ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ:
ಮೂರು ವರ್ಷಗಳಲ್ಲಿ ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ಹೈಟೆಕ್ ಸರ್ಕಾರಿ ಶಾಲೆಯಾಗಲಿದೆ ಎಂದು ರೆಕ್ಯೋ ಸಂಸ್ಥೆ ಸಿಇಒ ಪ್ರಕಾಶ್ ರುಕ್ಮಯ್ಯ ಭರವಸೆ ವ್ಯಕ್ತಪಡಿಸಿದರು. ಅವರು ತಾವು ಓದಿದ ಸರ್ಕಾರಿ ಶಾಲೆಗೆ ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿದ ಭೋಜನಾಲಯ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ್ದ ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಮುಂದಿನ 3 ವರ್ಷಗಳಲ್ಲಿ ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಂಪೂರ್ಣ ಸ್ಮಾರ್ಟ್ ಕ್ಲಾಸ್ ಮಾಡುವುದರ ಮೂಲಕ, ವಿದ್ಯಾರ್ಥಿಗಳಿಗೆ ಖಾಸಗಿ ಶಾಲೆಯಲ್ಲಿ ದೊರೆಯುವುದಕ್ಕಿಂತ ಹೆಚ್ಚಿನ ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿ ದೊರೆಯುವಂತಾಗಲಿದೆ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿರುವಂತಹ ಹಳೆಯ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ, ಅವರೆಲ್ಲರೂ ಮನಸ್ಸು ಮಾಡಿದರೆ, ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೂ ಆಧುನಿಕ ಸ್ಪರ್ಶ ನೀಡಿ ಮಾದರಿಗೊಳಿಸಬಹುದು ಎಂದರು.ಕಳೆದ ವರ್ಷ ಎಸ್ಸೆಸ್ಸೆಲ್ಸಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಕಾಶ್ ರುಕ್ಮಯ್ಯ ಪ್ರೋತ್ಸಾಹಧನ ವಿತರಿಸಿದರು. ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಮಚಂದ್ರ, ಪ್ರಾಂಶುಪಾಲ ಎಸ್.ರವಿಶಂಕರ್, ಉಪ ಪ್ರಾಂಶುಪಾಲ ಎಚ್.ಎಂ. ಈಶ್ವರಪ್ಪ, ಪಂಚಾಯಿತಿ ಅಧ್ಯಕ್ಷರಾದ ಮೋಹನ್ ಕುಮಾರ್, ಕಲೀಮುಲ್ಲಾ ಖಾನ್, ಗಂಗಮ್ಮ ನಾಗಪ್ಪ, ಉಪಾಧ್ಯಕ್ಷೆ ರೂಪಲತಾ, ಸದಸ್ಯ ಸಿರಿಜಾನ್, ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ, ಇಲಾಖೆಯ ಗುರುರಾಜ್, ಮುಖ್ಯಶಿಕ್ಷಕ ಟಿ.ಎಲ್. ನಾಗರಾಜ್ ಇದ್ದರು.
- - - ಕೋಟ್ ಆನಂದಪುರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಅನ್ನು ಮುಂದಿನ ದಿನಗಳಲ್ಲಿ ಸ್ಮಾರ್ಟ್‌ಕ್ಲಾಸ್ ಆಗಿ ಪರಿವರ್ತನೆಗೊಳಿಸುವ ಯೋಜನೆ ಇದೆ. ಈ ಶಾಲೆಯಲ್ಲಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನ ಮಾಡಿದರೆ, ಅಂಥ ವಿದ್ಯಾರ್ಥಿಗಳಲ್ಲಿ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲು ರೆಕ್ಯೋ ಸಂಸ್ಥೆ ಮೂಲಕ ಪ್ರೇರೇಪಿಸಲಾಗುವುದು- ಪ್ರಕಾಶ್ ರುಕ್ಮಯ್ಯ, ಹಳೇ ವಿದ್ಯಾರ್ಥಿ
- - - ಬಾಕ್ಸ್1987- 88ರಲ್ಲಿ ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ, ಪ್ರಕಾಶ್ ರುಕ್ಮಯ್ಯ, ಕಡುಬಡತನವಿದ್ದರೂ ಉನ್ನತ ವ್ಯಾಸಂಗ ಮಾಡಿ ರೆಕ್ಯೋ ಸಂಸ್ಥೆ ಸಿಇಒ ಆಗಿದ್ದಾರೆ. ನಾವು ಬದುಕಿದರೆ ಸಾಲದು. ನಮ್ಮ ಸುತ್ತಮುತ್ತಲಿನ ಪರಿಸರ ಸಹ ಉತ್ತಮವಾಗಿರಬೇಕು ಎನ್ನುವ ಉದ್ದೇಶ ಹೊಂದಿದ್ದಾರೆ. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇತರರಿಗ ಮಾದರಿಯಾಗಿದ್ದಾರೆ. ಬಡಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ.
ಕಳೆದ ವರ್ಷ ₹21 ಲಕ್ಷ ವೆಚ್ಚದಲ್ಲಿ ಅಡುಗೆ ಕೋಣೆ ನಿರ್ಮಿಸಿ, ಬಾಯ್ಲರ್ ವ್ಯವಸ್ಥೆ ಕಲ್ಪಿಸಿದರು. ಈ ವರ್ಷ ಮಕ್ಕಳು ಸಾಮೂಹಿಕವಾಗಿ ಕುಳಿತು ಬಿಸಿಊಟ ಮಾಡಬೇಕು ಎನ್ನುವ ದೃಷ್ಟಿಯಲ್ಲಿ ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ಭೋಜನಶಾಲೆ ನಿರ್ಮಿಸಿದ್ದು, ಇದಕ್ಕೆ ಪಿಒಪಿ, ಸೋಲಾರ್ ಮತ್ತು ಡಿಜಿಟಲ್ ಸ್ಕ್ರೀನ್ ಅಳವಡಿಸಿ, ಹೈಟೆಕ್ ಭೋಜನಾಲಯವಾಗಿ ನಿರ್ಮಿಸಿ, ಲೋಕಾರ್ಪಣೆ ಮಾಡಿದ್ದಾರೆ.- - - -20ಎಎನ್,ಪಿ1:
ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಹೈಟೆಕ್ ಭೋಜನಾಲಯವನ್ನು ರೇಕ್ಯೂ ಸಂಸ್ಥೆ ಸಿಇಒ, ಹಳೇ ವಿದ್ಯಾರ್ಥಿ ಪ್ರಕಾಶ ರುಕ್ಮಯ್ಯ ಉದ್ಘಾಟಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು, ಪ್ರಾಂಶುಪಾಲ ರವಿಶಂಕರ್, ಉಪ ಪ್ರಾಂಶುಪಾಲ ಈಶ್ವರಪ್ಪ, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.- - - -20ಎಎನ್,ಪಿ2:
ಆನಂದಪುರ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಭೋಜನಾಲಯ.