ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಪೂರ್ಣಗೊಂಡ ನಂತರ ಸಂಬಂಧಪಟ್ಟ ನಗರ ಪಾಲಿಕೆಗಳ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

-ಅ.31ರೊಳಗೆ ಬೀದಿ ದೀಪ ಅಳವಡಿಕೆ ಪೂರ್ಣಕ್ಕೆ ಸೂಚನೆವಿಫಲ ಗುತ್ತಿಗೆದಾರರಿಂದ ₹93,67,384 ದಂಡ ಸಂಗ್ರಹ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಪೂರ್ಣಗೊಂಡ ನಂತರ ಸಂಬಂಧಪಟ್ಟ ನಗರ ಪಾಲಿಕೆಗಳ ಅಧಿಕಾರಿಗಳು ಕಡ್ಡಾಯವಾಗಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಅಧಿಕಾರಿಗಳೊಂದಿಗೆ ನಡೆಸಿದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಸಚಿವರು, ಬಾಕಿ ಉಳಿದಿರುವ ಪ್ರದೇಶಗಳಲ್ಲೂ ಅ.31ರ ಒಳಗೆ ಅಳವಡಿಕೆ ಕಾರ್ಯ ಪೂರ್ಣಗೊಳಿಸಬೇಕು. ಅಲ್ಲದೆ, ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೋಡಿಯಂ ಲೈಟುಗಳನ್ನು ಎಲ್ಇಡಿ ಲೈಟುಗಳನ್ನಾಗಿ ಮಾರ್ಪಡಿಸಲು ಕ್ರಮವಹಿಸಬೇಕು ಎಂದರು.

ಜಿಬಿಎ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿ ದೀಪಗಳ ಅಳವಡಿಕೆ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಕಳೆದ ಮೂರು ತಿಂಗಳಿಂದ ಸಂಬಂಧಿತ ಅಧಿಕಾರಿಗಳ ಜೊತೆ ಸತತ ಸಭೆ ನಡೆಸಿದ್ದರು. ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಕಾರ್ಯಪಾಲಕ ಎಂಜಿನಿಯರ್ ಎಚ್.ವಿ.ರಮೇಶ್ ಅವರನ್ನ ಅಮಾನತುಗೊಳಿಸಿದ್ದರು. ಅಲ್ಲದೆ, ವಿಫಲವಾದ ಗುತ್ತಿಗೆದಾರರಿಂದ ಒಟ್ಟು ರೂ. 93,67,384 ದಂಡ ಸಂಗ್ರಹಿಸಲಾಗಿತ್ತು.

ಸೆ.18ರ ರಾತ್ರಿ ಖುದ್ದು ಫೀಲ್ಡಿಗಿಳಿದು ಜೆಪಿ ನಗರದಿಂದ ಬನ್ನೇರುಘಟ್ಟ ನೈಸ್ ರಸ್ತೆವರೆಗೆ ಪರಿಶೀಲನೆ ನಡೆಸಿ ಅಧಿಕ ಸಂಖ್ಯೆಯಲ್ಲಿ ಬೀದಿ ದೀಪಗಳು ಕೆಲಸ ಮಾಡದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ದೀಪಗಳನ್ನು ಸಮರ್ಪಕವಾಗಿ ಅಳವಡಿಸದಿದ್ದಲ್ಲಿ ಅಥವಾ ಅವು ಕಾರ್ಯನಿರ್ವಹಿಸದಿದ್ದಲ್ಲಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು ಎಂದು ಇಂದಿನ ಸಭೆಯಲ್ಲಿ ತಾಕೀತು ಮಾಡಿದರು.

ಸಭೆಯಲ್ಲಿ ನಗರ ಪಾಲಿಕೆಗಳ ಹೆಚ್ಚುವರಿ ಆಯುಕ್ತೆ ಲತಾ ಆರ್., ಕವಿತಾ ರಾಜಾರಾಂ, ಲೋಖಂಡೆ ಸ್ನೇಹಲ್ ಸುಧಾಕರ್, ನವೀನ್ ಕುಮಾರ್ ರಾಜು, ವೆಂಕಟಾಚಲಪತಿ, ಮುಖ್ಯ ಎಂಜಿನಿಯರ್ ಉಪಸ್ಥಿತರಿದ್ದರು.