ಸಾರಾಂಶ
ಜೋಯಿಡಾ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಯಾವ ಹಳ್ಳಿಯಲ್ಲಿ ನೀರು ಇಲ್ಲ ಎಂಬುದನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಜೋಯಿಡಾ ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಜೋಯಿಡಾ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಲು ಹಿಂದೇಟು ಹಾಕಬಾರದು. ಬಡಜನರಿಗೆ ಅಗತ್ಯ ಸೌಲಭ್ಯ ನೀಡಬೇಕು, ತಾಂತ್ರಿಕ ಕಾರಣ ಹೇಳಬಾರದು. ಹಿಂದುಳಿದ, ಬಡ ಜನರು ಕಚೇರಿಗೆ ಬಂದಾಗ ಕೆಲಸ ತ್ವರಿತವಾಗಿ ಮಾಡಿಕೊಡಬೇಕು ಎಂದರು.ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ತಾಲೂಕಿಗೂ ಕೋಟ್ಯಂತರ ರುಪಾಯಿಗಳು ಬರುತ್ತಿದ್ದು, ಜನರ ಕಲ್ಯಾಣಕ್ಕೆ ಇದು ಸಹಕಾರಿಯಾಗಿದೆ. ಸರ್ಕಾರಕ್ಕೂ ಜನಪರ ಕೆಲಸ ಮಾಡಿದ ಬಗ್ಗೆ ಹೆಮ್ಮೆ ಇದೆ ಎಂದರು.
ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರು ಅನುಷ್ಠಾನವಾಗುವಂತೆ ಅಧಿಕಾರಿಗಳು ನೋಡಿಕೊಳ್ಳಿ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿ, ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ನನ್ನ ಹಳಿಯಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಸಭೆಗಳಲ್ಲಿ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಅನುಷ್ಠಾನವಾಗಬೇಕು. ಇದು ಹಿರಿಯ ಅಧಿಕಾರಿಗಳ ಜವಾಬ್ದಾರಿ. ತಾಲೂಕಿನಲ್ಲಿ ಈ ಹಿಂದೆಯೂ ಬಹಳಷ್ಟು ಅಭಿವೃದ್ಧಿಯಾಗಿದೆ. ನಿಸರ್ಗದತ್ತವಾದ ತಾಲೂಕಿನಲ್ಲಿ ಇನ್ನಷ್ಟು ಅಭಿವೃದ್ಧಿಯಾಗಬೇಕು. ಇಲ್ಲಿನ ಜನರು ಮುಗ್ಧರು, ಆದರೆ ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಕಡಿಮೆ. ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿ ಜವಾಬ್ದಾರಿ ತೋರಿಸಬೇಕು. ನನಗೆ ನನ್ನದು ಎನ್ನುವ ಪ್ರವೃತ್ತಿ ಬಿಟ್ಟು ಕೆಲಸ ಮಾಡಬೇಕು. ಗ್ರಾಮ ಪಂಚಾಯಿತಿ ಅಧ್ಯಕ್ಷರ ಕೈ ಸ್ವಚ್ಚವಾಗಿರಬೇಕು. ಸ್ವಾರ್ಥ ಎಲ್ಲದರಲ್ಲೂ ಇರಬಾರದು. ಅಧಿಕಾರಿಗಳು ಜನ ಪ್ರತಿನಿಧಿಗಳು ಹಣ ಪಡೆದು ಕೆಲಸ ಮಾಡುವುದಾದರೆ ಹೇಗೆ? ನಿಮ್ಮನ್ನೇ ಪ್ರಶ್ನೆ ಮಾಡಿಕೊಳ್ಳಿ ಎಂದರು.
ನಾನು ನಿಸ್ವಾರ್ಥವಾಗಿ ಕೆಲಸ ಮಾಡುತ್ತಿದ್ದೇನೆ. ಜನರ ಕೆಲಸ ಮಾಡಿಕೊಡುತ್ತಿದ್ದೇನೆ ಎನ್ನುವ ಆತ್ಮಸ್ಥೈರ್ಯ ನಿಮ್ಮಲ್ಲಿರಬೇಕು. ಈ ತಾಲೂಕಿಗೆ ಪ್ರತಿವರ್ಷ ನೂರಾರು ಕೋಟಿ ಹಣ ತಂದಿದ್ದೇನೆ. ಪ್ರವಾಸೋದ್ಯಮದಿಂದಲೂ ಸಾಕಷ್ಟು ಅಭಿವೃದ್ಧಿ ಆಗುತ್ತಿದೆ. ಒಟ್ಟಾರೆ ತಾಲೂಕಿನ ಅಭಿವೃದ್ಧಿ ಆಗಬೇಕಾದರೆ ಅಧಿಕಾರಿಗಳ ಮತ್ತು ಜನ ಪ್ರತಿನಿಧಿಗಳ ಕೆಲಸ ಹೆಚ್ಚಿದೆ. ಇಡೀ ದಿನ ಕ್ಷೇತ್ರದಲ್ಲಿ ಜಿಲ್ಲಾ ಉಸ್ತವಾರಿ ಸಚಿವರು ನಮ್ಮೊಂದಿಗೆ ಇದ್ದು ಕೆಲಸ ಮಾಡಿದ್ದಾರೆ. ಮುಂದೆಯೂ ಅವರು ಕ್ಷೇತ್ರಕ್ಕೆ ಬರುತ್ತಿರಬೇಕು. ಅಭಿವೃದ್ಧಿಗೆ ಯಾವುದೇ ಜಾತಿ, ಧರ್ಮ, ಪಕ್ಷ ಇಲ್ಲ. ಎಲ್ಲರ ಅಭಿವೃದ್ಧಿ ಆಗಬೇಕು ಎಂದರು.ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಸೂಕ್ತ ಸಲಹೆ ಮಾರ್ಗದರ್ಶನಗಳನ್ನು ಸಚಿವರು ನೀಡಿದರು.ಸಚಿವರಿಗೆ ಸಭೆಯ ಆರಂಭದಲ್ಲಿ ಅಭಿನಂದಿಸಲಾಯಿತು. ಧ್ವನಿವರ್ಧಕದ ಕಿರಿಕಿರಿ ಸಭೆಯ ಆರಂಭದಿಂದ ಕೊನೆಯ ವರೆಗೂ ಇತ್ತು. ವೇದಿಕೆಯಲ್ಲಿ ತಹಸೀಲ್ದಾರ್ ಮಂಜುನಾಥ ಮನ್ನೋಳಿ, ಕಾರ್ಯನಿರ್ವಹಣಾಧಿಕಾರಿ ಎನ್. ಭಾರತಿ , ಡಿಎಫ್‌ಒ ನಿಲೇಶ್ ಶಿಂದೆ ಉಪಸ್ಥಿತರಿದ್ದರು.