ಕೂಡುಗೆ ಕಾರ್ಯಕ್ರಮದಡಿಯಲ್ಲಿ ಹಳೆ ವಿದ್ಯಾರ್ಥಿಗಳು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಈ ಶಾಲೆಯಲ್ಲಿ ಓದಿರುವ ಕೆ.ಪಿ.ಶಿವಪ್ರಕಾಶ್‌ ಅವರು 15 ಲಕ್ಷ ರು. ವೆಚ್ಚದಲ್ಲಿ ಪಿಯುಸಿ ಮತ್ತು ಪ್ರೌಢಶಾಲೆಯ 3500 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 7000 ಸಾವಿರ ಲೀಟರ್‌ ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದಾರೆ. 5 ಲಕ್ಷ ರು. ವೆಚ್ಚದಲ್ಲಿ ಐದು ಸ್ಮಾರ್ಟ್‌ ಅನ್‌ರೈಡ್‌ ಬೋರ್ಡ್‌ಗಗಳನ್ನು ಹಾಕಿಸಿಕೊಟ್ಟಿದ್ದಾರೆ.

ಬಹುಮುಖ ಪ್ರತಿಭೆಯ ಉಪ ಪ್ರಾಂಶುಪಾಲ:

ಕೆಪಿಎಸ್‌ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಎಂ.ಮಹಾದೇವಪ್ಪ ಅವರು ಉತ್ತಮ ಲೇಖಕರಾಗಿದ್ದು, ಅವರು ಬರೆದ ವ್ಯವಹಾರ ಸಂಗತಿ ವಿಷಯ ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್‌ನಲ್ಲಿ ಪಾಠವಾಗಿದೆ. ಅವರ ರಚನೆಯ ಕವಿದಿರುವ ಕತ್ತಲೆ ಮತ್ತು ಟ್ರಿನ್‌ ಟ್ರಿನ್‌ ಟ್ರಿನ್‌ ಎರಡು ನಾಟಕಗಳನ್ನು ಅವರೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ, ನಾಟಕ ಪ್ರದರ್ಶನ ಮಾಡಿಸಿದ್ದಾರೆ, ಅವರು ಮಕ್ಕಳ ಕಥಾ ಸಂಕಲನಗಳು, ಕಾದಂಬರಿ, ನಾಟಕಗಳು, ಪದ್ಯಗಳು ಸೇರಿ 60 ಪುಸ್ತಕಗಳನ್ನು ಬರೆದಿದ್ದು, 20 ಪುಸ್ತಕಗಳು ಪ್ರಕಟಣೆಗೊಂಡಿವೆ.

3500 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 50 ಲಕ್ಷ ರು. ಅಂದಾಜು ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ ಮಾಡಲು ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ಎಸ್‌.ಮಧು ಬಂಗಾರಪ್ಪ ಈಗಾಗಲೇ ಯೋಜನೆ ಸಿದ್ಧ ಮಾಡಿ ಟೆಂಡರ್‌ಗೆ ಕಳುಹಿಸಿದ್ದಾರೆ.

ನಾಗರಾಜ ಶುಂಠಿ, ಸಿಡಿಸಿ ಸಮಿತಿಯ ಕಾರ್ಯಾಧ್ಯಕ್ಷ.

ಕೆಪಿಎಸ್‌ ಶಾಲೆ ಪ್ರತಿ ವರ್ಷ ಅತ್ಯುತ್ತಮ ಫಲಿತಾಂಶ ಪಡೆಯುತ್ತಿದ್ದು, ಪಕ್ಕದ ಜಿಲ್ಲೆಯ ತಾಲ್ಲೂಕುಗಳಿಂದ ವಿದ್ಯಾರ್ಥಿಗಳು ದಾಖಲಾತಿ ಆಗುತ್ತಿದ್ದಾರೆ. ಹಾಗಾಗಿ ಬೇಡಿಕೆಯ ಮೇರೆಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಎರಡು ಹಾಸ್ಟೇಲ್‌ ಮಂಜೂರು ಮಾಡುವಂತೆ ಜಿಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ.

ಆರ್‌.ಪುಷ್ಪಾ, ಕ್ಷೇತ್ರ ಶಿಕ್ಷಣಾಧಿಕಾರಿ.