ಸಂಪಿಗೆಯಲ್ಲಿ ಆ 17 ರಂದು ಕೃಷ್ಣ ಜನ್ಮಾಷ್ಠಮಿ ಆಚರಣೆ

| Published : Aug 10 2025, 01:31 AM IST

ಸಂಪಿಗೆಯಲ್ಲಿ ಆ 17 ರಂದು ಕೃಷ್ಣ ಜನ್ಮಾಷ್ಠಮಿ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಸಂಪಿಗೆ ಗ್ರಾಮದ ಕೃಷ್ಣಜನ್ಮಾಷ್ಟಮಿ ಆಚರಣಾ ಸಮಿತಿಯ ವತಿಯಿಂದ ಶ್ರೀನಿವಾಸ ಸ್ವಾಮಿ ದೇವಾಲಯದ ಆವರಣದಲ್ಲಿ ಆಗಸ್ಟ್ 17 ರಂದು ಕೃಷ್ಣಜನ್ಮಾಷ್ಟಮಿ ಆಚರಣೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಸಂಪಿಗೆ ಶ್ರೀಧರ್ ತಿಳಿಸಿದರು.

ಕನ್ನಡಪ್ರಭವಾರ್ತೆ ತುರುವೇಕೆರೆ

ತಾಲೂಕಿನ ಸಂಪಿಗೆ ಗ್ರಾಮದ ಕೃಷ್ಣಜನ್ಮಾಷ್ಟಮಿ ಆಚರಣಾ ಸಮಿತಿಯ ವತಿಯಿಂದ ಶ್ರೀನಿವಾಸ ಸ್ವಾಮಿ ದೇವಾಲಯದ ಆವರಣದಲ್ಲಿ ಆಗಸ್ಟ್ 17 ರಂದು ಕೃಷ್ಣಜನ್ಮಾಷ್ಟಮಿ ಆಚರಣೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಸಂಚಾಲಕ ಸಂಪಿಗೆ ಶ್ರೀಧರ್ ತಿಳಿಸಿದರು. ತಾಲ್ಲೂಕಿನ ಸಂಪಿಗೆ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತಾ ಬರಲಾಗಿದೆ. ಇದರ ಅಂಗವಾಗಿ ದಂಡಿನಶಿವರ ಹೋಬಳಿ ವ್ಯಾಪ್ತಿಯ 30 ಕ್ಕೂ ಹೆಚ್ಚಿನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.1 ರಿಂದ 4 ನೇ ತರಗತಿಯ ಮಕ್ಕಳಿಗೆ ಕೃಷ್ಣನ ಚಿತ್ರ ಬಿಡಿಸುವುದು, 5 ರಿಂದ 7 ನೇ ತರಗತಿಯವರೆಗೆ ಕೃಷ್ಣನ ಬಗ್ಗೆ ಪ್ರಬಂಧ ಬರೆಯುವುದು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಮತ್ತು ಕೃಷ್ಣನ ಜೀವನ ಚರಿತ್ರೆ ಕುರಿತ ರಸಪ್ರಶ್ನೆಯನ್ನು ಆಯಾ ಮುಖ್ಯ ಶಿಕ್ಷಕರು ಶಾಲಾ ಹಂತದಲ್ಲಿ ಸ್ಪರ್ಧೆ ನಡೆಸಿ ಅಲ್ಲಿ ಆಯ್ಕೆಯಾದ ಮೂವರು ವಿದ್ಯಾರ್ಥಿಗಳನ್ನು ಆ.10 ರಂದು ಸಂಪಿಗೆ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ನಡೆಯುವ ಅಂತಿಮ ಸ್ಪರ್ಧೆ ಕರೆತರಲಿದ್ದಾರೆ. ಅಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಗಸ್ಟ್ 17 ರ ಸಂಜೆ ದೇವಾಲಯದ ಆವರಣದಲ್ಲಿ ನಡೆಯುವ ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು. ಇದಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನವಿದೆ ಎಂದು ಅವರು ತಿಳಿಸಿದರು.ಅದೇ ದಿನ ಸಂಪಿಗೆ ಅಕ್ಕಪಕ್ಕದ ಗ್ರಾಮಸ್ಥರು ತಮ್ಮ ಪುಟಾಣಿ ಮಕ್ಕಳನ್ನು ಕೃಷ್ಣ, ರಾಧೆಯರ ಛದ್ಮವೇಷ ಧರಿಸಿಕೊಂಡು ಬರಲಿದ್ದಾರೆ. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಇರಲಿದೆ. ಯುವಕರಿಗೆ ಮೊಸರಿನ ಮಡಿಕೆ ಒಡೆಯುವುದು, ಪುರುಷರಿಗೆ ಹಗ್ಗ ಜಗ್ಗಾಟ ಸ್ಪರ್ಧೆಗಳು ಇರಲಿವೆ ಎಂದರು. ಅಂದು ಕೃಷ್ಣನಿಗೆ ಬೆಣ್ಣೆ ಅಲಂಕಾರವಾದ ಮೇಲೆ ಮಹಾ ಮಂಗಳಾರತಿ ಕಾರ್ಯಕ್ರಮವಿರಲಿದೆ. ಸಂಜೆ 7 ಗಂಟೆಗೆ ತುಮಕೂರಿನ ವಾಣಿ ವೆಂಕಟರಾಮು ಮತ್ತು ಅವರ ತಂಡದಿಂದ ಭರತನಾಟ್ಯ ನೃತ್ಯವಿದೆ. ರಾತ್ರಿ 9 ಗಂಟೆಗೆ ಬರುವ ಎಲ್ಲ ಭಕ್ತಾದಿಗಳಿಗೆ ಮಹಾ ಪ್ರಸಾದವಿರುತ್ತದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಎಸ್.ಎನ್.ಯೋಗೀಶ್, ಸತೀಶ್, ಯೋಗೀಶ್, ಹರೀಶ್, ನಿವೃತ್ತ ಶಿಕ್ಷಕ ಎಸ್.ಆರ್.ವಿಜಯಕುಮಾರ್ ಮತ್ತು ದೇವಾಲಯದ ಅರ್ಚಕರು ಇದ್ದರು.