ಹುಟ್ಟೂರು ಮದ್ದೂರಲ್ಲಿಂದು ಕೃಷ್ಣ ಅಂತ್ಯಕ್ರಿಯೆ

| Published : Dec 11 2024, 12:45 AM IST

ಸಾರಾಂಶ

ಮದ್ದೂರು ತಾಲೂಕಿನ ಹುಟ್ಟೂರು ಸೋಮನಹಳ್ಳಿಗೆ ಎಸ್.ಎಂ. ಕೃಷ್ಣರ ಪಾರ್ಥಿವ ಶರೀರ ನಾಳೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅಂತ್ಯ ಸಂಸ್ಕಾರ ಹುಟ್ಟೂರು ಸೋಮನಹಳ್ಳಿಯಲ್ಲಿ ಸಂಜೆ 5 ಗಂಟೆಯೊಳಗೆ ಒಕ್ಕಲಿಗ ಸಂಪ್ರದಾಯದಂತೆ ನಡೆಯಲಿದೆ.

ವೇದಬ್ರಹ್ಮ ಭಾನುಪ್ರಕಾಶ್ ಶರ್ಮ ನೇತೃತ್ವದಲ್ಲಿ 15 ವೈದಿಕರ ತಂಡದಿಂದ ವಿಧಿ ವಿಧಾನ ಕಾರ್ಯಗಳು ನಡೆಯಲಿವೆ. ಹಲವು ಯತಿಗಳು, ವಿವಿಧ ಮಠಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ಎಸ್.ಎಂ. ಕೃಷ್ಣರ ಅಂತ್ಯಕ್ರಿಯೆ ಜರುಗಲಿದೆ.

ಅಂತ್ಯಕ್ರಿಯೆಗೆ ಗಂಧದ ಕಟ್ಟಿಗೆಗಳ ಬಳಕೆ ಮಾಡಲಾಗುತ್ತಿದೆ. ಎಲ್ಲಾ ಸಿದ್ಧತೆಗಳೊಂದಿಗೆ 5 ಗಂಟೆಯೊಳಗೆ ಒಕ್ಕಲಿಗ ಸಂಪ್ರದಾಯದಂತೆ ಚಿತೆಗೆ ಕುಟುಂಬಸ್ಥರು ಅಗ್ನಿಸ್ಪರ್ಶ ಮಾಡಲಿದ್ದಾರೆ.

ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ,ಬಿಗಿ ಬಂದೋಬಸ್ತ್: ಮದ್ದೂರು: ಹುಟ್ಟೂರು ತಾಲೂಕಿನ ಸೋಮನಹಳ್ಳಿಯಲ್ಲಿ ಬುಧವಾರ ಎಸ್.ಎಂ.ಕೃಷ್ಣರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರು, ಗಣ್ಯರಿಗೆ ಅವಕಾಶ ಮಾಡಿಕೊಡಲಾಗಿದೆ.

ಬೆಳಗ್ಗೆಯಿಂದ ಮಧ್ಯಾಹ್ನ 3 ಗಂಟೆವರೆಗೂ ದರ್ಶನಕ್ಕೆ ಅವಕಾಶ ನೀಡಿರುವುದರಿಂದ ತವರು ಜಿಲ್ಲೆ ಮಂಡ್ಯ ಸೇರಿದಂತೆ ಮೈಸೂರು, ಬೆಂಗಳೂರು ಸುತ್ತಮುತ್ತಲ ಜಿಲ್ಲೆ ಹಾಗೂ ತಾಲೂಕುಗಳಿಂದ ಸಾವಿರಾರು ಮಂದಿ ಅಭಿಮಾನಿಗಳು, ಸಾರ್ವಜನಿಕರು, ಕಾಂಗ್ರೆಸ್ , ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಎಸ್.ಎಂ. ಕೃಷ್ಣರ ಪಾರ್ಥಿವ ಶರೀರದ ದರ್ಶನಕ್ಕೆ ಆಗಮಿಸಲಿದ್ದು, ಇದಕ್ಕಾಗಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ ನೀಡಿ, ಮಾಜಿ ಸಿಎಂ ಎಸ್.ಎಂ.ಕೃಷ್ಣರ ಪಾರ್ಥಿವ ಶರೀರದ ದರ್ಶನ, ಅಂತ್ಯಕ್ರಿಯೆಗೆ ಸಾಕಷ್ಟು ಜನ ಬರಲಿದ್ದಾರೆ. ವಿಐಪಿ ಮೂಮೆಂಟ್ ಇರಲಿದೆ. ಹೀಗಾಗಿ ಸೂಕ್ತ ಬಂದೋಬಸ್ತ್ ಗೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಮಂಡ್ಯ ಮಾತ್ರವಲ್ಲದೆ ಹೊರ ಜಿಲ್ಲೆಯ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನಿಯೋಜನೆ ಮಾಡಲಾಗುವುದು. ಸೋಮನಹಳ್ಳಿಗೆ ಬರಲು ಅನುಕೂಲವಾಗುವಂತೆ ಹೆದ್ದಾರಿ ಮಾರ್ಗ ಬದಲಾವಣೆ ಬಗ್ಗೆ ಚಿಂತನೆ ನಡೆಸಲಾಗಿದೆ.

ಗಣ್ಯರು, ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆ ಆಗದಂತೆ ವಿಐಪಿ ಮತ್ತು ವಿವಿಐಪಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಅವಶ್ಯಕತೆ ಬಿದ್ದಲ್ಲಿ ಬೆಂಗಳೂರು - ಮೈಸೂರು ಹಳೇ ಹೆದ್ದಾರಿ ಸಂಚಾರ ಡೈವರ್ಟ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಸ್ವಯಂ ಪ್ರೇರಿತ ಬಂದ್ ಗೆ ಕರೆ:

ಮದ್ದೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನರಾದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದಲ್ಲಿ ಸ್ವಯಂ ಪ್ರೇರಿತ ಬಂದ್ ಆಚರಣೆಗೆ ವಿವಿಧ ಸಂಘಟನೆಗಳು ಕರೆ ನೀಡಿವೆ.

ಮದ್ದೂರು ತಾಲೂಕಿನ ಹುಟ್ಟೂರು ಸೋಮನಹಳ್ಳಿಗೆ ಎಸ್.ಎಂ. ಕೃಷ್ಣರ ಪಾರ್ಥಿವ ಶರೀರ ನಾಳೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಲಾಗಿದೆ.

ತಾಲೂಕು ಒಕ್ಕಲಿಗರ ಸಂಘ, ದಲಿತಪರ ಸಂಘಟನೆಗಳು, ಬಂದ್ ಗೆ ವರ್ತಕರು, ಬೀದಿಬದಿ ವ್ಯಾಪಾರಿಗಳು, ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ತೀರ್ಮಾನಿಸಿವೆ. ಬಂದ್ ಕುರಿತು ಧ್ವನಿವರ್ಧಕದ ಮೂಲಕ ಪಟ್ಟಣದಲ್ಲಿ ಪ್ರಚಾರ ನಡೆಸಲಾಗಿದೆ.