ಮೊಬೈಲ್ ಬಿಟ್ಟು, ಪುಸ್ತಕ ಗೀಳು ಬೆಳೆಸಿಕೊಳ್ಳಿ: ಶಂಕರ್ ಶೇಟ್

| Published : Mar 02 2024, 01:46 AM IST

ಸಾರಾಂಶ

ಜಗತ್ತಿನ ಸಂದೇಶಗಳನ್ನು ಕ್ಷಣ ಮಾತ್ರದಲ್ಲಿ ರವಾನಿಸಿ ಸಹಕಾರಿಯಾಗುವ ಮೊಬೈಲ್ ಅದೇ ವೇಗದಲ್ಲಿ ಯುವ ಜನತೆಯನ್ನು ಮರಳುಗೊಳಿಸಿ, ಹಾದಿ ತಪ್ಪುವಂತೆ ಮಾಡುವ ಶಕ್ತಿಯನ್ನೂ ಹೊಂದಿದೆ. ಆದ್ದರಿಂದ ಯುವಜನತೆ ಮೊಬೈಲ್ ಎನ್ನುವ ಮಾಯಾಜಾಲಕ್ಕೆ ಮಾರುಹೋಗದೇ, ಪುಸ್ತಕ ಓದುವ ಗೀಳು ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಚಂದ್ರಗುತ್ತಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಜಗತ್ತಿನ ಸಂದೇಶಗಳನ್ನು ಕ್ಷಣ ಮಾತ್ರದಲ್ಲಿ ರವಾನಿಸಿ ಸಹಕಾರಿಯಾಗುವ ಮೊಬೈಲ್ ಅದೇ ವೇಗದಲ್ಲಿ ಯುವ ಜನತೆಯನ್ನು ಮರಳುಗೊಳಿಸಿ, ಹಾದಿ ತಪ್ಪುವಂತೆ ಮಾಡುವ ಶಕ್ತಿಯನ್ನೂ ಹೊಂದಿದೆ. ಆದ್ದರಿಂದ ಯುವ ಜನತೆ ಮೊಬೈಲ್ ಎನ್ನುವ ಮಾಯಾಜಾಲಕ್ಕೆ ಮಾರುಹೋಗದೇ ಪುಸ್ತಕ ಓದುವ ಗೀಳು ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಹೇಳಿದರು.

ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾ ಕಲ್ಯಾಣ ಮಂಟಪದ ಆವರಣದಲ್ಲಿ ಚಂದ್ರಗಿರಿ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಮತ್ತು ಚಂದ್ರಗಿರಿ ನರ್ಸರಿ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ೨೦೨೩-೨೪ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಯುವ ಜನತೆ ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಅಮೂಲ್ಯ ಬದುಕನ್ನು ಹಾಳುಗೆಡವುತ್ತಿದ್ದಾರೆ. ಅದರಲ್ಲಿನ ಉತ್ತಮ ಸಂದೇಶಗಳು ನಮ್ಮನ್ನು ಆಕರ್ಷಿಸುವ ಬದಲು ಸಮಾಜಕ್ಕೆ ಮಾರಕವಾಗುವಂತ ಚಟುವಟಿಕೆಗಳು ಹೆಚ್ಚು ಪ್ರಿಯವಾಗುತ್ತವೆ. ಹಾಗಾಗಿ, ಸಾವಿರಾರು ರು. ಮೌಲ್ಯದ ಮೊಬೈಲ್‌ಗಿಂತ ನೂರು ರು. ಬೆಲೆಯ ಪುಸ್ತಕಗಳು ಎಲ್ಲ ವಯೋಮಾನದವರ ಜ್ಞಾನಾರ್ಜುನೆ ಹೆಚ್ಚಿಸುತ್ತವೆ. ಇದರಿಂದ ಧಾರ್ಮಿಕ, ಸಾಂಸ್ಕೃತಿಕ ಜೊತೆಗೆ ಇತಿಹಾಸದ ಅರಿವಿನೊಂದಿಗೆ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಚಂದ್ರಗುತ್ತಿ ಕ್ಷೇತ್ರವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ, ಜನಪದ ಕಲೆಗಳನ್ನು ಗೌರವಿಸುವಲ್ಲಿ ಮತ್ತು ಪ್ರದರ್ಶಿಸುವಲ್ಲಿ ತನ್ನದೇ ಆದ ಕೊಡುಗೆ ನೀಡಿದೆ. ಇಂತಹ ಸಮೃದ್ಧ ಕ್ಷೇತ್ರದಲ್ಲಿರುವ ಶ್ರೀ ರೇಣುಕಾಂಬೆಯ ನೆಲೆವೀಡಲ್ಲಿ ಚಂದ್ರಗಿರಿ ನರ್ಸರಿ ಸ್ಕೂಲ್ ಇರುವುದು ಹೆಮ್ಮೆಯ ವಿಷಯ. ಇಲ್ಲಿ ಕಲಿತ ಮಕ್ಕಳು ಸುಸಂಸ್ಕೃತ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿ ಆಗುತ್ತಾರೆ ಎಂದರು.

ಪಾಲಕ ಪ್ರತಿನಿಧಿ ರಿಯಾಜ್ ಅಹಮದ್ ಅಧ್ಯಕ್ಷತೆ ವಹಿಸಿ, ಸಮಾಜದಲ್ಲಿ ಬದುಕಲು ಹಣವಿದ್ದರೆ ಸಾಲದು ಸಂಸ್ಕಾರ, ಸಂಸ್ಕೃತಿ, ಮುಖ್ಯವಾಗಿ ಶಿಕ್ಷಣ ಇದ್ದರೆ ಸಮಾಜದಲ್ಲಿ ಬದುಕಲು ಸಾಧ್ಯ ಎಂದರು.

ಪಾಲಕ ಪ್ರತಿನಿಧಿ ಅರ್ಚನಾ ರೇಣುಕಾ ಪ್ರಸಾದ್ ಮಾತನಾಡಿದರು. ಅನಂತರ ಚಂದ್ರಗಿರಿ ನರ್ಸರಿ ಸ್ಕೂಲ್ ಮಕ್ಕಳಿಂದ ನೃತ್ಯ, ಹಾಡು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಚಂದ್ರಗಿರಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಲ್.ಎಂ. ನಾಯ್ಕ್, ಪಾಲಕ ಪ್ರತಿನಿಧಿಗಳಾದ ಅರ್ಚನಾ ರೇಣುಕಾ ಪ್ರಸಾದ್, ರಿಯಾಜ್ ಅಹಮದ್, ನಿರಂಜನ್ ವಿ. ಗೌಡರ್, ಚಂದ್ರಗಿರಿ ನರ್ಸರಿ ಸ್ಕೂಲ್ ಮುಖ್ಯಶಿಕ್ಷಕ ರವಿ ನಾಯ್ಕ್, ಶಿಕ್ಷಕರಾದ ಸಾರಿಯಾ ತಾಜ್, ದಿವ್ಯ ಎಸ್. ಗೌಡ, ಮಧುರ ಚಂದ್ರಗುತ್ತಿ, ಲತಾ ಚಂದ್ರಗುತ್ತಿ, ಪೋಷಕರು ಉಪಸ್ಥಿತರಿದ್ದರು.

- - - -೨೮ಕೆಪಿಸೊರಬ೦೧:

ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಚಂದ್ರಗಿರಿ ನರ್ಸರಿ ಸ್ಕೂಲ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಉದ್ಘಾಟಿಸಿದರು.