ತೆರಿಗೆ ಪಾವತಿಸದ ಗಜೇಂದ್ರಗಡದ ಶುದ್ಧ ನೀರು ಘಟಕಗಳಿಗೆ ಬೀಗ ಹಾಕಿ

| Published : Mar 02 2024, 01:46 AM IST

ತೆರಿಗೆ ಪಾವತಿಸದ ಗಜೇಂದ್ರಗಡದ ಶುದ್ಧ ನೀರು ಘಟಕಗಳಿಗೆ ಬೀಗ ಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆಗೆ ತೆರಿಗೆ ತುಂಬದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೋಟಿಸ್ ನೀಡಿ, ವಾರದೊಳಗೆ ತೆರಿಗೆ ಪಾವತಿಸದಿದ್ದರೆ ಅಂತಹ ಘಟಕಗಳಿಗೆ ಬೀಗ ಹಾಕಿ, ಅವರೇನು ಪರೋಪಕಾರ ಮಾಡುತ್ತಿಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಕನಕಪ್ಪ ಅರಳಿಗಿಡದ ಹಾಗೂ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು.

ಗಜೇಂದ್ರಗಡ: ಪುರಸಭೆಗೆ ತೆರಿಗೆ ತುಂಬದ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ನೋಟಿಸ್ ನೀಡಿ, ವಾರದೊಳಗೆ ತೆರಿಗೆ ಪಾವತಿಸದಿದ್ದರೆ ಅಂತಹ ಘಟಕಗಳಿಗೆ ಬೀಗ ಹಾಕಿ, ಅವರೇನು ಪರೋಪಕಾರ ಮಾಡುತ್ತಿಲ್ಲ ಎಂದು ಪುರಸಭೆ ಸ್ಥಾಯಿ ಸಮಿತಿ ಚೇರಮನ್ ಕನಕಪ್ಪ ಅರಳಿಗಿಡದ ಹಾಗೂ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ ಹೇಳಿದರು. ಸ್ಥಳೀಯ ಪುರಸಭೆ ಸಭಾ ಭವನದಲ್ಲಿ ಶುಕ್ರವಾರ ನಡೆದ ೨೦೨೪-೨೫ನೇ ಸಾಲಿನ ಪುರಸಭೆಗೆ ರು. ೬ ಕೋಟಿ ೬೬ ಲಕ್ಷ ವೆಚ್ಚದ ಉಳಿತಾಯದ ಆಯವ್ಯಯವನ್ನು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಂಡಿಸಿದ ಬಳಿಕ ನಡೆದ ಚರ್ಚೆಯಲ್ಲಿ ಮಾತನಾಡಿದರು.ಪಟ್ಟಣದಲ್ಲಿ ಪುರಸಭೆ ಶುದ್ಧ ಕುಡಿಯವ ನೀರಿನ ಘಟಕಗಳು ನಿರ್ವಹಣೆ ಇಲ್ಲದ ಕಾರಣ ಬಂದ್ ಆಗಿರುವ ಕುರಿತು ಹಾಗೂ ಖಾಸಗಿ ಘಟಕಗಳು ಪರವಾನಗಿ ಮತ್ತು ತೆರಿಗೆ ಪಾವತಿಸದ ಕುರಿತು ಶುಕ್ರವಾರ ಕನ್ನಡಪ್ರಭ,ದಲ್ಲಿ ವಿಶೇಷ ವರದಿಯನ್ನು ಪ್ರಕಟಿಸಲಾಗಿತ್ತು.೨೦೨೪-೨೫ನೇ ಸಾಲಿನ ಆಯವ್ಯಯ ಸಭೆಯಲ್ಲಿ, ಪಟ್ಟಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕಗಳ ಕುರಿತ ಚರ್ಚೆ ವೇಳೆ ಪುರಸಭೆ ಅಧಿಕಾರಿಗಳು ಕೆಲ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಪುರಸಭೆಗೆ ೨-೩ ವರ್ಷಗಳಿಂದ ತೆರಿಗೆ ತುಂಬಿಲ್ಲ ಎಂದು ಸ್ಥಾಯಿ ಸಮಿತಿ ಚೇರಮನ್ ಕನಕಪ್ಪ ಅರಳಿಗಿಡದ ಪ್ರಸ್ತಾಪಿಸುತ್ತಿದ್ದಂತೆ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಕೆಲ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ ಪುರಸಭೆ ರಾಘವೇಂದ್ರ ಮಂತಾ ಅವರು ಜನರಿಗೆ ತೊಂದರೆ ಆಗುತ್ತದೆ ಎಂದು ಬಂದ್ ಮಾಡಿಲ್ಲ ಎಂದರು. ಇದಕ್ಕೆ ಆಕ್ಷೇಪಿಸಿದ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಪಟ್ಟಣದಲ್ಲಿನ ಖಾಸಗಿ ಶುದ್ಧ ಕುಡಿಯುವ ನೀರಿನ ಘಟಕಗಳಿಂದ ಜನತೆಗೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ನೀರನ್ನು ಪೂರೈಸುತ್ತಿಲ್ಲ. ನೀರು ಮಾರಾಟವನ್ನು ವ್ಯಾಪಾರ ಮಾಡಿಕೊಂಡಿದ್ದಾರೆ. ತೆರಿಗೆ ತುಂಬದ ಘಟಕಗಳಿಗೆ ತೆರಿಗೆ ತುಂಬಲು ಕಾಲಾವಕಾಶದ ನೋಟಿಸ್ ನೀಡಿ, ನಿಗದಿತ ಸಮಯದಲ್ಲಿ ಪುರಸಭೆಗೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಭರಣಾ ಮಾಡದ ಘಟಕಗಳನ್ನು ಮುಲಾಜಿಲ್ಲದೆ ಬಂದ್ ಮಾಡಬೇಕು. ನಮ್ಮಲ್ಲಿ ಯಾರೊಬ್ಬರು ಸದಸ್ಯರು ತೆರಿಗೆ ತುಂಬದ ಘಟಕಗಳನ್ನು ಬಂದ್ ಮಾಡದಂತೆ ಹೇಳಿದರೆ ಇನ್ನುಳಿದ ಸದಸ್ಯರಿಗೆ ತಿಳಿಸಬೇಕು. ಪುರಸಭೆಯಿಂದ ಡಿಸೇಲ್, ಜಾಹಿರಾತು ಸೇರಿ ಇನ್ನಿತರ ಖರ್ಚಗಳಿಗೆ ಬಿಲ್ ಪಾವತಿಸಲು ಹಣವಿಲ್ಲ ಎನ್ನುತ್ತೀರಿ, ಇತ್ತ ಪುರಸಭೆಗೆ ಬರಬೇಕಾದ ಹಣವನ್ನು ಸಂಗ್ರಹಿಸಲು ಹಿಂದೇಟು ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು. ಪುರಸಭೆಯ ಶುದ್ಧ ಕುಡಿಯುವ ನೀರಿನ ಘಟಕಗಳ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಿ ಎಂದಾಗ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಮ್ಮತಿ ಸೂಚಿಸಿದರು.

ಪಟ್ಟಣದ ಪುರಸಭೆಯಲ್ಲಿನ ಸಿಬ್ಬಂದಿಗಳು ಅದರಲ್ಲೂ ಕೇಸ್ ವರ್ಕರಂತೂ ಪುರಸಭೆ ಸದಸ್ಯರ ಮಾತಿಗೆ ಕಿಮ್ಮತ್ತು ನೀಡುವದಿಲ್ಲ. ಅದೇ ಏಜೆಂಟರು ಬಂದರೆ ಅವರಿಗೆ ಖುರ್ಚಿಗಳನ್ನು ಹಾಕಿ ಕೂಡಿಸುವುದೇನೋ, ಅವರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಕೆಲಸ ಮಾಡುವುದನ್ನು ನೋಡಿದರೆ ಪುರಸಭೆಯಲ್ಲಿ ಸದಸ್ಯರಿಗಿಂತ ಏಜೆಂಟ್‌ರಿಗೆ ಹೆಚ್ಚು ಬೆಲೆಯಿದೆ. ನಾವು ಹೇಳಿದ ಕೆಲಸಗಳು ವಾರ ಕಳೆದರೂ ಸಹ ಆಗುವದಿಲ್ಲ, ಏಜೆಂಟರು ಮಧ್ಯಾಹ್ನ ಹೇಳಿದರೆ ಸಂಜೆ ಆಗಿರುತ್ತದೆ. ಇದಕ್ಕೆ ಕಡಿವಾಣ ಹಾಕುವುದರ ಜತೆಗೆ ಸಂಜೆ ಹಾಗೂ ಕಚೇರಿ ಸಮಯದ ನಂತರ ಏಜೆಂಟರು ಪುರಸಭೆ ಬಳಿ ಸುಳಿಯದಂತೆ ಕ್ರಮವನ್ನು ಕೈಗೊಳ್ಳಲು ಪ್ರಭಾರಿ ಮುಖ್ಯಾಧಿಕಾರಿಗೆ ಮಾಡಿದ ಒತ್ತಾಯಕ್ಕೆ ಕೆಲ ಸದಸ್ಯರು ಧ್ವನಿಗೂಡಿಸಿದರು.6 ಕೋಟಿ ಉಳಿತಾಯ ಬಜೆಟ್‌: ಪಟ್ಟಣದ ಪುರಸಭೆ ೨೦೨೪-೨೫ ನೇ ಸಾಲಿನಲ್ಲಿ ಆಸ್ತಿ ತೆರಿಗೆಯಿಂದ ರು. ೧ ಕೋಟಿ ೮೯ ಲಕ್ಷ, ನೀರಿನ ಕರ ರು. ೮೪ ಲಕ್ಷ, ವ್ಯಾಪಾರ ಪರವಾನಿಗೆ ರು. ೮ ಲಕ್ಷ, ಮಳಿಗೆಗಳ ಬಾಡಿಗೆಯಿಂದ ರು. ೧೨ ಲಕ್ಷ ೬೦ ಸಾವಿರ, ಕಟ್ಟಡ ಪರವಾನಿಗೆಯಿಂ ರು.೧೫ ಲಕ್ಷ ೭೦ ಸಾವಿರ ಹಾಗೂ ಖಾತಾ ಬದಲಾವಣೆಯಿಂದ ರು. ೨೬ ಲಕ್ಷ ೨೫ ಸಾವಿರದ ಸೇರಿ ಇತರೆ ಮೂಲಗಳಿಂದ ಅಂದಾಜು ರು. ೨೬ ಲಕ್ಷ ೨೫ ಸಾವಿರ ನಿರೀಕ್ಷೆಯೊಂದಿಗೆ ಪುರಸಭೆ ಪ್ರಭಾರಿ ಮುಖ್ಯಾಧಿಖಾರಿ ಬಸವರಾಜ ಬಳಗಾನೂರ ಅಂದಾಜು ರು. ೬ ಕೋಟಿ ೬೬ ಲಕ್ಷ ವೆಚ್ಚದ ಉಳಿತಾಯ ಬಜೆಟ್‌ನ್ನು ಮಂಡಿಸಿದರು.

ಈ ವೇಳೆ ಪುರಸಭೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಉಮೇಶ ರಾಠೋಡ, ಬಸವರಾಜ ಹೂಗಾರ, ರಫೀಕ ತೋರಗಲ್, ಮುತ್ತಣ್ಣ ಮ್ಯಾಗೇರಿ ಹಾಗೂ ಸುಮಂಗಲಾ ಇಟಗಿ ಅವರನ್ನು ಪುರಸಭೆ ಅಧಿಕಾರಿಗಳು ಸ್ವಾಗತಿಸಲಾಯಿತು.ಪುರಸಭೆ ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್, ಸದಸ್ಯರಾದ ಮುದಿಯಪ್ಪ ಮುಧೋಳ, ರಾಜು ಸಾಂಗ್ಲೀಕರ, ಯು.ಆರ್.ಚನ್ನಮ್ಮನವರ, ವಿಜಯಾ ಮಳಗಿ, ಲಕ್ಷ್ಮೀ ಮುಧೋಳ, ದ್ರಾಕ್ಷಾಯಿಣಿ ಚೋಳಿನ, ಯಮನೂರ್ ತಿರಕೋಜಿ ಸೇರಿ ಇತರರು ಇದ್ದರು.