ಹಿರಯೂರು ನಗರದಲ್ಲಿ ಯಾದವ ಸಮುದಾಯದ ವತಿಯಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಬೃಹತ್ ಶೋಭಾಯಾತ್ರೆ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದಲ್ಲಿ ಯಾದವ ಸಮುದಾಯದ ವತಿಯಿಂದ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿಯ ಬೃಹತ್ ಶೋಭಾಯಾತ್ರೆ ಸಾವಿರಾರು ಜನರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ನಗರದ ವೇದಾವತಿ ಬಡಾವಣೆಯ ಶ್ರೀಕೃಷ್ಣ ದೇವಸ್ಥಾನದ ಮುಂಭಾಗದಲ್ಲಿ ವಿವಿಧ ರೀತಿಯ ಹೂಗಳಿಂದ ಅಲಂಕರಿಸಿದ ಬೆಳ್ಳಿ ರಥದಲ್ಲಿ ಶ್ರೀಕೃಷ್ಣ ಪ್ರತಿಮೆ ಜತೆಗೆ ಶ್ರೀ ವಿನಾಯಕ ಹಾಗೂ ಶ್ರೀ ಆಂಜನೇಯ ಮೂರ್ತಿಯ ಪ್ರತಿಮೆಗಳನ್ನು ಪ್ರತಿಷ್ಟಾಪಿಸಲಾಗಿತ್ತು.

ವನಕಲ್ಲು ಮಠದ ಶ್ರೀ ಬಸವ ರಮಾನಂದ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ನಂತರ ಮೆರವಣಿಗೆ ಶುರುವಾಗಿ ದಾರಿಯುದ್ದಕ್ಕೂ ಕಿಕ್ಕಿರಿದು ಸೇರಿದ್ದ ಜನರ ನಡುವೆ ಮೆರವಣಿಗೆ ಸಾಗಿತು. ಗೊಂಬೆಯಾಟ, ಉರುಮೆ ವಾದ್ಯ, ತಮಟೆ ವಾದ್ಯ, ವೀರಗಾಸೆ, ಚಂಡಿಮದ್ದಾಳೆ, ಡೊಳ್ಳು ಕುಣಿತ ಮುಂತಾದ ಹಲವು ಕಲಾತಂಡಗಳ ಜತೆಗೆ ಡಿಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು.

ಶ್ರೀಕೃಷ್ಣ ದೇವಸ್ಥಾನದಿಂದ ಹೊರಟ ಬೃಹತ್ ಯಾತ್ರೆ ವೇದಾವತಿ ನಗರದ ನೂರು ಅಡಿ ರಸ್ತೆ, ಚಳ್ಳಕೆರೆ ರಸ್ತೆ, ಅಂಬೇಡ್ಕರ್‌ವೃತ್ತ, ತಾಲೂಕು ಕಚೇರಿ ಮೂಲಕ ನಗರ ಪ್ರವೇಶಿಸಿ ಅಲ್ಲಿಂದ ಗಾಂಧಿ ಸರ್ಕಲ್, ಆಸ್ಪತ್ರೆ ವೃತ್ತ, ಮುಖ್ಯ ರಸ್ತೆ ಮೂಲಕ ಅದೇ ಮಾರ್ಗದಲ್ಲಿ ಶ್ರೀಕೃಷ್ಣ ದೇವಸ್ಥಾನ ತಲುಪುವ ಮೂಲಕ ಬೃಹತ್ ಮೆರವಣಿಗೆಗೆ ತೆರೆ ಎಳೆಯಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್, ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ವಿಜೆಎನ್ ಎಲ್ ನಿವೃತ್ತ ಎಂಡಿ ಸಣ್ಣಚಿತ್ತಯ್ಯ, ಹಿರಿಯ ಬಿಜೆಪಿ ಮುಖಂಡ ಎನ್.ಆರ್.ಲಕ್ಷ್ಮೀಕಾಂತ್, ಜೆಡಿಎಸ್ ಮುಖಂಡರಾದ ಡಿ.ಯಶೋಧರ್, ಎಂ.ರವೀಂದ್ರಪ್ಪ, ಸುಹಾಸ್ ಸುಧಾಕರ್, ಯತೀಶ್, ಶಂಕರಮೂರ್ತಿ, ಎಂ.ಜಯಣ್ಣ, ಬಿ.ಕೆ.ಕರಿಯಪ್ಪ, ಎಸ್.ಆರ್. ತಿಪ್ಪೇಸ್ವಾಮಿ ಹಾಗೂ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯವರು, ಗೊಲ್ಲ ಸಮುದಾಯದ ಮುಖಂಡರು ಹಾಜರಿದ್ದರು. ಭಕ್ತರಿಗೆ ಪ್ರಸಾದ್‌ ವ್ಯವಸ್ಥೆ:

ಶ್ರೀ ಕೃಷ್ಣ ಜಯಂತಿಯ ಅದ್ಧೂರಿ ಮೆರವಣಿಗೆಯಲ್ಲಿ ಭಕ್ತರಿಗೆ, ಸಾರ್ವಜನಿಕರಿಗೆ ಹಸಿವು ಮತ್ತು ದಾಹ ಆಗಬಾರದು ಎಂದು ಉಪ ಚುನಾವಣೆ ಜೆಡಿಎಸ್ ಟಿಕೆಟ್ ಆಕಾoಕ್ಷಿ ಜಿ ಜಯರಾಮಯ್ಯನವರು ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಿದ್ದರು. ಸುಮಾರು 7 ಸಾವಿರ ನೀರಿನ ಬಾಟಲ್‌, ಜನರಿಗೆ ಫಲಾಹಾರದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮೆರವಣಿಗೆಯ ದಾರಿಯುದ್ಧಕ್ಕೂ ಅಲ್ಲಲ್ಲಿ ಚಿಕ್ಕ ಚಿಕ್ಕ ಪೆಂಡಾಲ್ ಹಾಕಿಸಿ ಊಟ ಮತ್ತು ನೀರಿನ ವ್ಯವಸ್ಥೆ ಮಾಡಿದ್ದರು. ಮೆರವಣಿಗೆಯಲ್ಲಿ ರಕ್ಷಣೆಗೆ ನಿಂತ ಪೊಲೀಸರಿಗೂ ಊಟ ಮತ್ತು ನೀರಿನ ವ್ಯವಸ್ಥೆ ಮಾಡಿದ ಜಯರಾಮಯ್ಯನವರ ಮಾನವೀಯ ಗುಣವನ್ನು ನೆರೆದಿದ್ದವರು ಕೊಂಡಾಡಿದರು.