ಸಾರಾಂಶ
ಉಡುಪಿಯ ಕೃಷ್ಣಮಠದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಭಾಗವಾಗಿ ಪರ್ಯಾಯ ಶ್ರೀಗಳು ಮಧ್ಯರಾತ್ರಿ 12.11ರ ರೋಹಿಣಿ ನಕ್ಷತ್ರದ ಶುಭಮುಹೂರ್ತದಲ್ಲಿ ಕೃಷ್ಣನಿಗೆ ಪ್ರಧಾನ ಅರ್ಘ್ಯ ಪ್ರದಾನ ಮಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿಯ ಕೃಷ್ಣಮಠದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಭಾಗವಾಗಿ ಪರ್ಯಾಯ ಶ್ರೀಗಳು ಮಧ್ಯರಾತ್ರಿ 12.11ರ ರೋಹಿಣಿ ನಕ್ಷತ್ರದ ಶುಭಮುಹೂರ್ತದಲ್ಲಿ ಕೃಷ್ಣನಿಗೆ ಪ್ರಧಾನ ಅರ್ಘ್ಯ ಪ್ರದಾನ ಮಾಡಿದರು.ಇದಕ್ಕೆ ಮೊದಲು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನಿಗೆ ಚಾಮರ ಸೇವೆ ಮಾಡಿದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ರಾತ್ರಿ ಪೂಜೆ ನೆರವೇರಿಸಿದರು.
ನಂತರ ಹೊರಗೆ ತುಳಸಿಕಟ್ಟೆಯಲ್ಲಿ ಕೃಷ್ಣನ ಅವತಾರದ ಗಳಿಗೆಯನ್ನು ಸೃಷ್ಟಿಸಿದ ಚಂದ್ರನಿಗೂ ಅರ್ಘ್ಯ ಪ್ರದಾನ ಮಾಡಿದರು. ಅವರ ನಂತರ ಶ್ರೀ ಮಠದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ , ವಿಷ್ಣುಮೂರ್ತಿ ಉಪಾಧ್ಯ ಮೊದಲಾದವರು ಶ್ರೀ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿ, ತಮ್ಮ ಉಪವಾಸ ವ್ರತ ಕೊನೆಗೊಳಿಸಿದರು.ಸೋಮವಾರ ಮಧ್ಯಾಹ್ನ ಸಾವಿರಾರು ಜನರು ಶ್ರೀ ಕೃಷ್ಣ ಪ್ರಸಾದ ಭೋಜನ ಸ್ವೀಕರಿಸಿದರು, ಸ್ವತಃ ಉಭಯ ಶ್ರೀಗಳು ಭೋಜನ ಶಾಲೆಗೆ ಆಗಮಿಸಿ ಲಡ್ಡು ವಿತರಿಸಿ ಭೋಜನ ಪ್ರಸಾದಕ್ಕೆ ಚಾಲನೆ ನೀಡಿದರು. ರಥಬೀದಿಯಲ್ಲಿ ಸ್ವಾಮೀಜಿ ಅವರು ತಮ್ಮ ಕಣ್ಣಿಗೆ ಬಟ್ಟೆ ಕಟ್ಟಿಸಿಕೊಂಡು ಮಡಕೆ ಒಡೆಯುವ ಮೂಲಕ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಮಡಕೆ ಒಡೆವ ತುಂಟ ಕೃಷ್ಣ:ಭಾನುವಾರ ಕೃಷ್ಣನ ಹುಟ್ಟುಹಬ್ಬದ ಪ್ರಯುಕ್ತ ಪುತ್ತಿಗೆ ಮಠದ ಕಿರಿಯ ಶ್ರೀಗಳು ಕೃಷ್ಣನಿಗೆ ಅಂಬೆಗಾಲಿಕ್ಕುವ ಬಾಲಕೃಷ್ಣನ ಅಲಂಕಾರ ಮಾಡಿದ್ದರೆ, ಸೋಮವಾರ ಶ್ರೀ ಕೃಷ್ಣ ಲೀಲೋತ್ಸವ ಪ್ರಯುಕ್ತ ತೊಟ್ಟಿಲಿನಲ್ಲಿ ಕುಳಿತು ಮೊಸರುಕುಡಿಕೆ ಒಡೆದು ಬೆಣ್ಣೆ ಕದಿಯುವ ತುಂಟ ಕೃಷ್ಣನ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.