ಬತ್ತುತ್ತಿದೆ ಕೃಷ್ಣಾ, ಹೆಚ್ಚುತ್ತಿಗೆ ನೀರಿನಾತಂಕ!

| Published : Mar 02 2024, 01:46 AM IST

ಸಾರಾಂಶ

ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ತೆರೆದ ಬಾವಿ, ಕೊಳವೆ ಬಾವಿ, ಹಳ್ಳ, ಕೊಳ್ಳ, ಕೆರೆಗಳು ಸೇರಿದಂತೆ ಈ ಭಾಗದ ಜನತೆಯ ಜೀವನಾಡಿ ಕೃಷ್ಣಾ ನದಿಯ ಒಡಲು ಕೂಡ ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಈಗ ಸದ್ಯ 3.82 ಟಿಎಂಸಿ ನೀರಿನ ಸಂಗ್ರಹವಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮುಂಬರುವ ಬೇಸಿಗೆ ದಿನಗಳಲ್ಲಿ ತಾಲೂಕಿನ ಸುಮಾರು 80 ಹಳ್ಳಿಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಆತಂಕ ಗ್ಯಾರಂಟಿ ಎನ್ನುವಂತಾಗಿದೆ.

ಅಣ್ಣಾಸಾಬ ತೆಲಸoಗ

ಕನ್ನಡಪ್ರಭ ವಾರ್ತೆ ಅಥಣಿ

ಚಳಿಗಾಲ ಮುಗಿದು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ತೆರೆದ ಬಾವಿ, ಕೊಳವೆ ಬಾವಿ, ಹಳ್ಳ, ಕೊಳ್ಳ, ಕೆರೆಗಳು ಸೇರಿದಂತೆ ಈ ಭಾಗದ ಜನತೆಯ ಜೀವನಾಡಿ ಕೃಷ್ಣಾ ನದಿಯ ಒಡಲು ಕೂಡ ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಈಗ ಸದ್ಯ 3.82 ಟಿಎಂಸಿ ನೀರಿನ ಸಂಗ್ರಹವಿದ್ದು, ದಿನದಿಂದ ದಿನಕ್ಕೆ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮುಂಬರುವ ಬೇಸಿಗೆ ದಿನಗಳಲ್ಲಿ ತಾಲೂಕಿನ ಸುಮಾರು 80 ಹಳ್ಳಿಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಆತಂಕ ಗ್ಯಾರಂಟಿ ಎನ್ನುವಂತಾಗಿದೆ.

ಅಥಣಿ ತಾಲೂಕಿನ ಪೂರ್ವ ಭಾಗದ ಹಾಗೂ ಉತ್ತರ ಭಾಗದ ಅನೇಕ ಹಳ್ಳಿಗಳಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ತೋಟದ ವಸತಿಗಳಲ್ಲಿ ಟ್ಯಾಂಕರ್ ಗಳ ಮೂಲಕ ನೀರನ್ನು ಪೂರೈಸಲು ಜಿಲ್ಲಾ ಆಡಳಿತ ಟೆಂಡರ್ ಕರೆದಿದ್ದು, ಗ್ರಾಮ ಪಂಚಾಯತ ಆಡಳಿತ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಅಥಣಿ ತಾಲೂಕಿನ ಅನಂತಪುರ ಹೋಬಳಿ ಮಟ್ಟದ ಅರಳಿಹಟ್ಟಿ, ಶಿರೂರ, ಜಂಬಗಿ, ಸಂಬರಗಿ, ಶಿವನೂರ ತಾoವಶಿ ಗ್ರಾಮಗಳಲ್ಲಿ ಮತ್ತು ತೆಲಸಂಗ ಹೋಬಳಿ ಮಟ್ಟದಲ್ಲಿ ಐಗಳಿ, ಪಡತರವಾಡಿ, ಕೊಟ್ಟಲಗಿ, ಕಕಮರಿ, ಕೊಡಹಳ್ಳಿ, ಬನ್ನೂರ, ಅರಟಾಳ ಮತ್ತು ಬಾಡಗಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮತ್ತು ತೋಟದ ವಿವಿಧ ವಸತಿ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಈ ವರ್ಷ ನಿರೀಕ್ಷೆ ಪ್ರಮಾಣದಲ್ಲಿ ಮಳೆ ಆಗದೆ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಸೇರಿದಂತೆ ಪಟ್ಟಣ ಪ್ರದೇಶದಲ್ಲಿಯೂ ಅಂತರ್ಜಲ ಮಟ್ಟ ಖುಷಿಯುತ್ತಿದ್ದು, ಕೊಳವಿ ಬಾವಿಯಲ್ಲಿನ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಮಾರ್ಚ್ ಅಂತ್ಯದ ವೇಳೆಗೆ ಇಲ್ಲವೇ ಏಪ್ರಿಲ್ ಮೊದಲ ವಾರದಲ್ಲಿ ಕುಡಿಯುವ ನೀರಿಗಾಗಿ ಅಹಂಕಾರ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಜನರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ.

ಆದ್ದರಿಂದ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ರಾಜ್ಯ ಸರ್ಕಾರ ಕೂಡಲೆ ಎಚ್ಚೆತ್ತುಕೊಂಡು ನೆರೆಯ ಮಹಾರಾಷ್ಟ್ರದಿಂದ ನದಿಗೆ ಹೆಚ್ಚುವರಿ ನೀರು ಹರಿಸುವ ವ್ಯವಸ್ಥೆಯ ವ್ಯವಸ್ಥೆ ಮಾಡಬೇಕೆಂದು ರೈತ ಸಂಘದ ಮುಖಂಡ ಮಹದೇವ ಮಡಿವಾಳ ಅಗ್ರಹಿಸಿದ್ದಾರೆ.

----2 ಟಿಎಂಸಿ ನೀರು ಹರಿಸುವ ವ್ಯವಸ್ಥೆ ಆಗಬೇಕು

ಕೃಷ್ಣಾ ನದಿಯಲ್ಲಿ ನೀರು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬೇಸಿಗೆಯ ಬಿಸಿಲಿನ ತಾಪ ಹೆಚ್ಚಾದಂತೆ ನೀರು ಬೇಗನೆ ಬತ್ತುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ ನೆರೆಯ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಕೃಷ್ಣ ನದಿಗೆ 2 ಟಿಎಂಸಿ ನೀರನ್ನು ಹರಿಸುವ ವ್ಯವಸ್ಥೆ ಮಾಡಬೇಕು.

-ಮಹಾದೇವ ಮಡಿವಾಳ, ಅಧ್ಯಕ್ಷರು ರೈತ ಸಂಘ ಅಥಣಿ.

--

ಅಥಣಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಜನತೆಗೆ ಕುಡಿಯುವ ನೀರಿನ ಸಮಸ್ಯಯಾಗದಂತೆ ಹೆಚ್ಚಿನ ನಿಗಾ ವಹಿಸಲು ಈಗಾಗಲೇ ಅಧಿಕಾರಿಗಳ ಸಭೆ ನಡೆಸಲಾಗಿದೆ. ಕೃಷ್ಣಾ ನದಿಯಲ್ಲಿ ನೀರಿನ ಸಂಗ್ರಹವಿದ್ದು, ಮುಂದಿನ ದಿನಮಾನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಸರಕಾರ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲಿದೆ.

-ಲಕ್ಷ್ಮಣ ಸವದಿ, ಶಾಸಕ ಅಥಣಿ.

---

ಕೃಷ್ಣಾ ನದಿಯಲ್ಲಿ ಈಗ 3.82 ಟಿಎಂಸಿ ನೀರಿನ ಸಂಗ್ರಹವಿದೆ. ಸದ್ಯ ಯಾವುದೇ ಸಮಸ್ಯೆ ಇಲ್ಲ. ಏಪ್ರಿಲ್ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ನೆರೆಯ ಮಹಾರಾಷ್ಟ್ರದ ಕಾಳಮ್ಮವಾಡಿ ಜಲಾಶಯದಿಂದ 2 ಟಿಎಂಸಿ ನೀರು ಕೃಷ್ಣ ನದಿಗೆ ಹರಿಸುವಂತೆ ಜಿಲ್ಲಾಧಿಕಾರಿಗಳಿಂದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ.

- ಪ್ರವೀಣ ಹುಣಸಿಕಟ್ಟಿ, ಸಹಾಯಕ ಅಭಿಯಂತರ, ಹಿಪ್ಪರಗಿ ಅಣೆಕಟ್ಟು ಯೋಜನೆ, ಅಥಣಿ.

--

ಅನೇಕ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇದಲ್ಲದೆ ಅಗತ್ಯವಿರುವ ಗ್ರಾಮಗಳಲ್ಲಿ ಮತ್ತು ತೋಟದ ವಸತಿಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್ ಗಳ ಮೂಲಕ ನೀರು ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ.

-ಶಿವಾನಂದ ಕಲ್ಲಾಪುರ. ತಾಪಂ ಅಧಿಕಾರಿ. ಅಥಣಿ.