ಸಾರ್ವಜನಿಕರ ಮನವಿ ಸ್ವೀಕರಿಸದ ಕೆಪಿಟಿಸಿಎಲ್‌ ಅಧಿಕಾರಿ

| Published : Oct 08 2025, 01:01 AM IST

ಸಾರ್ವಜನಿಕರ ಮನವಿ ಸ್ವೀಕರಿಸದ ಕೆಪಿಟಿಸಿಎಲ್‌ ಅಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ರೈತರು ಇಟ್ಟಗಿ ಕೆಪಿಟಿಸಿಎಲ್‌ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಲು ಹೋದಾಗ ಮನವಿ ಸ್ವೀಕರಿಸದೇ ಬೇಜವಾಬ್ದಾರಿಯಿಂದ ವರ್ತಿಸಿದ ಕೆಪಿಟಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹೂವಿನಹಡಗಲಿ: ರೈತರ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಬೇಕಿದ್ದ ಇಟ್ಟಗಿ ಕೆಪಿಟಿಸಿಎಲ್‌ ಅಧಿಕಾರಿ ಬೇಜವಾಬ್ದಾರಿತನದಿಂದ ವರ್ತಿಸಿದ ಪರಿಣಾಮ ಕಚೇರಿ ಬಾಗಿಲಿಗೆ ಮನವಿ ಪತ್ರ ಅಂಟಿಸಿ ವಿನೂತನವಾಗಿ ಪ್ರತಿಭಟಿಸಿದ ಪ್ರಸಂಗ ಸೋಮವಾರ ನಡೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ರೈತರು ಇಟ್ಟಗಿ ಕೆಪಿಟಿಸಿಎಲ್‌ ಕಚೇರಿಗೆ ಆಗಮಿಸಿ ಮನವಿ ಪತ್ರ ಸಲ್ಲಿಸಲು ಹೋದಾಗ ಮನವಿ ಸ್ವೀಕರಿಸದೇ ಬೇಜವಾಬ್ದಾರಿಯಿಂದ ವರ್ತಿಸಿದ ಕೆಪಿಟಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿಯಲ್ಲಿ ಟೆಂಡರ್ ಹಂತದ 2+20ಎಂವಿಎ 110/11ಕೆವಿಗೆ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಿ ಬರುವ ಬೇಸಿಗೆಯೊಳಗೆ ಪೂರ್ಣಗೊಳಿಸಬೇಕೆಂದು ಮುಖಂಡರ ಜತೆ ಇಟ್ಟಿಗಿ ಕೆಪಿಟಿಸಿಎಲ್ ಇಇ ಕಚೇರಿಗೆ ಸೋಮವಾರ ಮನವಿ ನೀಡಲು ಆಗಮಿಸಿದ್ದೆವು. ಆದರೆ, ಕಾರ್ಯಪಾಲಕ ಎಂಜಿನಿಯರ್ ಸೌಜನ್ಯಕ್ಕೂ ಕಚೇರಿಯಿಂದ ಬಂದು ತಮ್ಮ ಮನವಿ ಸ್ವೀಕರಿಸದೇ ತಮ್ಮನ್ನು 2 ಗಂಟೆಗೂ ಅಧಿಕ ಕಾಲ ಕಾಯಿಸಿದ್ದಲ್ಲದೇ, ರೈತರೊಂದಿಗೆ ಬೇಜವಾಬ್ದಾರಿ ಪ್ರದರ್ಶಿಸಿ ಜನವಿರೋಧಿ ಅಧಿಕಾರಿಯಾಗಿ ವರ್ತಿಸಿದ್ದಾರೆ.

ಅಧಿಕಾರಿಯ ವರ್ತನೆ ಖಂಡಿಸಿ ಕಚೇರಿಯ ಮುಖ್ಯ ದ್ವಾರಕ್ಕೆ ತಮ್ಮ ಮನವಿಯನ್ನು ಅಂಟಿಸಿ ಬಂದಿದ್ದೇವೆ. ಶೀಘ್ರ ಈ ಆಧಿಕಾರಿ ವಿರುದ್ಧ ಕಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆ ಮೇಲಧಿಕಾರಿಗಳಿಗೆ ಒತ್ತಾಯಿಸಲಾಗುವುದು ಎಂದರು.

ತಂಬ್ರಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಸುರೇಶ ಯಳಕಪ್ಪನವರ ಮಾತನಾಡಿ, ತಂಬ್ರಹಳ್ಳಿ ಹೋಬಳಿ ವ್ಯಾಪ್ತಿಯ ರೈತರ ಸಮಸ್ಯೆಯನ್ನು ಅರಿಯದೆ ಕಾರ್ಯಪಾಲಕ ಅಭಿಯಂತರ ಎಂಜಿನಿಯರ್‌ ನಿರ್ಲಕ್ಷ್ಯವಾಗಿ ನಡೆದುಕೊಂಡಿರುವುದು ಬೇಸರ ತಂದಿದೆ. ರೈತ ಮುಖಂಡರು ಸೌಜನ್ಯದಿಂದ ನೀಡಲು ಬಂದ ಮನವಿಯನ್ನೂ ಸ್ವೀಕರಿಸದೇ ದರ್ಪದಿಂದ ವರ್ತಿಸಿರುವುದು ಜನಪರ ಸರ್ಕಾರಕ್ಕೆ ಮುಜುಗರ ತಂದಿದೆ. ಅಲ್ಲದೇ ಯೋಜನೆಗಳು ತ್ವರಿತವಾಗಿ ಅನುಷ್ಠಾನವಾಗುವುದೂ ಅನುಮಾನಾಸ್ಪದವಾಗಿದೆ. ಆದ್ದರಿಂದ ಇಂತಹ ಅಧಿಕಾರಿಗಳ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕಿದೆ ಎಂದು ಆಗ್ರಹಿಸಿದರು.

ತಾಪಂ ಮಾಜಿ ಸದಸ್ಯ ಪಿ. ಕೊಟೇಶ, ಪಿಕಾರ್ಡ್ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪಟ್ಟಣಶೆಟ್ಟಿ ಸುರೇಶ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಗೌರಜ್ಜನವರ ಗಿರೀಶ, ಗ್ರಾಪಂ ಸದಸ್ಯ ಆರ್. ಬಸಲಿಂಗನಗೌಡ, ಮುಖಂಡರಾದ ರೆಡ್ಡಿ ಮಂಜುನಾಥ ಪಾಟೀಲ್, ಮೈನಳ್ಳಿ ಸುರೇಶ ಸೇರಿದಂತೆ ಇತರರಿದ್ದರು.