ಸಾರಾಂಶ
ಪ್ರಶ್ನೆ ಪತ್ರಿಕೆಗಳ ಭಾಷಾಂತರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಕರ್ನಾಟಕ ಲೋಕಸೇವಾ ಆಯೋಗ ಭಾನುವಾರ ನಡೆದ ಪರೀಕ್ಷೆಯಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ವಿಜಯಪುರ : ಪ್ರಶ್ನೆ ಪತ್ರಿಕೆಗಳ ಭಾಷಾಂತರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಕರ್ನಾಟಕ ಲೋಕಸೇವಾ ಆಯೋಗ ಭಾನುವಾರ ನಡೆದ ಪರೀಕ್ಷೆಯಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಎಡವಟ್ಟು ಮಾಡಿಕೊಂಡಿದ್ದರೂ ಎಚ್ಚೆತ್ತುಕೊಳ್ಳದ ಪರೀಕ್ಷಾ ಆಯೋಗ ಈ ಬಾರಿ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಹೀಗಾಗಿ ವಿಜಯಪುರದಲ್ಲಿ 2ನೇ ಬಾರಿಗೆ ನಡೆದ ಗೆಜೆಟೆಡ್ ಪ್ರೋಬೆಷನರಿ ಗ್ರೂಪ್ ಎ ಹಾಗೂ ಬಿ ವೃಂದದ 384 ಹುದ್ದೆಗಳ ಪೂರ್ವಭಾವಿ ಮರುಪರೀಕ್ಷೆಯಲ್ಲಿ ಮತ್ತೆ ಗೊಂದಲ ಉಂಟಾಗಿದೆ. ಪರಿಣಾಮ ಅಭ್ಯರ್ಥಿಗಳು ಒಂದೂವರೆ ಗಂಟೆಗಳ ಕಾಲ ಪರೀಕ್ಷೆಯನ್ನೇ ಬಹಿಷ್ಕರಿಸಿದ ಘಟನೆ ನಡೆದಿದೆ. ನಗರದ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಒಎಂಆರ್ ಶೀಟ್ ನಲ್ಲಿ ನೋಂದಣಿ ಸಂಖ್ಯೆ ಅದಲು ಬದಲು ಆಗಿದ್ದರಿಂದ ಈ ಬಾರಿಯೂ ಪರೀಕ್ಷೆಯನ್ನು ರದ್ದುಗೊಳಿಸಬೇಕು ಎಂದು ಪರೀಕ್ಷಾರ್ಥಿಗಳು ಕೊಠಡಿಯಿಂದ ಹೊರಬಂದು ಆಗ್ರಹಿಸಿದರು.
ಜಿಲ್ಲಾದ್ಯಂತ ಒಟ್ಟು 32 ಪರೀಕ್ಷಾ ಕೇಂದ್ರಗಳಲ್ಲಿ ಇಂದು 12,741 ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು. ಪರೀಕ್ಷಾರ್ಥಿಗಳು ನಗರದ ಸಿಕ್ಯಾಬ್ ಸಂಸ್ಥೆಯ ಎರಡು ಪರೀಕ್ಷಾ ಕೇಂದ್ರಗಳು, ಮರಾಠಿ ಮಹಾವಿದ್ಯಾಲಯ ಹಾಗೂ ವಿಕಾಸ ವಿದ್ಯಾಲಯ ಸೇರಿ ಒಟ್ಟು ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಒಎಂಆರ್ ನಂಬರ್ ಹಾಗೂ ನೋಂದಣಿ ನಂಬರ್ ಅದಲು ಬದಲಾಗಿವೆ. ಹೀಗಾಗಿ ಬೆಳಗ್ಗೆ 10ರಿಂದ 12ರ ವರೆಗೆ ನಡೆಯುತ್ತಿದ್ದ ಪರೀಕ್ಷೆಯಲ್ಲಿ, 10ಗಂಟೆಗೆ ಪರೀಕ್ಷೆ ಆರಂಭವಾದ ಕೂಡಲೇ ತಮ್ಮ ನೋಂದಣಿ ಹಾಗೂ ಒಎಂಆರ್ ಸೀಟ್ ಸಂಖ್ಯೆಯನ್ನು ಪರೀಕ್ಷಿಸಿಕೊಂಡ ಅಭ್ಯರ್ಥಿಗಳಿಗೆ ಶಾಕ್ ಕಾದಿತ್ತು. ತಮ್ಮ ನೋಂದಣಿ ಸಂಖ್ಯೆ ಇಲ್ಲದೆ ಇರುವುದರಿಂದ ನಾವ್ಯಾರೂ ಪರೀಕ್ಷೆ ಬರೆಯುವುದಿಲ್ಲ ಎಂದು ಅಭ್ಯರ್ಥಿಗಳು ಪಟ್ಟು ಹಿಡಿದು ಕೊಠಡಿಯಿಂದ ಹೊರಬಂದು ಕೆಪಿಎಸ್‌ಸಿ ಪರೀಕ್ಷಾ ಮಂಡಳಿಯ ಮೇಲೆ ಆಕ್ರೋಶ ಹೊರಹಾಕಿದರು.
ಸಿಕ್ಯಾಬ್ ಕಾಲೇಜಿನಲ್ಲಿ ಗೊಂದಲ:
ನಗರದ ಸಿಕ್ಯಾಬ್ ಪಿಯು ಕಾಲೇಜಿನಲ್ಲಿ ಮೊದಲಿಗೆ ಸಮಸ್ಯೆ ಕಂಡುಬಂದ ತಕ್ಷಣ ಬೆಳಗ್ಗೆ 10ಗಂಟೆಗೆ ಪರೀಕ್ಷೆ ಬರೆಯದೆ ಅಭ್ಯರ್ಥಿಗಳು ಹೊರಬಂದರು, ಈ ವೇಳೆ ಪರೀಕ್ಷಾ ಕೇಂದ್ರಕ್ಕೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹಾಗೂ ಜಿಪಂ ಸಿಇಒ ರಿಶಿ ಆನಂದ ಭೇಟಿ ನೀಡಿ, ಸಮಸ್ಯೆಯನ್ನು ಅವಲೋಕಿಸಿದರು. ಬಳಿಕ ತಕ್ಷಣವೇ ಕೆಪಿಎಸ್‌ಸಿ ಅಧಿಕಾರಿಗಳ ಜೊತೆ ಮಾತನಾಡಿದ ಎಡಿಸಿ ಹಾಗೂ ಸಿಇಒ ಪರೀಕ್ಷಾರ್ಥಿಗಳ ನೋಂದಣಿ ನಂಬರ್‌ನ್ನು ಒಎಂಆರ್ ಶೀಟ್ ನಲ್ಲಿ ಪ್ರತ್ಯೇಕವಾಗಿ ನೋಂದಾಯಿಸಿಲು ಸಲಹೆ ನೀಡಿದರು. ಇಷ್ಟೊತ್ತಿಗಾಗಲೇ 11.20 ಸಮಯವಾಗಿದ್ದರಿಂದ ಒಎಂಆರ್ ಶೀಟ್ ನಲ್ಲಿ ಪರೀಕ್ಷಾರ್ಥಿಗಳ ನೋಂದಣಿ ನಂಬರ್ ನಮೂದಿಸಲು ಸೂಚನೆ ನೀಡಿದ ಬಳಿಕ ತಡವಾಗಿ ಪರೀಕ್ಷೆ ಬರೆಯಲು ಶುರು ಮಾಡಿದ ಬ್ಲಾಕ್‌ಗಳ ಪರೀಕ್ಷಾರ್ಥಿಗಳಿಗೆ ಎಷ್ಟು ಸಮಯ ವಿಳಂಬಗಿದೆಯೋ ಅಷ್ಟು ಹೆಚ್ಚಿನ ಸಮಯವನ್ನು ನೀಡಿ ಪರೀಕ್ಷೆ ಬರೆಸಲಾಯಿತು. ಬಳಿಕ ಹಿರಿಯ ಅಧಿಕಾರಿಗಳ ಸ್ಪಷ್ಟನೆಗೆ ಒಪ್ಪಿ ಪರೀಕ್ಷೆ ಬರೆಯಲು ತೆರಳಿದ ಪರೀಕ್ಷಾರ್ಥಿಗಳು ಪರೀಕ್ಷೆ ಬರೆದರು.ವಿಕಾಸ ಶಾಲೆಯಲ್ಲೂ ವಾಗ್ವಾದ
ನಗರದ ವಿಕಾಸ ಶಾಲೆಯಲ್ಲಿ ನಡೆಯುತ್ತಿದ್ದ ಕೆಪಿಎಸ್‌ಸಿ ಪರೀಕ್ಷೆಯಲ್ಲೂ ಇದೇ ಸಮಸ್ಯೆ ಎದುರಾಗಿತ್ತು. ಈ ವೇಳೆ 10ಗಂಟೆಗೆ ಆರಂಭವಾಗಿದ್ದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬಹಿಷ್ಕರಿಸಿದ್ದರಿಂದ ಅಲ್ಲಿಯೂ ಕೆಪಿಎಸ್‌ಸಿ ಸದಸ್ಯ ಎಂ.ಬಿ.ಹೆಗ್ಗಣ್ಣವರ ಭೇಟಿ ನೀಡಿ ಅಭ್ಯರ್ಥಿಗಳ ಮನವೊಲಿಸಿದರು. ಬಳಿಕ ಮೈಕ್ ಮೂಲಕ ಹೆಚ್ಚುವರಿ ಸಮಯ ಘೋಷಣೆ ಮಾಡಿದ್ದರಿಂದ ಅಭ್ಯರ್ಥಿಗಳು ಪರೀಕ್ಷೆ ಬರೆದರು.ಕಳೆದ ಆಗಷ್ಟ್‌ನಲ್ಲಿ ನಡೆದ ಪರೀಕ್ಷೆಗಳಲ್ಲಿಯೂ ಹೀಗೆ ಯಡವಟ್ಟುಗಳಾಗಿ ಆ ಪರೀಕ್ಷೆಯನ್ನೇ ರದ್ದು ಮಾಡಿ ಈಗ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಇದೀಗ ಮತ್ತೆ ಎಡವಟ್ಟು ಕಂಡು ಬಂದಿದೆ.
ಕೆಪಿಎಸ್‌ಸಿ ಯವರು ಪರೀಕ್ಷೆ ನಡೆಸಲು ಲಾಯಕ್ ಇಲ್ಲ. ನೋಂದಣಿ ಸಂಖ್ಯೆ ಒಎಂಆರ್ ಸಂಖ್ಯೆ ಅದಲು ಬದಲು ಆಗಿರೋದಕ್ಕೆ ಯಾರು ಹೊಣೆ?. ಪಶ್ನೆ ಪತ್ರಿಕೆ ಸಿರೀಸ್ ಹಾಗೂ ಒಎಂಆರ್ ಸಂಖ್ಯೆ ಸಿರೀಸ್ ಅದಲು ಬದಲಾಗಿವೆ. ಈಗೇನೋ ಅಧಿಕಾರಿಗಳ ತಾವು ಜಾರಿಕೊಳ್ಳಲು ಪ್ರಶ್ನೆ ಪತ್ರಿಕೆ ಸಿರೀಸ್ ಸಂಖ್ಯೆಯಂತೆ ಒಎಂಆರ್ ಸಂಖ್ಯೆಯ ಸಿರೀಸ್ ತಿದ್ದುಪಡಿ ಮಾಡಿ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿದ್ದಾರೆ. ಇದನ್ನು ನಾವು ತಿದ್ದುಪಡಿ ಮಾಡಿ ಪರೀಕ್ಷೆ ಬರೆದರೆ ಮುಂದೆ ಹೇಗೆ ಮೌಲ್ಯಮಾಪನ ಆಗುತ್ತದೆ ಎಂದು ಸರ್ಕಾರ ಉತ್ತರಿಸಬೇಕು.
ನೊಂದ ಪರೀಕ್ಷಾರ್ಥಿಗಳು
ಕೆಪಿಎಸ್‌ಸಿ ಪರೀಕ್ಷೆಯ ವೇಳೆ ಒಎಂಆರ್ ಶೀಟ್ ಹಾಗೂ ನೋಂದಣಿ ಸಂಖ್ಯೆಯಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ತಕ್ಷಣ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ವಿದ್ಯಾರ್ಥಿಗಳು ಒಎಂಆರ್ ಶೀಟ್ ಮೇಲೆ ತಮ್ಮ ನೋಂದಣಿ ಸಂಖ್ಯೆ ಹಾಕಿ ಪರೀಕ್ಷೆ ಬರೆಯಲು ಸೂಚಿಸಿದ್ದು, ವಿಳಂಬವಾದ ಸಮಯವನ್ನು ಹೆಚ್ಚುವರಿಯಾಗಿ ನೀಡಿ ಪರೀಕ್ಷೆ ಬರೆಸಲಾಗಿದೆ. ನಗರದಲ್ಲಿ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅಭ್ಯರ್ಥಿಗಳಿಗೆ ನ್ಯಾಯ ಕೊಡಿಸಲಾಗುವುದು.
ರಿಶಿ ಆನಂದ, ಜಿಲ್ಲಾ ಪಂಚಾಯತಿ ಸಿಇಒ