ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿರುವ ಗೆಜೆಟೆಡ್ ಪ್ರೊಬೆಷನರ್ ಗ್ರೂಪ್ ಎ ಮತ್ತು ಬಿ ವೃಂದ ಹುದ್ದೆಗಳಿಗೆ ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಪರೀಕ್ಷೆಗೆ ಒಟ್ಟು 4007 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು.ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ವಿದ್ಯಾನಿಕೇತನ ಪ.ಪೂ.ಕಾಲೇಜು, ಬಿಡಿಇ ಬಾಲಕಿಯರ ಪ್ರೌಢಶಾಲೆ, ಪಿಡಿಜೆ ಪ್ರೌಢಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವ್ಹಿ.ಬಿ.ದರಬಾರ ಪ.ಪೂ.ಕಾಲೇಜು ಹಾಗೂ ಅಂಜುಮನ್ ಕಲಾ ವಾಣಿಜ್ಯ ಮಹಾವಿದ್ಯಾಲಯ ಸೇರಿದಂತೆ ಒಟ್ಟು 8 ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಿದ್ದು, ಪತ್ರಿಕೆ-1ಕ್ಕೆ 2928 ಹಾಗೂ ಪತ್ರಿಕೆ-2ಕ್ಕೆ 2914 ಅಭ್ಯರ್ಥಿಗಳು ಹಾಜರಾಗಿದ್ದರು. ಪತ್ರಿಕೆ-1ಕ್ಕೆ 1079 ಹಾಗೂ ಪತ್ರಿಕೆ-2ಕ್ಕೆ 1093 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.
ಜಿಲ್ಲಾಧಿಕಾರಿ ಪರಿಶೀಲನೆ:ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರೀಕ್ಷೆಗಳು ಅತ್ಯಂತ ಸುಗಮ ಹಾಗೂ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.