ಸಾರಾಂಶ
ಸುಮ್ಮನೇ ಗಾದೆ ಮಾತು ಹುಟ್ಟಿಕೊಂಡಿಲ್ಲ. ದೂರ ಇರುವ ದೇವಸ್ಥಾನಗಳನ್ನು ನೋಡಲು ಹಂಪಿಯಲ್ಲಿ ಸುತ್ತಾಡಬೇಕಾಗುತ್ತದೆ
ಸೋಮರಡ್ಡಿ ಅಳವಂಡಿ
ಕೊಪ್ಪಳ: ಕನಕಗಿರಿ, ಹೆಸರೇ ಹೇಳುವಂತೆ ಇದು ಬಂಗಾರದ ಗಿರಿ. ಐತಿಹಾಸಿಕ ಮತ್ತು ಸಂಪತ್ಭರಿತವಾಗಿಯೂ ಇದು ಸುವರ್ಣಗಿರಿ. ಇಂಥ ಕನಗಿರಿಯನ್ನು ಅನಾದಿಕಾಲದಿಂದ ಹಿಡಿದು ಇಂದಿನವರೆಗೂ ನೋಡುವುದೇ ಕಣ್ಣಿಗೆ ಹಬ್ಬ. ಇದಕ್ಕಾಗಿ ಒಂದು ಗಾದೆ ಮಾತು ಪ್ರಚಲಿತದಲ್ಲಿದೆ. ಅದು ಏನೆಂದರೆ, ಕಾಲಿದ್ದವರು ಹಂಪಿ ನೋಡಬೇಕು ಮತ್ತು ಕಣ್ಣಿದ್ದವರು ಕನಕಗಿರಿ ನೋಡಬೇಕು ಎಂದು.ಸುಮ್ಮನೇ ಗಾದೆ ಮಾತು ಹುಟ್ಟಿಕೊಂಡಿಲ್ಲ. ದೂರ ಇರುವ ದೇವಸ್ಥಾನಗಳನ್ನು ನೋಡಲು ಹಂಪಿಯಲ್ಲಿ ಸುತ್ತಾಡಬೇಕಾಗುತ್ತದೆ. ಅದಕ್ಕಾಗಿಯೇ ಕಾಲಿದ್ದವರು ಹಂಪಿ ನೋಡಬೇಕು ಎನ್ನುವ ಮಾತು, ಹಾಗೆಯೇ ಕಣ್ಣಿಗೆ ಕಾಣುವಷ್ಟು ವೈಭವ ಕನಗಿರಿಯಲ್ಲಿ ಇತ್ತು. ಇದಕ್ಕಾಗಿಯೇ ಕಣ್ಣಿದ್ದವರು ಕನಕಗಿರಿ ನೋಡಬೇಕು ಎನ್ನುವ ಮಾತು ಬಂದಿದೆ.701 ಬಾವಿಗಳು, 701 ದೇವಸ್ಥಾನಗಳು ಇಲ್ಲಿದ್ದವು ಎನ್ನುವ ಐತಿಹ್ಯವಿದೆ. ಬಾವಿ ಎಂದರೆ ಬರಿ ಬಾವಿಯಲ್ಲ, ಕಲೆಯನ್ನೊಳಗೊಂಡು ಅರಳಿ ನಿಂತ ಬಾವಿಗಳು. ಇದಕ್ಕೆ ಸಾಕ್ಷಿ ಎನ್ನುವಂತೆ ಈಗಲೂ ಕನಕಾಚಲಪತಿ ಬಾವಿ ನೋಡುವುದೇ ಕಣ್ಣಿಗೆ ಹಬ್ಬ. ಇನ್ನು ಕನಕಾಚಲಪತಿ ದೇವಸ್ಥಾನ, ಆ ಐದು ಗೋಪುರಗಳ ನೋಟ ಅತ್ಯಂತ ಸುಂದರ. ಇಲ್ಲಿ ಕಲೆಯ ವೈಭವ ಮನೆ ಮಾಡಿದೆ. ಹೀಗಾಗಿ, ಈ ಗಾದೆ ಹುಟ್ಟಿಕೊಂಡಿದೆ.ಜಿಲ್ಲಾ ಕೇಂದ್ರದಿಂದ ಕನಕಗಿರಿಗೆ ಹೋಗುವುದಕ್ಕೆ ನೇರವಾಗಿ ಬಸ್‌ಗಳಿವೆ. ಗಂಗಾವತಿಯಿಂದ ಕೇವಲ 30 ಕಿ.ಮೀ. ಅಂತರದಲ್ಲಿ ಇರುವ ಕನಕಗಿರಿ ಬಯಲುಸೀಮೆಯ ನಾಡು. ಕೆಲವೊಂದು ಪ್ರದೇಶ ನೀರಾವರಿಯೂ ಇದೆ. ಈಗೀಗ ಕೆರೆ ತುಂಬಿಸುವ ಯೋಜನೆ ಸೇರಿದಂತೆ ಮೊದಲಾದ ನೀರಾವರಿ ಯೋಜನೆಗಳು ಬಂದಿರುವುದರಿಂದ ಒಂದಷ್ಟು ಭಾಗ ನೀರಾವರಿಯಾಗುತ್ತಿದೆ. ಕೃಷ್ಣಾ ಬಿ ಸ್ಕೀಂ ಯೋಜನೆಯಡಿ ಕೊಪ್ಪಳ ಏತನೀರಾವರಿ ವ್ಯಾಪ್ತಿಯಲ್ಲಿ ಒಂದಿಷ್ಟು ನೀರಾವರಿ ಪ್ರದೇಶಕ್ಕೆ ಒಳಪಡುತ್ತಿದೆಯಾದರೂ ಅದಿನ್ನು ಕಾರ್ಯಗತವಾಗಬೇಕು.ಈಗ ನವಲಿ ಸಮಾನಾಂತರ ಜಲಾಶಯ ಸೇರಿದಂತೆ ಪ್ರವಾಹ ಹರಿವು ಕಾಲುವೆ ಯೋಜನೆಗಳು ಕಾರ್ಯಗತವಾದರೆ ಕೃಷಿಯಲ್ಲಿ ಕನಕಗಿರಿ ಸಂಪತ್ಭರಿತವಾಗುತ್ತದೆ. ಈಗ ತೋಟಗಾರಿಕೆ ಬೆಳೆಯಲ್ಲಿ ಎತ್ತಿದ ಕೈ ಎನ್ನುವಂತೆ ಆಗಿದ್ದು, ತೋಟಗಾರಿಕಾ ಪಾರ್ಕ್ ಯೋಜನೆ ಕುಂಟುತ್ತಾ, ತೇವಳುತ್ತಾ ಸಾಗುತ್ತಿದೆ.ಗತವೈಭವ:ಕನಕಗಿರಯಲ್ಲಿ 2015ರಲ್ಲಿ ನಡೆದ ಉತ್ಸವ ಮತ್ತೆ ಈಗ 8 ವರ್ಷಗಳ ಬಳಿಕ ಮಾರ್ಚ್ 2, 3ರಂದು ಕನಕಗಿರಿ ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಕನಕಗಿರಿಯ ಗತ ವೈಭವವನ್ನು ಮತ್ತೆ ಮತ್ತೆ ಸಾದರಪಡಿಸುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ಗತವೈಭವವನ್ನು ಈಗಿನ ಜನಮಾನಸಕ್ಕೆ ತಿಳಿಯಪಡಿಸುವ ಪ್ರಯತ್ನ ಮಾಡಲಾಗುತ್ತದೆ.ಕನಕಗಿರಿ ಹೆಸರು ಬಂದಿದ್ದೇಕೆ?:ಕನಕಗಿರಿಯನ್ನು ಬಡವರ ತಿರುಪತಿ ಎಂದು ಸಹ ಕರೆಯಲಾಗುತ್ತದೆ. ತಿರುಪತಿಯ ದರ್ಶನಕ್ಕೆ ಹೋಗಲು ಆಗದವರು ಇಲ್ಲಿಗೆ ಬಂದು ದರ್ಶನ ಪಡೆಯುವ ವಾಡಿಕೆ ಇದೆ.ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲದಲ್ಲಿ ಗುಜ್ಜಲ ವಂಶದ ಪರಸಪ್ಪ ಉಡಚನಾಯಕನಿದ್ದ. ಈತನಿಗೆ ಸೇರಿದ ಆಕಳೊಂದು ಹುತ್ತಿನ ಮೇಲೆ ಹಾಲು ಸುರಿಸಿತಂತೆ. ಅಂದಿನ ರಾತ್ರಿಯೇ ತಿರುಪತಿಯ ವೆಂಕಟರಮಣ ದರ್ಶನ ನೀಡಿ, ಇನ್ಮುಂದೆ ನಾನು ಕನಕಗಿರಿಯ ಕನಕಾಚಲಪತಿಯಾಗಿ ದರ್ಶನ ನೀಡುವೆ. ಹೀಗಾಗಿ, ಇನ್ಮುಂದೆ ನೀವು ನನ್ನ ದರ್ಶನಕ್ಕೆ ತಿರುಪತಿಗೆ ಬರುವ ಬದಲಾಗಿ ಇಲ್ಲಿಯೇ ದರ್ಶನ ಮಾಡಿ ಎಂದು ಆಶೀರ್ವದಿಸಿದನಂತೆ. ಅಂದಿನಿಂದ ಈ ಸ್ಥಳ ಸುಪ್ರಸಿದ್ಧಿಯಾಯಿತು. ಹೀಗಾಗಿಯೇ ಇದನ್ನು ಬಡವರ ತಿರುಪತಿ ಎಂದು ಕರೆಯಲಾಗುತ್ತದೆ.ಬೇಕು ಅಭಿವೃದ್ಧಿಯ ಸಂಕಲ್ಪ:ಕನಕಗಿರಿಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಈಗಿನ ಪರಂಪರೆಯಿಂದ ಹಿಡಿದು ಐತಿಹಾಸಿಕವಾಗಿಯೂ ಸಮೃದ್ಧ ನಾಡು ಎಂದೇ ಕರೆಯಲ್ಪಡುವ ಕನಕಗಿರಿಯಲ್ಲಿ ಈಗಲೂ ಐತಿಹಾಸಿಕ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾಗಿದೆ.ನಶಿಸಿ ಹೋಗುವ ದೇವಸ್ಥಾನಗಳು, ಬಾವಿಗಳನ್ನು ಸಂರಕ್ಷಣೆ ಮಾಡಬೇಕಾಗಿದೆ. ಅವುಗಳ ಬಗ್ಗೆ ಶೋಧನಾ ಕಾರ್ಯ ನಡೆಯಬೇಕಾಗಿದೆ. ಕನಕಗಿರಿ ಆಳಿದ ನಾಯಕರ ಬಗ್ಗೆಯೂ ಸಂಶೋಧನೆಗಳು ಆಗಬೇಕು. ಕನಕಗಿರಿಯ ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯ ಐತಿಹಾಸಿಕ ಹಾಗೂ ಪೌರಾಣಿಕ ಸ್ಮಾರಕಗಳನ್ನು ರಕ್ಷಣೆ ಮಾಡುವ ಕಾರ್ಯ ಆಗಬೇಕಾಗಿದೆ.ಕೆರೆಗಳು: ಕನಕಗಿರಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಐತಿಹಾಸಿಕ ಕೆರೆಗಳು ಇಂದಿಗೂ ಇವೆ. ಅವುಗಳಲ್ಲಿ ಚೆನ್ನಾದೇವಿ ಕೆರೆ, ಚಿಕ್ಕಕೆರೆ, ದೊಡ್ಡಕೆರೆ, ಲಕ್ಷ್ಮೀದೇವಿ ಕೆರೆ, ಬಂಕಾಪುರ ಕೆರೆ, ಬಸರಿಹಾಳ ಕೆರೆ, ಕನಕಾಪುರ ಕೆರೆ, ಇಂಗಳದಾಳ್ ಕೆರೆ, ಕರಡೋಣ ಕೆರೆ ಸೇರಿದಂತೆ ಹಲವಾರು ಕೆರೆಗಳಿವೆ. ಅವುಗಳ ಸಂರಕ್ಷಣೆಯಾಗಬೇಕಾಗಿದೆ. ಅನೇಕ ಕೆರೆಗಳು ನಶಿಸಿ ಹೋಗಿವೆ.ಈಗ ಕೆರೆ ತುಂಬಿಸುವ ಯೋಜನೆ ಮೂಲಕ ಕನಕಗಿರಿಯಲ್ಲಿ ನೀರಾವರಿಗೆ ಜೀವ ತುಂಬುವ ಕಾರ್ಯವಾಗಿದೆ. ಇದರಿಂದ ಅದೆಷ್ಟೋ ಬತ್ತಿದ ಕೊಳವೆಬಾವಿಗಳಲ್ಲಿ ನೀರು ಉಕ್ಕಿ ರೈತರು ಸಂತೋಷದಿಂದ ಜೀವನ ನಡೆಸುವಂತಾಗಿದೆ.